ಬೆಂಗಳೂರು: ₹15,000 ಗೌರವ ಧನಕ್ಕೆ ಆಗ್ರಹಿಸಿ ಆಶಾ (ASHA) ಕಾರ್ಯಕರ್ತೆಯರು ನಡೆಸುತ್ತಿರುವ ಅಹೋರಾತ್ರಿ ಧರಣಿ 10ನೇ ದಿನಕ್ಕೆ ಕಾಲಿಟ್ಟಿರುವ ಬೆನ್ನಲ್ಲೇ, ರಾಜ್ಯ ಆರೋಗ್ಯ ಸಚಿವ ಯು.ಟಿ. ಖಾದರ್ ಪ್ರತಿಭಟನಾನಿರತ ಆಶಾ ಕಾರ್ಯಕರ್ತೆಯರ ವಿರುದ್ಧ ಬಹಿರಂಗವಾಗಿಯೇ ತೀವ್ರ ಅಸಮಾಧಾನ ಹೊರಹಾಕಿದ್ದಾರೆ. “ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತೆ, ಇಲ್ಲದಿದ್ದರೂ ನಡೆಯುತ್ತೆ ಅಂತ ಅವರೇ ತೋರಿಸಿಕೊಟ್ಟಿದ್ದಾರೆ” ಎಂದು ಸಚಿವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಸಚಿವ ಯು.ಟಿ. ಖಾದರ್ ಹೇಳಿದ್ದೇನು?

ಬೆಂಗಳೂರಿನಲ್ಲಿ ಗುರುವಾರ (ನವೆಂಬರ್ 26) ಮಾಧ್ಯಮಗಳೊಂದಿಗೆ ಮಾತನಾಡಿದ ಆರೋಗ್ಯ ಸಚಿವ ಯು.ಟಿ. ಖಾದರ್, ಆಶಾ ಕಾರ್ಯಕರ್ತೆಯರ ಧೋರಣೆ ಕುರಿತು ವೈಯಕ್ತಿಕವಾಗಿ ಮತ್ತು ಸಚಿವನಾಗಿ ತಮಗೆ ತೀವ್ರ ಬೇಸರವಾಗಿದೆ ಎಂದು ಹೇಳಿದರು. “ಕಳೆದ 10 ದಿನಗಳಿಂದ ಆಶಾ ಕಾರ್ಯಕರ್ತೆಯರು ಪ್ರತಿಭಟನೆ ನಡೆಸುತ್ತಿದ್ದಾರೆ. ಇದರಿಂದ ಆರೋಗ್ಯ ಇಲಾಖೆ ಏನಾದರೂ ಸಮಸ್ಯೆಗೆ ಸಿಲುಕಿದೆಯಾ? ಇಲ್ಲ ತಾನೇ. ಹಳ್ಳಿಗಳಲ್ಲಿ ಏನಾದರೂ ಸಮಸ್ಯೆ ಆಗಿದೆಯಾ? ಇಲ್ಲ. ಆಸ್ಪತ್ರೆಗಳಲ್ಲಿ ಹೆರಿಗೆ ಆಗುತ್ತಿದೆ, ಎಲ್ಲಾ ಸೇವೆಗಳೂ ಸುಗಮವಾಗಿ ನಡೆಯುತ್ತಿವೆ.” ಎಂದು ಹೇಳಿದರು.
ಇದನ್ನೂ ಓದಿ:ಕರ್ನಾಟಕದ 5 ಪ್ರವಾಸಿ ತಾಣಗಳಿಗೆ ವಿಶ್ವದರ್ಜೆ ಸ್ಪರ್ಶ: ಸಚಿವ ಯುಟಿ ಖಾದರ್ ಘೋಷಣೆ

“ಆಶಾ ಕಾರ್ಯಕರ್ತೆಯರು ಇದ್ದರೂ ನಡೆಯುತ್ತೆ, ಇಲ್ಲದೇ ಇದ್ದರೂ ನಡೆಯುತ್ತೆ ಎಂಬುದನ್ನು ಅವರೇ ತೋರಿಸಿಕೊಟ್ಟಿದ್ದಾರೆ. ಆಶಾಗಳು ಇಲ್ಲ ಅಂದರೆ ನಮ್ಮಲ್ಲಿ ಡಾಕ್ಟರ್ ಇಲ್ವಾ? ನರ್ಸ್ ಇಲ್ವಾ?” ಎಂದು ಸಚಿವರು ಪ್ರಶ್ನಿಸಿದರು. “ಸರ್ಕಾರ ಮತ್ತು ನಮ್ಮ ಮೇಲೆ ಆಶಾ ಕಾರ್ಯಕರ್ತೆಯರು ವಿಶ್ವಾಸ ಇಟ್ಟಿಲ್ಲ. ನಮ್ಮ ಮೇಲೆ ಅವರು ವಿಶ್ವಾಸ ಇಡದ ಮೇಲೆ ನಾವು ಯಾಕೆ ಅವರ ಮೇಲೆ ವಿಶ್ವಾಸ ಇಡಬೇಕು? ವೈಯಕ್ತಿಕವಾಗಿ ಆರೋಗ್ಯ ಸಚಿವನಾಗಿ ನನಗೆ ಬಹಳ ಬೇಸರವಿದೆ” ಎಂದು ಯು.ಟಿ. ಖಾದರ್ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು ಓದಲು ಇಲ್ಲಿ ಕ್ಲಿಕ್ ಮಾಡಿ


