EU ; ಟ್ರಂಪ್ ತೆರಿಗೆ ಬೆದರಿಕೆಯ ನಡುವೆ ಇಯು-ಭಾರತದ ಮಧ್ಯೆ ವ್ಯಾಪಾರ ಒಪ್ಪಂದ

ನವದೆಹಲಿ : ಅಮೆರಿಕ ವಿಧಿಸಿರುವ ಹೆಚ್ಚುವರಿ ತೆರಿಗೆಗಳ ಹಿನ್ನೆಲೆ ನಡುವೆ ಯುರೋಪಿಯನ್ ಯೂನಿಯನ್ (ಇಯು) ಮತ್ತು ಭಾರತ ಐತಿಹಾಸಿಕ ಮುಕ್ತ ವ್ಯಾಪಾರ ಒಪ್ಪಂದ ಹಾಗೂ ಹೊಸ ಭದ್ರತೆ–ರಕ್ಷಣಾ ಸಹಕಾರ ಒಪ್ಪಂದಕ್ಕೆ ಮುಂದಾಗಿವೆ. ಈ ವಾರ ನವದೆಹಲಿಯಲ್ಲಿ ನಡೆಯುತ್ತಿರುವ ಉನ್ನತ ಮಟ್ಟದ ಶೃಂಗಸಭೆಯಲ್ಲಿ ಎರಡೂ ಪಾರ್ಟಿಗಳು ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಿ, ಜಪಾನ್ ಮತ್ತು ದಕ್ಷಿಣ ಕೊರಿಯಾ ಬಳಿಕ ಏಷ್ಯಾದ ಮೂರನೇ ದೇಶವಾಗಿ ಭಾರತದೊಂದಿಗೆ ರಕ್ಷಣಾ ಪಾಲುದಾರಿಕೆ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆಯಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತಕ್ಕೆ 50% ತೆರಿಗೆ ವಿಧಿಸಿದ ಬಳಿಕ ಅನೇಕ ಭಾರತೀಯ ವ್ಯಾಪಾರಿಗಳಿಗೆ ನಷ್ಟ ಉಂಟಾಗಿದೆ. ದೆಹಲಿಯ ಖಾನ್ ಮಾರುಕಟ್ಟೆಯ ಆಭರಣ ವ್ಯಾಪಾರಿ ಅತುಲ್ ಮೆಹ್ರಾ, ಅಮೆರಿಕ ನಮ್ಮ ಪ್ರಮುಖ ಮಾರುಕಟ್ಟೆಯಾಗಿತ್ತು. ಇಯು ಜೊತೆ ಒಪ್ಪಂದವಾದರೆ ವ್ಯವಹಾರ ಪುನಶ್ಚೇತನವಾಗಲಿದೆ ಎಂದಿದ್ದಾರೆ. ಬಟ್ಟೆ ವ್ಯಾಪಾರಿ ವಿಷ್ಣು ಗುಪ್ತ ಕೂಡ ಹೊಸ ಮಾರುಕಟ್ಟೆಗಳ ಅವಕಾಶ ದೊರೆಯಲಿದೆ ಎಂದು ಆಶಾವಾದ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : Viral Video : 70 ವರ್ಷದ ವೃದ್ಧನ ಮೊದಲ ರೀಲ್‌ಗೆ 2 ಕೋಟಿ ವೀಕ್ಷಣೆ! ವಿಡಿಯೋ ಇಲ್ಲಿದೆ

ಅಮೆರಿಕ ರಷ್ಯಾದಿಂದ ತೈಲ ಖರೀದಿ ನಿಲ್ಲಿಸುವಂತೆ ಒತ್ತಡ ಹಾಕುತ್ತಿರುವಾಗ, ಇಯು ಭಾರತವನ್ನು ತನ್ನತ್ತ ಸೆಳೆಯಲು ವ್ಯಾಪಾರ ಮತ್ತು ರಕ್ಷಣಾ ಸಹಕಾರವನ್ನು ಬಲಪಡಿಸುವ ತಂತ್ರ ಅನುಸರಿಸಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ಇಯು ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೆಯೆನ್ ಮತ್ತು ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಅವರು ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾರತಕ್ಕೆ ಆಗಮಿಸಿದ್ದಾರೆ. ಬಳಿಕ ಪ್ರಧಾನಿ ನರೇಂದ್ರ ಮೋದಿ ಜೊತೆ ಮೊದಲ ಇಯು–ಭಾರತ ಉದ್ಯಮ ವೇದಿಕೆಯಲ್ಲಿ ಭಾಗವಹಿಸಲಿದ್ದಾರೆ. ಈ ಒಪ್ಪಂದದಿಂದ ಸುಮಾರು 2 ಬಿಲಿಯನ್ ಜನಸಂಖ್ಯೆಯ ಮಾರುಕಟ್ಟೆ ನಿರ್ಮಾಣವಾಗಲಿದ್ದು, ಜಾಗತಿಕ ಜಿಡಿಪಿಯ ಸುಮಾರು ನಾಲ್ಕನೇ ಭಾಗವನ್ನು ಒಳಗೊಂಡಿರುತ್ತದೆ ಎಂದು ಅಂದಾಜಿಸಲಾಗಿದೆ.

ಇಯು ಭಾರತವು ಕಾರುಗಳ ಮೇಲಿನ 100%ಕ್ಕೂ ಹೆಚ್ಚು ತೆರಿಗೆ ಹಾಗೂ ಮದ್ಯದ ಮೇಲಿನ 150%ವರೆಗೆ ಇರುವ ಆಮದು ತೆರಿಗೆಯನ್ನು ಕಡಿಮೆ ಮಾಡುವ ನಿರೀಕ್ಷೆಯಲ್ಲಿದೆ. ಇತ್ತ ಭಾರತ ಔಷಧ ಮತ್ತು ಬಟ್ಟೆ ರಫ್ತುಗಳಿಗೆ ಸುಲಭ ಮಾನದಂಡಗಳು ಹಾಗೂ ತೆರಿಗೆ ರಿಯಾಯಿತಿಗಳನ್ನು ಬೇಡಿಕೆ ಇಟ್ಟಿದೆ. ರಕ್ಷಣಾ ಕ್ಷೇತ್ರದಲ್ಲಿ, ಭಾರತ–ಇಯು ಸಹಕಾರದಿಂದ ಭಾರತ ರಷ್ಯಾದ ಮೇಲಿನ ಅವಲಂಬನೆಯನ್ನು ಕ್ರಮೇಣ ಕಡಿಮೆ ಮಾಡಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಫ್ರಾನ್ಸ್ ಮತ್ತು ಜರ್ಮನಿಯೊಂದಿಗೆ ಸೇನಾ ಉಪಕರಣಗಳ ಒಪ್ಪಂದಕ್ಕೂ ಭಾರತ ಚರ್ಚೆ ನಡೆಸುತ್ತಿದೆ. ಒಟ್ಟಾರೆ, ಈ ಒಪ್ಪಂದದಿಂದ ಭಾರತ ತನ್ನ ರಫ್ತು ವೃದ್ಧಿ, ಸರಬರಾಜು ಸರಣಿ ಬಲವರ್ಧನೆ ಹಾಗೂ ಜಾಗತಿಕ ಆರ್ಥಿಕ ಪಾತ್ರವನ್ನು ವಿಸ್ತರಿಸುವ ಗುರಿ ಹೊಂದಿದೆ ಎಂದು ವಿಶ್ಲೇಷಕರು ಹೇಳಿದ್ದಾರೆ.

ದೇಶದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News