ಕಾಶ್ಮೀರ ಎಂದೆಂದಿಗೂ ಭಾರತದ ಅವಿಭಾಜ್ಯ ಅಂಗ, ಭಯೋತ್ಪಾದನೆ ಎಂದಿಗೂ ಗೆಲ್ಲುವುದಿಲ್ಲ: ಭಾರತ -ಪಾಕ್ ಮಾತುಕತೆ ನಡೆಸುವಂತೆ ಫಾರೂಕ್ ಅಬ್ದುಲ್ಲಾ ಆಗ್ರಹ

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಹಾಗೂ ಕಿಶ್ತ್ವಾರ್ ಜಿಲ್ಲೆಗಳಲ್ಲಿ ಇತ್ತೀಚೆಗೆ ನಡೆದ ಉಗ್ರರ ದಾಳಿಗಳ ಬೆನ್ನಲ್ಲೇ, ನ್ಯಾಷನಲ್ ಕಾನ್ಫರೆನ್ಸ್ (NC) ಅಧ್ಯಕ್ಷ ಹಾಗೂ ಜಮ್ಮು-ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ (Farooq Abdullah) ಭಾರತ ಮತ್ತು ಪಾಕಿಸ್ತಾನದ ನಡುವೆ ಅರ್ಥಪೂರ್ಣ ಮಾತುಕತೆ ನಡೆಸುವಂತೆ ಬಲವಾಗಿ ಪ್ರತಿಪಾದಿಸಿದ್ದಾರೆ. ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಣಿವೆಯಲ್ಲಿ ಭಯೋತ್ಪಾದನೆಯ ಬೆದರಿಕೆ ಇನ್ನೂ ಮುಂದುವರೆದಿದ್ದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ದೃಢವಾದ ಕ್ರಮಗಳ ಅಗತ್ಯವಿದೆ ಎಂದು ಹೇಳಿದರು.

ಕುಲ್ಗಾಮ್ ಮತ್ತು ಕಿಶ್ತ್ವಾರ್‌ನಲ್ಲಿ ನಡೆದ ಅವಳಿ ಉಗ್ರ ದಾಳಿಗಳಲ್ಲಿ ಇಬ್ಬರು ವಿಶೇಷ ಪೊಲೀಸ್ ಅಧಿಕಾರಿಗಳು (SPOs) ಹುತಾತ್ಮರಾಗಿ, ಮೂವರು ಸಿಆರ್‌ಪಿಎಫ್ (CRPF) ಯೋಧರು ಗಾಯಗೊಂಡಿರುವ ಘಟನೆಗೆ ಪ್ರತಿಕ್ರಿಯಿಸಿದ ಅಬ್ದುಲ್ಲಾ, ಭಯೋತ್ಪಾದನೆ ಪೋಷಿಸುವವರಿಗೆ ತೀಕ್ಷ್ಣ ಸಂದೇಶ ರವಾನಿಸಿದರು.  “ಕಾಶ್ಮೀರವನ್ನು ಕಸಿದುಕೊಳ್ಳುವ ದುರುದ್ದೇಶ ಹೊಂದಿರುವವರು ಅಂತಹ ಭ್ರಮೆಗಳನ್ನು ಬಿಟ್ಟುಬಿಡಬೇಕು. ಕಾಶ್ಮೀರ ಹಿಂದೆಯೂ ಭಾರತದ ಅವಿಭಾಜ್ಯ ಅಂಗವಾಗಿತ್ತು, ಇಂದಿಗೂ ಇದೆ ಮತ್ತು ಮುಂದೆಯೂ ಭಾರತದ ಅವಿಭಾಜ್ಯ ಅಂಗವಾಗಿಯೇ ಇರಲಿದೆ. ಭಯೋತ್ಪಾದನೆ ತನ್ನ ದುಷ್ಟ ಉದ್ದೇಶಗಳಲ್ಲಿ ಎಂದಿಗೂ ಯಶಸ್ವಿಯಾಗುವುದಿಲ್ಲ” ಎಂದು ಫಾರೂಕ್ ಅಬ್ದುಲ್ಲಾ ಗುಡುಗಿದ್ದಾರೆ.

Advertisement

ಭಯೋತ್ಪಾದನೆಯಿಂದ ಏನನ್ನೂ ಸಾಧಿಸಲು ಸಾಧ್ಯವಿಲ್ಲ. ಪಾಕಿಸ್ತಾನವು ಭಯೋತ್ಪಾದನೆಯನ್ನು ತ್ಯಜಿಸಿ, ಭಾರತದೊಂದಿಗೆ ಮಾತುಕತೆ ನಡೆಸಲು ಪೂರಕ ವಾತಾವರಣ ನಿರ್ಮಿಸುವತ್ತ ಕೆಲಸ ಮಾಡಬೇಕು ಎಂದು ಅವರು ಒತ್ತಾಯಿಸಿದರು.

ಇದನ್ನೂ ಓದಿ: ಕಾಶ್ಮೀರದ ಕುಲ್ಗಾಮ್‌ನಲ್ಲಿ CRPF ಚೆಕ್‌ಪೋಸ್ಟ್ ಮೇಲೆ ಭಯೋತ್ಪಾಕರ ದಾಳಿ: ಬೈಕ್‌ನಲ್ಲಿ ಬಂದ ಉಗ್ರರಿಂದ 42 ಸುತ್ತು ಫೈರಿಂಗ್

Advertisement

“ಎಲ್ಲರ ಗುಂಡು ನಿಲ್ಲುವವರೆಗೆ ಕಾಯುತ್ತಾ ಕೂತರೆ ರಾತ್ರಿಯಾಗಿಬಿಡುತ್ತದೆ!”: ಮಾತುಕತೆಗೆ ಕರೆ

ಜಮ್ಮು-ಕಾಶ್ಮೀರದಲ್ಲಿ ಭಯೋತ್ಪಾದನೆ ಅಂತ್ಯಗೊಂಡಿದೆ ಎಂಬ ಕೇಂದ್ರ ಸರ್ಕಾರದ ವಾದದ ಬಗ್ಗೆ ಕಳವಳ ವ್ಯಕ್ತಪಡಿಸಿದ ಅಬ್ದುಲ್ಲಾ. “ಇಂತಹ ಘಟನೆಗಳು ಈಗಲೂ ನಡೆಯುತ್ತಿವೆ ಎಂದು ನಾನು ಮೊದಲೇ ಹೇಳಿದ್ದೆ. ಮುಂದಿನ ದಾಳಿ ಎಲ್ಲಿ ನಡೆಯಬಹುದು ಎಂಬುದು ಯಾರಿಗೂ ತಿಳಿದಿಲ್ಲ. ಗುಂಡುಗಳು ಮತ್ತು ಸೇನಾ ಸಂಘರ್ಷದಿಂದ ರಾಜಕೀಯ ವಿವಾದಗಳನ್ನು ಬಗೆಹರಿಸಲು ಸಾಧ್ಯವಿಲ್ಲ” ಎಂದರು. “ಎಲ್ಲರ ಬಂದೂಕುಗಳ ಗುಂಡು ನಿಲ್ಲುವವರೆಗೆ ನೀವು ಕಾಯುತ್ತಾ ಕೂತರೆ, ಅಷ್ಟರಲ್ಲಿ ರಾತ್ರಿಯಾಗಿಬಿಡುತ್ತದೆ (ತಡವಾಗಿಬಿಡುತ್ತದೆ). ಮಾತುಕತೆಯ ಪ್ರಕ್ರಿಯೆ ಆರಂಭವಾಗಲೇಬೇಕು, ಏಕೆಂದರೆ ಚರ್ಚೆಯ ಮೂಲಕ ಮಾತ್ರ ಮುಂದಿನ ದಾರಿ ಕಂಡುಕೊಳ್ಳಲು ಸಾಧ್ಯ” ಎಂದು ಅವರು ಪ್ರತಿಪಾದಿಸಿದರು.

ದಕ್ಷಿಣ ಏಷ್ಯಾ ರಾಷ್ಟ್ರಗಳ ಒಕ್ಕೂಟವಾದ ಸಾರ್ಕ್ (SAARC) ಅನ್ನು ಪುನಶ್ಚೇತನಗೊಳಿಸುವಂತೆ ಫಾರೂಕ್ ಅಬ್ದುಲ್ಲಾ ಕರೆ ನೀಡಿದರು. ಹಿಂದೆ ಪರಸ್ಪರ ವೈರಿಗಳಾಗಿದ್ದ ದೇಶಗಳು ಸಹಕಾರದ ಮೂಲಕ ಒಂದಾಗಿ ಭವಿಷ್ಯ ನಿರ್ಮಿಸಿಕೊಂಡಿರುವ ಯುರೋಪಿಯನ್ ಯೂನಿಯನ್ ಅನ್ನು ಉದಾಹರಣೆಯಾಗಿ ನೀಡಿದ ಅವರು, “ನಾವೆಲ್ಲರೂ ಒಟ್ಟಿಗೆ ಕುಳಿತು ವಿವಾದಗಳನ್ನು ಬಗೆಹರಿಸಿಕೊಂಡು ಪ್ರಗತಿ ಮತ್ತು ಅಭಿವೃದ್ಧಿಯತ್ತ ಸಾಗಲು ಸಾರ್ಕ್ ಅನ್ನು ಪುನಶ್ಚೇತನಗೊಳಿಸಬೇಕು” ಎಂದು ಅಭಿಪ್ರಾಯಪಟ್ಟರು.

Advertisement

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ