Breaking News

ಕಬಕ ಪುತ್ತೂರಿನಲ್ಲಿ ‘ಬೆಂಗಳೂರು-ಮಂಗಳೂರು ವಂದೇ ಭಾರತ್’ ನಿಲುಗಡೆಗೆ ಆಗ್ರಹ: ಕೇಂದ್ರ ಸಚಿವರಿಗೆ ಶಾಸಕ ಕಿಶೋರ್ ಕುಮಾರ್ ಮನವಿ

ಪುತ್ತೂರು: ಪ್ರಸ್ತಾವಿತ ‘ಬೆಂಗಳೂರು–ಮಂಗಳೂರು ವಂದೇ ಭಾರತ್ ಎಕ್ಸ್‌ಪ್ರೆಸ್’ ರೈಲಿಗೆ ದಕ್ಷಿಣ ಕನ್ನಡ ಜಿಲ್ಲೆಯ ಗ್ರಾಮೀಣ ಭಾಗದ ಪ್ರಮುಖ ವಾಣಿಜ್ಯ ಕೇಂದ್ರವಾಗಿರುವ ಕಬಕ ಪುತ್ತೂರು ರೈಲ್ವೆ ನಿಲ್ದಾಣದಲ್ಲಿ ಅಧಿಕೃತ ನಿಲುಗಡೆ ನೀಡಬೇಕು ಎಂದು ಉಡುಪಿ-ದಕ್ಷಿಣ ಕನ್ನಡ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಸದಸ್ಯರಾದ (MLC) ಕಿಶೋರ್ ಕುಮಾರ್ ಪುತ್ತೂರು ಅವರು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರಿಗೆ ಪತ್ರದ ಮೂಲಕ ಮನವಿ ಸಲ್ಲಿಸಿದ್ದಾರೆ.

ರೈಲಿನ ಸಂಚಾರ ವೇಳಾಪಟ್ಟಿ ಹಾಗೂ ನಿಲ್ದಾಣಗಳನ್ನು ಅಂತಿಮಗೊಳಿಸುವ ನಿರ್ಣಾಯಕ ಹಂತದಲ್ಲೇ ಕಬಕ ಪುತ್ತೂರು ನಿಲ್ದಾಣವನ್ನು ಸೇರ್ಪಡೆಗೊಳಿಸುವಂತೆ ಸಚಿವರ ಗಮನ ಸೆಳೆದಿರುವ ಶಾಸಕರು, ಪ್ರಯಾಣಿಕರ ಬಹುದಿನಗಳ ಬೇಡಿಕೆಗೆ ಧ್ವನಿಯಾಗಿದ್ದಾರೆ.

ಕೇಂದ್ರ ಸಚಿವರಿಗೆ ಬರೆದಿರುವ ಪತ್ರದಲ್ಲಿ ನಿಲ್ದಾಣದ ಪ್ರಮುಖಾಂಶಗಳನ್ನು ಎಂಎಲ್ಸಿ ಕಿಶೋರ್ ಕುಮಾರ್ ಪ್ರತಿಪಾದಿಸಿದ್ದಾರೆ. ಈ ನಿಲ್ದಾಣವು ಪುತ್ತೂರು ಮಾತ್ರವಲ್ಲದೆ ಸುಳ್ಯ, ಬೆಳ್ತಂಗಡಿ ಹಾಗೂ ಬಂಟ್ವಾಳ ತಾಲೂಕುಗಳ ಸುಮಾರು ೮.೮೮ ಲಕ್ಷ ಜನಸಂಖ್ಯೆಗೆ ಪ್ರಮುಖ ರೈಲ್ವೆ ಸಂಪರ್ಕ ಕೊಂಡಿಯಾಗಿದೆ.

ಈ ಭಾಗದ ಅಪಾರ ಸಂಖ್ಯೆಯ ಐಟಿ ಉದ್ಯೋಗಿಗಳು, ವಿದ್ಯಾರ್ಥಿಗಳು, ಉದ್ಯಮಿಗಳು ಹಾಗೂ ಸಾರ್ವಜನಿಕರು ನಿರಂತರವಾಗಿ ಬೆಂಗಳೂರಿಗೆ ಪ್ರಯಾಣಿಸುತ್ತಿದ್ದು, ಪ್ರೀಮಿಯಂ ವಂದೇ ಭಾರತ್ ನಿಲುಗಡೆ ಅತ್ಯಗತ್ಯವಾಗಿದೆ. ಪುತ್ತೂರು ಶ್ರೀ ಮಹತೋಭಾರ ಮಹಾಲಿಂಗೇಶ್ವರ ದೇವಾಲಯ ಸೇರಿದಂತೆ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಆಗಮಿಸುವ ಪ್ರವಾಸಿಗರಿಗೆ ಅನುಕೂಲವಾಗಲಿದ್ದು, ಭಾರತೀಯ ರೈಲ್ವೆಗೂ ಹೆಚ್ಚಿನ ಆದಾಯ ತಂದುಕೊಡಲಿದೆ.

ಇದನ್ನೂ ಓದಿ: ಕರಾವಳಿಯಲ್ಲಿ ‘ಹೈಕೋರ್ಟ್ ಪೀಠ’ ಸ್ಥಾಪನೆಗೆ ಆಗ್ರಹ: ರಾಜ್ಯಸಭಾ ಸಂಸದ ಡಾ. ಎಂ. ನಾಗರಾಜ್‌ಗೆ ಮನವಿ ಸಲ್ಲಿಕೆ

ಇತ್ತೀಚೆಗೆ ‘ಪುತ್ತೂರು–ಸುಬ್ರಹ್ಮಣ್ಯ ರೈಲು ಬಳಕೆದಾರರ ಸಮಿತಿ’ ಹಾಗೂ ಸ್ಥಳೀಯ ಪ್ರಯಾಣಿಕರು ನಡೆಸಿದ್ದ ಆನ್‌ಲೈನ್ ಸಹಿ ಅಭಿಯಾನಕ್ಕೆ ೪,೦೦೦ಕ್ಕೂ ಅಧಿಕ ಮಂದಿ ಬೆಂಬಲ ಸೂಚಿಸಿದ್ದರು. ಬಳ್ಳಾರಿಯಲ್ಲಿದ್ದಾಗಲೂ ಪ್ರಯಾಣಿಕರೊಂದಿಗೆ ವರ್ಚುವಲ್ ಸಭೆ ನಡೆಸಿ ಬೆಂಬಲ ವ್ಯಕ್ತಪಡಿಸಿದ್ದ ಶಾಸಕ ಕಿಶೋರ್ ಕುಮಾರ್ ಅವರು, ಇದೀಗ ನೇರವಾಗಿ ಕೇಂದ್ರ ಸಚಿವರ ಮಟ್ಟದಲ್ಲಿ ಮನವಿ ಸಲ್ಲಿಸಿ ಸಾರ್ವಜನಿಕರ ಹೋರಾಟಕ್ಕೆ ಆನೆಬಲ ತಂದಿದ್ದಾರೆ.

ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *