Breaking News

ನೇಪಾಳ ಜಲಪ್ರಳಯ: ತಂದೆ-ತಾಯಿ ಮೃತಪಟ್ಟಿರುವುದು ತಿಳಿಯದೆ ಕಾಯುತ್ತಿರುವ 12 ವರ್ಷದ ಪೋರ

ಖಠ್ಮಂಡು: ಆಗಸ್ಟ್ 26 ರಂದು ನೇಪಾಳ-ಟಿಬೆಟ್ ಗಡಿಭಾಗದಲ್ಲಿ ಹಿಮನದಿ (Glacial Ice) ಹಾಗೂ ಬಂಡೆಗಳು ಕುಸಿದು ಹರಿದ ಭೀಕರ ರಭಸದ ಫ್ಲ್ಯಾಶ್ ಫ್ಲಡ್‌ಗೆ (Flash Floods) ರಸುವಾ ಪ್ರದೇಶದ ನೂರಾರು ಗ್ರಾಮಗಳು ಕೊಚ್ಚಿಹೋಗಿವೆ. ಈ ವಿಕೋಪಕ್ಕೆ ನೇಪಾಳ ಒಂದರಲ್ಲೇ 1,300ಕ್ಕೂ ಹೆಚ್ಚು ಜನರು ಬಲಿಯಾಗಿದ್ದು, ಸಾವಿರಾರು ಜನರು ಇಂದಿಗೂ ಪತ್ತೆಯಾಗಿಲ್ಲ. ಈ ಮಹಾ ದುರಂತದ ನಡುವೆ ಖಠ್ಮಂಡುವಿನ ನಿರಾಶ್ರಿತರ ಶಿಬಿರದಲ್ಲಿ ಆಶ್ರಯ ಪಡೆದಿರುವ 12 ವರ್ಷದ ತ್ಸೆರಿಂಗ್ (Tsering) ಎಂಬ ಬಾಲಕನ ದಾರುಣ ಕಥೆ ಪ್ರತಿಯೊಬ್ಬರ ಕಣ್ಣಂಚಿನಲ್ಲಿ ನೀರು ತರಿಸುವಂತಿದೆ.

ಪ್ರವಾಹಕ್ಕೆ ಸಿಲುಕಿ ತ್ಸೆರಿಂಗ್‌ನ ತಂದೆ-ತಾಯಿ ಇಬ್ಬರೂ ಮೃತಪಟ್ಟಿದ್ದಾರೆ. ಪ್ರಸ್ತುತ ಈ ಬಾಲಕ ತಂದೆಯ ಅಜ್ಜಿ ಹಾಗೂ ದೊಡ್ಡಮ್ಮ ಮಿಂಗ್ಮಾರ್ ಡೋಲ್ಮಾ ಅವರೊಂದಿಗೆ ನಿರಾಶ್ರಿತರ ಶಿಬಿರದಲ್ಲಿದ್ದಾನೆ.”ಆತನ ತಂದೆ-ತಾಯಿ ಇಬ್ಬರೂ ಈಗ ಈ ಜಗತ್ತಿನಲ್ಲಿ ಇಲ್ಲ ಎಂಬ ಸತ್ಯ ನಮಗೆ ಗೊತ್ತು, ಆದರೆ ತ್ಸೆರಿಂಗ್‌ಗೆ ಇನ್ನು ವಿಷಯ ತಿಳಿದಿಲ್ಲ. ಆತ ಇಂದಿಗೂ ತಂದೆ-ತಾಯಿ ಮನೆಗೆ ಹಿಂತಿರುಗುತ್ತಾರೆ ಎಂದು ಕಾಯುತ್ತಿದ್ದಾನೆ” ಎಂದು ದೊಡ್ಡಮ್ಮ ಮಿಂಗ್ಮಾರ್ ಕಣ್ಣೀರಿಡುತ್ತಾರೆ.

ರಸುವಾ ಪ್ರದೇಶದಲ್ಲಿ ಮನೆ-ಮಠ, ಸೇತುವೆ ಮತ್ತು ರಸ್ತೆಗಳನ್ನು ಕಳೆದುಕೊಂಡ 520ಕ್ಕೂ ಹೆಚ್ಚು ನಿರಾಶ್ರಿತರು ಪ್ರಸ್ತುತ ಖಠ್ಮಂಡುವಿನ ಬೌದ್ಧ ಮಠವೊಂದರಲ್ಲಿ ಆಶ್ರಯ ಪಡೆದಿದ್ದಾರೆ. ಈ ಮಠದಲ್ಲೇ ಪ್ರತ್ಯೇಕ ಮಾಹಿತಿ ಕೇಂದ್ರ ತೆರೆಯಲಾಗಿದ್ದು, ಬದುಕುಳಿದವರ ಹೆಸರನ್ನು ನೋಂದಾಯಿಸಲಾಗುತ್ತಿದೆ. ಇದು ನಾಪತ್ತೆಯಾದ ಸಂಬಂಧಿಕರನ್ನು ಹುಡುಕಲು ನೆರವಾಗಲಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ‘ಹೈಕೋರ್ಟ್ ಪೀಠ’ ಸ್ಥಾಪನೆಗೆ ಆಗ್ರಹ: ರಾಜ್ಯಸಭಾ ಸಂಸದ ಡಾ. ಎಂ. ನಾಗರಾಜ್‌ಗೆ ಮನವಿ ಸಲ್ಲಿಕೆ

ವೈದ್ಯರ ತಂಡ ನಿರಾಶ್ರಿತರ ಆರೈಕೆ ಮಾಡುತ್ತಿದ್ದು, ನೂರಾರು ಜನರಿಗೆ ದಿನದ ಮೂರು ಹೊತ್ತಿನ ಊಟವನ್ನು ಪ್ರತ್ಯೇಕ ಸಮುದಾಯ ಅಡುಗೆಮನೆಯಲ್ಲಿ ತಯಾರಿಸಿ ವಿತರಿಸಲಾಗುತ್ತಿದೆ. ಪೋಷಕರನ್ನು ಹಾಗೂ ಮನೆಗಳನ್ನು ಕಳೆದುಕೊಂಡು ಕಂಗಾಲಾಗಿರುವ ಸಣ್ಣ ಮಕ್ಕಳಿಗೆ ದುಃಖ ಮರೆಸಲು ಟ್ರಾಂಪೊಲೈನ್, ಫುಟ್‌ಬಾಲ್, ಆಟಿಕೆಗಳು ಹಾಗೂ ಕಟ್ಟಡದ ಬ್ಲಾಕ್‌ಗಳನ್ನು ಒದಗಿಸಲಾಗಿದೆ. ಮಕ್ಕಳು ಆಟವಾಡುತ್ತಾ ತಮ್ಮ ಕಹಿ ನೆನಪುಗಳನ್ನು ಮರೆಯಲು ಯತ್ನಿಸುತ್ತಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *