ಅಯೋಧ್ಯೆ–ಜನಕಪುರ ನಡುವೆ ನೂತನ ರೈಲು ಸಂಚಾರ ಆರಂಭ; ಪ್ರವಾಹ ಪೀಡಿತ ನೇಪಾಳದ ಪುನರ್ನಿರ್ಮಾಣಕ್ಕೆ ಭಾರತದಿಂದ ಬೃಹತ್ ಆರ್ಥಿಕ ಪ್ಯಾಕೇಜ್

ನವದೆಹಲಿ: ಭಾರತ ಮತ್ತು ನೇಪಾಳ ನಡುವಿನ ಐತಿಹಾಸಿಕ ಹಾಗೂ ಸಾಂಸ್ಕೃತಿಕ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೆರೆಯ ನೇಪಾಳಕ್ಕೆ ಬೃಹತ್ ಆರ್ಥಿಕ ನೆರವು ಘೋಷಿಸಿದ್ದಾರೆ. ಕಳೆದ ಆಗಸ್ಟ್‌ನಲ್ಲಿ ನೇಪಾಳದಲ್ಲಿ ಸಂಭವಿಸಿದ ಭೀಕರ ಪ್ರವಾಹದಿಂದ ಉಂಟಾದ ಜೀವಹಾನಿಗೆ ತೀವ್ರ ಸಂತಾಪ ಸೂಚಿಸಿದ ಪ್ರಧಾನಿ ಮೋದಿ, ದೇಶದ ಪುನರ್ನಿರ್ಮಾಣ ಮತ್ತು ದೀರ್ಘಕಾಲೀನ ಅಭಿವೃದ್ಧಿಗೆ ಬೆಂಬಲವಾಗಿ 24,000 ಕೋಟಿ ನೇಪಾಳಿ ರೂಪಾಯಿ ಮೌಲ್ಯದ ಅಭಿವೃದ್ಧಿ ಸಹಕಾರ ಪ್ಯಾಕೇಜ್ (Development Cooperation Package) ಘೋಷಿಸಿದ್ದಾರೆ.

ಅಯೋಧ್ಯಾ ಧಾಮ – ಜನಕಪುರ ಧಾಮ ನಡುವೆ ಹೊಸ ರೈಲು ಸೇವೆಗೆ ಚಾಲನೆ:

Advertisement

ಸೋಮವಾರ (ನವೆಂಬರ್ 23) ಪ್ರಧಾನಿ ನರೇಂದ್ರ ಮೋದಿ ಮತ್ತು ನೇಪಾಳ ಪ್ರಧಾನಿ ಬಾಲೇನ್ ಶಾ (Balen Shah) ಅವರು ಜಂಟಿಯಾಗಿ ಭಾರತದ ಅಯೋಧ್ಯಾ ಧಾಮ ಮತ್ತು ನೇಪಾಳದ ಜನಕಪುರ ಧಾಮ ನಡುವೆ ನೂತನ ರೈಲು ಸೇವೆಯನ್ನು ಉದ್ಘಾಟಿಸಿದರು. ರಾಮಾಯಣ ಸರ್ಕ್ಯೂಟ್‌ನ ಪ್ರಮುಖ ಧಾರ್ಮಿಕ ಕೇಂದ್ರಗಳನ್ನು ಬೆಸೆಯುವ ಈ ರೈಲು ಸೇವೆಯು ಎರಡು ನೆರೆಯ ರಾಷ್ಟ್ರಗಳ ನಡುವಿನ ರೈಲು ಸಂಪರ್ಕವನ್ನು ಮತ್ತಷ್ಟು ಬಲಪಡಿಸಲಿದ್ದು, ಗಡಿಯಾಚೆಗಿನ ರೈಲ್ವೆ ಜಾಲವನ್ನು ವಿಸ್ತರಿಸುವಲ್ಲಿ ಮಹತ್ವದ ಹೆಜ್ಜೆಯಾಗಿದೆ.

ಪ್ರಧಾನಿ ಮೋದಿ – ಬಾಲೇನ್ ಶಾ ದ್ವಿಪಕ್ಷೀಯ ಮಾತುಕತೆ

Advertisement

ಭಾರತ ಪ್ರವಾಸದಲ್ಲಿರುವ ನೇಪಾಳ ಪ್ರಧಾನಿ ಬಾಲೇನ್ ಶಾ ಅವರು ಸೋಮವಾರ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮಹತ್ವದ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಭಾರತ-ನೇಪಾಳ ಸಂಬಂಧಗಳ ಸಂಪೂರ್ಣ ಆಯಾಮಗಳನ್ನು ಪರಿಶೀಲಿಸಲಾಗುತ್ತಿದ್ದು, ಪರಸ್ಪರ ಹಿತಾಸಕ್ತಿಯ ಪ್ರಾದೇಶಿಕ ಮತ್ತು ಅಂತರರಾಷ್ಟ್ರೀಯ ವಿಷಯಗಳ ಕುರಿತು ಅಭಿಪ್ರಾಯ ವಿನಿಮಯ ಮಾಡಿಕೊಳ್ಳಲಿದ್ದಾರೆ. ಅಲ್ಲದೆ, ಬಾಲೇನ್ ಶಾ ಅವರು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನೂ ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ:ನೇಪಾಳ ಜಲಪ್ರಳಯ: ತಂದೆ-ತಾಯಿ ಮೃತಪಟ್ಟಿರುವುದು ತಿಳಿಯದೆ ಕಾಯುತ್ತಿರುವ 12 ವರ್ಷದ ಪೋರ

Advertisement

ಜಲವಿದ್ಯುತ್, ವಾಯುಮಾರ್ಗ ಮತ್ತು ಮೂಲಸೌಕರ್ಯ ಸಹಕಾರ ವೃದ್ಧಿಗೆ ಒತ್ತು:

ಜಲವಿದ್ಯುತ್ (Hydropower), ರೈಲ್ವೆ, ಮೂಲಸೌಕರ್ಯ ಮತ್ತು ಗಡಿಯಾಚೆಗಿನ ಸಂಪರ್ಕ ಕ್ಷೇತ್ರಗಳಲ್ಲಿ ಸಹಕಾರವನ್ನು ಆಳಗೊಳಿಸುವ ಮಾರ್ಗಗಳನ್ನು ಭಾರತ ಮತ್ತು ನೇಪಾಳ ಅನ್ವೇಷಿಸುತ್ತಿವೆ. ಈಗಾಗಲೇ ಪೂರ್ಣಗೊಂಡಿರುವ ಹಲವು ಯೋಜನೆಗಳನ್ನು ಉದ್ಘಾಟಿಸುವ ನಿರೀಕ್ಷೆಯಿದ್ದು, ಹೊಸ ಅಭಿವೃದ್ಧಿ ಉಪಕ್ರಮಗಳಿಗೆ ಚಾಲನೆ ನೀಡುವ ಸಾಧ್ಯತೆಯಿದೆ. ವಿಶೇಷವಾಗಿ ಪಶ್ಚಿಮ ನೇಪಾಳಕ್ಕೆ ವಿಮಾನ ಸಂಪರ್ಕವನ್ನು ಸುಧಾರಿಸುವ ನಿಟ್ಟಿನಲ್ಲಿ ಭಾರತೀಯ ವಾಯುಪ್ರದೇಶದ ಮೂಲಕ ಹೆಚ್ಚುವರಿ ವಾಯು-ಪ್ರವೇಶ ಮಾರ್ಗಗಳನ್ನು (Air-entry routes) ಪಡೆಯಲು ನೇಪಾಳ ಪ್ರಯತ್ನಿಸುತ್ತಿದ್ದು, ಈ ಬಗ್ಗೆಯೂ ಮಾತುಕತೆ ನಡೆಯಲಿದೆ. ನೈಸರ್ಗಿಕ ವಿಕೋಪಗಳ ನಂತರದ ಪುನರ್ನಿರ್ಮಾಣಕ್ಕೆ ಹಣಕಾಸು ಮತ್ತು ಅಭಿವೃದ್ಧಿ ನೆರವು ಉಭಯ ದೇಶಗಳ ನಡುವಿನ ಸಹಕಾರದ ಪ್ರಮುಖ ಭಾಗವಾಗಿದೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್‌ ಮಾಡಿ