ಬೆಂಗಳೂರು: ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಸಂಚಾರ ನಿಯಮಗಳನ್ನು ಬಿಗಿಗೊಳಿಸಲು ಮತ್ತು ಪ್ರಯಾಣಿಕರಿಂದ ಹೆಚ್ಚುವರಿ ಹಣ ವಸೂಲಿ ಮಾಡುವುದನ್ನು ತಡೆಯಲು ರಾಜ್ಯ ಸರ್ಕಾರ ಮುಂದಾಗಿದೆ. ಹೊಸ ವರ್ಷದಿಂದಲೇ ಅನ್ವಯವಾಗುವಂತೆ ಕ್ಯಾಬ್, ಆಟೋ ಮತ್ತು ದ್ವಿಚಕ್ರ ವಾಹನ ಸವಾರರಿಗೆ ಹಲವು ಕಠಿಣ ನಿಯಮಗಳನ್ನು ಜಾರಿಗೆ ತರಲು ಸಿದ್ಧತೆ ನಡೆದಿದೆ ಎಂದು ಸಾರಿಗೆ ಸಚಿವ ಬೈರತಿ ಸುರೇಶ್ ಇಂದು ಬೆಂಗಳೂರಿನಲ್ಲಿ ಮಹತ್ವದ ಘೋಷಣೆ ಮಾಡಿದ್ದಾರೆ.
ಆಟೋಗಳಂತೆಯೇ ಇನ್ನು ಮುಂದೆ ಬೆಂಗಳೂರಿನಲ್ಲಿ ಸಂಚರಿಸುವ ಓಲಾ (Ola), ಉಬರ್ (Uber), ನಮ್ಮ ಯಾತ್ರಿ (Namma Yatri) ಸೇರಿದಂತೆ ಎಲ್ಲಾ ಕ್ಯಾಬ್ಗಳಿಗೂ ಕಡ್ಡಾಯವಾಗಿ ಮೀಟರ್ ಅಳವಡಿಸಬೇಕು. ವಿಶೇಷವಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ (Airport) ರಸ್ತೆಯಲ್ಲಿ ಸಂಚರಿಸುವ ಕ್ಯಾಬ್ಗಳು ಹಾಗೂ ವಿಯೆಟ್ನಾಂ ಮೂಲದ ‘ಗ್ರೀನ್ ಎಸ್ಎಂ’ (Green SM) ಕಂಪನಿಯ ಕ್ಯಾಬ್ಗಳಿಗೂ ಮೀಟರ್ ಕಡ್ಡಾಯಗೊಳಿಸಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.

ಪ್ರಯಾಣಿಕರಿಂದ ನಿಗದಿತ ದರಕ್ಕಿಂತ ಹೆಚ್ಚಿನ ಹಣ ವಸೂಲಿ ಮಾಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಮೀಟರ್ ಅಳವಡಿಕೆ ಸಂಬಂಧ ಕರಡು ನಿಯಮ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದ್ದು, ಮೀಟರ್ ಇಲ್ಲದೆ ಆಟೋ ಅಥವಾ ಕ್ಯಾಬ್ ಓಡಿಸಿದರೆ ಭಾರಿ ದಂಡ ವಿಧಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಪಾದಚಾರಿಗಳಿಗೆ ಮೀಸಲಾಗಿರುವ ಫುಟ್ಪಾತ್ ಮೇಲೆ ಬೈಕ್ ಅಥವಾ ಇತರೆ ವಾಹನಗಳನ್ನು ಚಲಾಯಿಸುವವರಿಗೆ ಬಿಸಿ ಮುಟ್ಟಿಸಲು ಸರ್ಕಾರ ದಂಡದ ಮೊತ್ತವನ್ನು ಭಾರಿ ಪ್ರಮಾಣದಲ್ಲಿ ಏರಿಸಲು ನಿರ್ಧರಿಸಿದೆ. ಈ ಹಿಂದೆ ₹1,000 ಇದ್ದ ದಂಡವನ್ನು ₹5,000ಕ್ಕೆ ಹೆಚ್ಚಿಸುವ ಪ್ರಸ್ತಾವನೆ ಇದೆ.

ಇದನ್ನೂ ಓದಿ: ಬೈಕ್ ಸವಾರರಿಗೆ ಬಿಗ್ ಅಲರ್ಟ್: ರಾಜ್ಯದಲ್ಲಿ ಅರ್ಧ ಹೆಲ್ಮೆಟ್ ಬ್ಯಾನ್
ಮೊದಲ ಬಾರಿ ಉಲ್ಲಂಘನೆ: ₹5,000 ದಂಡ.

ಎರಡನೇ ಬಾರಿ ಉಲ್ಲಂಘನೆ: ₹10,000 ದಂಡ.
ಮೂರನೇ ಅಥವಾ ನಾಲ್ಕನೇ ಬಾರಿ ಉಲ್ಲಂಘನೆ: ವಾಹನವನ್ನೇ ಜಪ್ತಿ (Seize) ಮಾಡಲು ನಿರ್ಧರಿಸಲಾಗಿದೆ.
ರಾಜ್ಯಾದ್ಯಂತ ಹಾಫ್ ಹೆಲ್ಮೆಟ್ ಬ್ಯಾನ್: ಫ್ಯಾಕ್ಟರಿಗಳಿಗೂ ಬೀಗ!
ಅಪಘಾತಗಳ ಸಂದರ್ಭದಲ್ಲಿ ಸವಾರರ ತಲೆಗೆ ಹೆಚ್ಚಿನ ಪೆಟ್ಟು ಬೀಳುತ್ತಿರುವ ಹಿನ್ನೆಲೆಯಲ್ಲಿ, ಇನ್ನು ಮುಂದೆ ರಾಜ್ಯಾದ್ಯಂತ ಅಸುರಕ್ಷಿತ ಹಾಫ್ ಹೆಲ್ಮೆಟ್ (Half Helmet) ಧರಿಸಿ ಬೈಕ್ ಚಲಾಯಿಸುವುದಕ್ಕೆ ಸಂಪೂರ್ಣ ನಿಷೇಧ ಹೇರಲು ಸರ್ಕಾರ ನಿರ್ಧರಿಸಿದೆ. ಕೇವಲ ಬಳಕೆಯನ್ನು ತಡೆಯುವುದಷ್ಟೇ ಅಲ್ಲದೆ, ರಾಜ್ಯದಲ್ಲಿರುವ ಹಾಫ್ ಹೆಲ್ಮೆಟ್ ತಯಾರಿಕಾ ಕೇಂದ್ರಗಳನ್ನೂ ಬಂದ್ ಮಾಡಲು ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


