ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ (Kulgam) ಜಿಲ್ಲೆಯಲ್ಲಿಂದು ಬೆಳಗಿನ ಜಾವ ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಭೀಕರ ಗುಂಡಿನ ಚಕಮಕಿ (Encounter) ಆರಂಭವಾಗಿದೆ. ನವೆಂಬರ್ 11ರಂದು ಸಿಆರ್ಪಿಎಫ್ (CRPF) ಚೆಕ್ಪೋಸ್ಟ್ ಮೇಲೆ ನಡೆದ ದಾಳಿಯ ಪ್ರಮುಖ ರೂವಾರಿ ಹಾಗೂ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್ ಲತೀಫ್ ಭಟ್ ಮಸೀದಿಯೊಂದರ ಒಳಗೆ ಅಡಗಿಕೊಂಡಿದ್ದು, ಭದ್ರತಾ ಪಡೆಗಳು ಇಡೀ ಪ್ರದೇಶವನ್ನು ಸುತ್ತುವರಿದಿವೆ. ಇದೀಗ ಆತನನ್ನು ಹತ್ಯೆ ಮಾಡಲಾಗಿದೆ.
“ನಾವು ನಿನ್ನೊಂದಿಗಿದ್ದೇವೆ, ಶರಣಾಗು” ಎಂದ ಪೊಲೀಸ್ ಅಧಿಕಾರಿ: ಉಗ್ರ ನೀಡಿದ ಉತ್ತರವೇನು?

ಮಸೀದಿಯೊಳಗೆ ಅಡಗಿದ್ದ ಉಗ್ರ ಲತೀಫ್ ಭಟ್ನನ್ನು ಜೀವಂತವಾಗಿ ಸೆರೆಹಿಡಿಯಲು ಭದ್ರತಾ ಪಡೆಗಳು ಸಾಕಷ್ಟು ಪ್ರಯತ್ನ ನಡೆಸಿತ್ತು. ಸ್ವತಃ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ (SSP) ಅನಾಯತ್ ಅಲಿ ಅವರು ಉಗ್ರನಿಗೆ ವಿಡಿಯೋ ಕಾಲ್ ಮಾಡಿ ಶರಣಾಗುವಂತೆ ಮನವಿ ಮಾಡಿದ್ದರು. ವಿಡಿಯೋ ಕರೆಯಲ್ಲಿ ಪೊಲೀಸ್ ಅಧಿಕಾರಿಯೊಬ್ಬರು “ಹಮ್ ತುಮ್ಹಾರೇ ಸಾಥ್ ಹೈ” (ನಾವು ನಿನ್ನೊಂದಿಗಿದ್ದೇವೆ, ನಿನ್ನ ಮುಂದೆ ಇನ್ನೂ ದೊಡ್ಡ ಬದುಕಿದೆ, ನೀನು ಇನ್ನೂ ಚಿಕ್ಕವನಿದ್ದೀಯಾ, ಶರಣಾಗು) ಎಂದು ಮನವೊಲಿಸಲು ಯತ್ನಿಸಿದ್ದಾರೆ. ಆದರೆ ಶರಣಾಗಲು ನಿರಾಕರಿಸಿದ ಉಗ್ರ ಲತೀಫ್ ಭಟ್, “ಮುಝೆ ಅಲ್ಲಾಹ್ ಸೆ ಮುಲಾಕಾತ್ ಕರ್ನಾ ಹೈ, ಮೈ ಬಹುತ್ ಖುಷ್ ಹೂ” (ನನಗೆ ಅಲ್ಲಾಹನನ್ನು ಭೇಟಿಯಾಗಬೇಕು, ನಾನು ತುಂಬಾ ಸಂತೋಷವಾಗಿದ್ದೇನೆ) ಎಂದು ಉತ್ತರಿಸಿದ್ದಾನೆ.
ಮಸೀದಿಯ ಹೊರಗಿನಿಂದ ಧ್ವನಿವರ್ಧಕಗಳ ಮೂಲಕವೂ ಶರಣಾಗುವಂತೆ ಸೂಚನೆ ನೀಡಲಾಯಿತು. ಆದರೆ ಬೆಳಗಿನ ಜಾವ 2:45ರ ಸುಮಾರಿಗೆ ಉಗ್ರ ಮಸೀದಿಯೊಳಗಿಂದಲೇ ಭದ್ರತಾ ಪಡೆಗಳ ಮೇಲೆ ಗುಂಡಿನ ದಾಳಿ ಆರಂಭಿಸಿದ್ದು, ಪ್ರತಿ-ಕಾರ್ಯಾಚರಣೆ ಮುಂದುವರಿದಿದೆ. ಮಸೀದಿಯ ಪಾವಿತ್ರ್ಯತೆಗೆ ಧಕ್ಕೆಯಾಗದಂತೆ ಭದ್ರತಾ ಪಡೆಗಳು ಅತ್ಯಂತ ಸಂಯಮದಿಂದ ಕಾರ್ಯಾಚರಣೆ ನಡೆಸುತ್ತಿವೆ ಎಂದು ಎಸ್ಎಸ್ಪಿ ತಿಳಿಸಿದ್ದಾರೆ.

ಯಾರು ಈ ಉಗ್ರ ಲತೀಫ್ ಭಟ್? ಸಿಆರ್ಪಿಎಫ್ ದಾಳಿಯ ಸಿಸಿಟಿವಿ ದೃಶ್ಯ ಬಯಲು!

ಸೋಮವಾರವಷ್ಟೇ ಕುಲ್ಗಾಮ್ನಲ್ಲಿ ನಡೆದ ಎನ್ಕೌಂಟರ್ನಲ್ಲಿ ಲತೀಫ್ ಭಟ್ನ ಸಹಚರ ಉಮರ್ ನಿಸಾರ್ ದಾರ್ ಹತನಾಗಿದ್ದ. ನವೆಂಬರ್ 11ರಂದು ಅಖ್ರಾನ್ (Akhran) ಬಳಿಯ ಸಿಆರ್ಪಿಎಫ್ ನಾಕಾ ಮೇಲೆ ದಾಳಿ ನಡೆಸಿ ಮೂವರು ಯೋಧರನ್ನು ಗಾಯಗೊಳಿಸುವ ಮುನ್ನ, ನವೆಂಬರ್ 10ರಂದು ಮೀರ್ ಬಜಾರ್, ಅಖ್ರಾನ್, ಹಬ್ಲಿಶ್ ಮತ್ತು ಕಿಲಾಮ್ ಪ್ರದೇಶಗಳಲ್ಲಿ ಈ ಇಬ್ಬರು ಉಗ್ರರು ರೆಕ್ಕಿ (Recce) ನಡೆಸಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಮಂಗಳವಾರ ಬಿಡುಗಡೆ ಮಾಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ 500ಕ್ಕೂ ಹೆಚ್ಚು ಶಂಕಿತರನ್ನು ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ. ಸ್ಥಳೀಯ ಉಗ್ರನಾಗಿರುವ ಲತೀಫ್ ಭಟ್, ಕಳೆದ ಜುಲೈ 22ರಂದು ಅನಂತನಾಗ್ನಲ್ಲಿ ಪೊಲೀಸರ ಮೇಲೆ ನಡೆದ ಭಯೋತ್ಪಾದಕ ದಾಳಿಯಲ್ಲೂ ಭಾಗಿಯಾಗಿದ್ದ; ಆ ದಾಳಿಯಲ್ಲಿ ಓರ್ವ ಪೊಲೀಸ್ ಸಿಬ್ಬಂದಿ ಹುತಾತ್ಮರಾಗಿದ್ದರು.

