ಬೆಂಗಳೂರು: ಸಿಲಿಕಾನ್ ಸಿಟಿ ಬೆಚ್ಚಿಬೀಳಿಸಿದ್ದ ರಿಯಲ್ ಎಸ್ಟೇಟ್ ಉದ್ಯಮಿ ಚರಣ್ (35) ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಫೋಟಕ ಸತ್ಯ ಹೊರಹಾಕಿದ್ದಾರೆ. ಪತ್ನಿಯ ಕಣ್ಣೆದುರೇ ಹಾಡಹಗಲೇ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದ ಕೃತ್ಯದ ಹಿಂದೆ ಬರೋಬ್ಬರಿ ₹30 ಲಕ್ಷದ ಸುಪಾರಿ (Contract Killing) ಡೀಲ್ ಇರುವುದು ತನಿಖೆಯಿಂದ ಬಯಲಾಗಿದೆ. ಮೃತ ಚರಣ್ ಅವರೊಂದಿಗೆ ಪಾಲುದಾರರಾಗಿ ರಿಯಲ್ ಎಸ್ಟೇಟ್ ವ್ಯವಹಾರ ನಡೆಸುತ್ತಿದ್ದ ಕಿರಣ್ ಎಂಬಾತನೇ ಈ ಕೊಲೆಗೆ ಸುಪಾರಿ ನೀಡಿರುವ ಪ್ರಮುಖ ಆರೋಪಿ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು ಐವರು ಆರೋಪಿಗಳನ್ನು ಯಲಹಂಕ ನ್ಯೂ ಟೌನ್ ಪೊಲೀಸರು ಬಂಧಿಸಿದ್ದಾರೆ.
ವ್ಯವಹಾರದ ಭಿನ್ನಾಭಿಪ್ರಾಯ ಹಾಗೂ ಕೋಟ್ಯಂತರ ಹಣದ ವಂಚನೆ ಆರೋಪ!

ಮೃತ ಚರಣ್ ಮತ್ತು ಸುಪಾರಿ ನೀಡಿದ ಆರೋಪಿ ಕಿರಣ್ ಇಬ್ಬರೂ ಒಟ್ಟಿಗೆ ರಿಯಲ್ ಎಸ್ಟೇಟ್ ಉದ್ಯಮ ನಡೆಸುತ್ತಿದ್ದರು. ಆದರೆ, ಇಬ್ಬರ ನಡುವಿನ ವ್ಯವಹಾರಿಕ ವಿಚಾರಗಳಲ್ಲಿ ತೀವ್ರ ಭಿನ್ನಾಭಿಪ್ರಾಯ ಉಂಟಾಗಿತ್ತು. ಚರಣ್ ತನಗೆ ಕೋಟ್ಯಂತರ ರೂಪಾಯಿ ವಂಚನೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಕಿರಣ್, ಆ ಬಳಿಕ ಅವರೊಂದಿಗಿನ ವ್ಯವಹಾರದಿಂದ ಹೊರಬಂದಿದ್ದನು. ವ್ಯವಹಾರದಿಂದ ದೂರ ಉಳಿದರೂ ಚರಣ್ ಮೇಲಿನ ದ್ವೇಷ ಸಾಧಿಸುತ್ತಿದ್ದ ಕಿರಣ್, ಹೇಗಾದರೂ ಮಾಡಿ ಅವರನ್ನು ಮುಗಿಸಲು ಸಂಚು ರೂಪಿಸಿದ್ದನು.
₹30 ಲಕ್ಷದ ಸುಪಾರಿ ಡೀಲ್ ನಡೆದದ್ದು ಹೇಗೆ?: ಹಂತಕರ ಖತರ್ನಾಕ್ ಪ್ಲ್ಯಾನ್!

ಚರಣ್ ಹತ್ಯೆಗಾಗಿ ಕಿರಣ್, ರುದ್ರೇಶ್ ಎಂಬಾತನ ಜೊತೆ ಮಾತುಕತೆ ನಡೆಸಿ ₹30 ಲಕ್ಷಕ್ಕೆ ಸುಪಾರಿ ನಿಗದಿಪಡಿಸಿದ್ದನು. ಈ ಡೀಲ್ ಪಡೆದ ರುದ್ರೇಶ್, ಬಳಿಕ ಲೋಕೇಶ್ ಜೊತೆ ಕೈಜೋಡಿಸಿದ್ದನು. ನಂತರ ಆಕಾಶ್ ಮತ್ತು ಕಿರಣ್ ಸೇರಿದಂತೆ ಇತರೆ ಆರೋಪಿಗಳ ಮೂಲಕ ಕೃತ್ಯ ಎಸಗಲು ಮಾಸ್ಟರ್ ಪ್ಲ್ಯಾನ್ ರೂಪಿಸಲಾಗಿತ್ತು. ಉದ್ಯಮಿ ಚರಣ್ ಅವರ ಚಲನವಲನಗಳನ್ನು ನಿರಂತರವಾಗಿ ಗಮನಿಸುತ್ತಿದ್ದ ಆರೋಪಿಗಳು, ನವೆಂಬರ್ 13ರಂದು ಬೆಳಗ್ಗೆ ಚರಣ್ ಅವರು ಯಲಹಂಕ ನ್ಯೂ ಟೌನ್ನಲ್ಲಿರುವ ತಮ್ಮ ಕಚೇರಿಗೆ ಆಗಮಿಸುತ್ತಿದ್ದ ವೇಳೆ ಹೊಂಚು ಹಾಕಿ ಮುಗಿಬೆದಿದ್ದರು. ಲಾಂಗ್ ಮತ್ತು ಮಚ್ಚಿನಿಂದ ಮನಬಂದಂತೆ ಹಲ್ಲೆ ನಡೆಸಿ ಪತ್ನಿಯ ಕಣ್ಣೆದುರೇ ಬರ್ಬರವಾಗಿ ಹತ್ಯೆಗೈದು ಪರಾರಿಯಾಗಿದ್ದರು. ಈ ಕುರಿತು ಯಲಹಂಕ ನ್ಯೂ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಪೊಲೀಸರಿಂದ 5 ಆರೋಪಿಗಳ ಬಂಧನ: ಮುಂದುವರಿದ ತನಿಖೆ!
ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಯಲಹಂಕ ನ್ಯೂ ಟೌನ್ ಠಾಣೆಯ ಪೊಲೀಸರು, ತಾಂತ್ರಿಕ ಮಾಹಿತಿ ಹಾಗೂ ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಜಾಲಬೆಸೆದು ಕೃತ್ಯದಲ್ಲಿ ಭಾಗಿಯಾಗಿದ್ದ ಪ್ರಮುಖ ಸುಪಾರಿ ಕಿರಣ್ ಸೇರಿದಂತೆ ಐವರು ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಬಂಧಿತರಿಂದ ಕೃತ್ಯಕ್ಕೆ ಬಳಸಿದ ವಾಹನ ಹಾಗೂ ಆಯುಧಗಳ ಕುರಿತು ವಿಚಾರಣೆ ಮುಂದುವರಿದಿದ್ದು, ಪೊಲೀಸರು ಹೆಚ್ಚಿನ ತನಿಖೆ ಕೈಗೊಂಡಿದ್ದಾರೆ.

