ವಡೋದರ: ರೋಚಕ ಹಣಾಹಣಿಯಲ್ಲಿ ಮುಂಬೈ ಇಂಡಿಯನ್ಸ್ ತಂಡ ಆರ್ಸಿಬಿ ತಂಡದ ಎದುರು 15 ರನ್‌ಗಳಿಂದ ಗೆದ್ದು ಕ್ವಾಲಿಫೈಯರ್ ಆಸಯನ್ನು ಜೀವಂತವಾಗಿಸಿಕೊಂಡಿದೆ.
ಇಲ್ಲಿನ ಬಿಸಿಎ ಸ್ಟೇಡಿಯಂನಲ್ಲಿ ನಡೆದ ಪಂದ್ಯಾಟದಲ್ಲಿ ಟಾಸ್ ಗೆದ್ದ ಆರ್ಸಿಬಿ ತಂಡ ಮುಂಬೈ ತಂಡವನ್ನು ಬ್ಯಾಟಿಂಗ್‌ಗೆ ಆಹ್ವಾನಿಸಿತ್ತು. ಆಲ್ ರೌಂಡರ್ ನಾಟ್ ಸ್ಕೀವರ್ ಬ್ರಂಟ್ ಅವರ ಅಮೋಘ ಶತಕ, ಆರಂಭಿಕ ಆಟಗಾರ್ತಿ ಹೇಲಿ ಮ್ಯಾಥ್ಯೂಸ್ ಅವರ ಅರ್ಧ ಶತಕದ ನೆರವಿನಿಂದ ಮುಂಬೈ ತಂಡ ನಿಗದಿತ 20 ಓವರ್‌ಗಳಲ್ಲಿ 4 ವಿಕೆಟ್ ನಷ್ಟಕ್ಕೆ 199 ರನ್ ಗಳಿಸಿತು. ಆರ್ಸಿಬಿ ತಂಡದ ಪರ ಲಾರೆನ್ ಬೆಲ್ 2 ವಿಕೆಟ್ ಮತ್ತು ಶ್ರೇಯಂಕಾ ಪಾಟೀಲ್, ನದಿನಿ ಡಿ ಕ್ಲರ್ಕ್ ತಲಾ ಒಂದು ವಿಕೆಟ್ ಪಡೆದರು.

ವುಮೆನ್ಸ್ ಪ್ರೀಮಿಯರ್ ಲೀಗ್‌ನ ಮೊದಲ ಶತಕ
ವುಮೆನ್ಸ್ ಪ್ರೀಮಿಯರ್ ಲೀಗ್ ಪ್ರಾರಂಭವಾಗಿ ಇದೀಗ ನಾಲ್ಕನೇ ಆವೃತಿ ಚಾಲ್ತಿಯಲ್ಲಿದೆ. ಆದರೆ ಇದುವರೆಗೂ ಯಾವೊಬ್ಬ ಬ್ಯಾಟರ್ ಕೂಡ ಶತಕ ದಾಖಲಿಸಿರಲಿಲ್ಲ. ಈ ಹಿಂದೆ 99 ರನ್ ಗಳಿಸಿ ಇಬ್ಬರು ಶತಕದಿಂದ ವಂಚಿತರಾಗಿದ್ದರು. ಆದರೆ ಇಂದು ನಾಟ್ ಸ್ಕೀವರ್ 57 ಎಸೆತಗಳಲ್ಲಿ 16 ಬೌಂಡರಿ ಮತ್ತು ಒಂದು ಸಿಕ್ಸರ್ ನೆರವಿನೊಂದಿಗೆ ಮೊದಲ ಶತಕವನ್ನು ದಾಖಲಿಸಿದರು.
200 ರನ್ ಗುರಿಯನ್ನು ಬೆನ್ನಟ್ಟಿದ ಆರ್ಸಿಬಿ ತಂಡಕ್ಕೆ ಮುಂಬೈ ಬೌಲರ್‌ಗಳು ಆರಂಭಿಕ ಆಘಾತ ನೀಡಿದರು. 35 ರನ್ ಗಳಿಸುವಷ್ಟರಲ್ಲಿ ಪ್ರಮುಖ 5 ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟದ ಸ್ಥಿತಿಯಲ್ಲಿ ಇದ್ದಾಗ ರಿಚಾ ಘೋಷ್ ಮತ್ತು ನದಿನಿ ಡಿ ಕ್ಲರ್ಕ್ ಉತ್ತಮ ಜೊತೆಯಾಟ ನೀಡಿದರು. ಕೊನೇ ಓವರ್‌ನ ವರೆಗೆ ಪಂದ್ಯವನ್ನು ತಂದು ಆಸೆ ಮೂಡಿಸಿದ್ದರು. ಕೊನೆಯಲ್ಲಿ ಆರ್ಸಿಬಿ ತಂಡ 15 ರನ್‌ಗಳ ಅಂತರದಿಂದ ಸೋಲನ್ನನುಭವಿಸಿತು. ಇದರೊಂದಿಗೆ ಆರ್‌ಸಿಬಿ ತಂಡ ಸತತ ಎರಡನೇ ಸೋಲು ಕಂಡಿತು.
ಸಂಕ್ಷಿಪ್ತ ಸ್ಕೋರ್: ಮುಂಬೈ ಇಂಡಿಯನ್ಸ್ ನಾಟ್ ಸ್ಕೀವರ್ ಬ್ರಂಟ್ ಅಜೇಯ 100 (57 ಎಸೆತ 16 ಬೌಂಡರಿ, 1 ಸಿಕ್ಸ್), ಹೇಲಿ ಮ್ಯಾಥ್ಯೂಸ್ 56 (39 ಎಸೆತ, 9 ಬೌಂಡರಿ), ಹರ್ಮನ್ ಪ್ರೀತ್ ಕೌರ್ 20 (12 ಎಸೆತ, 2 ಬೌಂಡರಿ, 1 ಸಿಕ್ಸರ್) ಲಾರೆನ್ ಬೆಲ್ 2 ವಿಕೆಟ್.
ಆರ್ಸಿಬಿ: ರಿಚಾ ಘೋಷ್ 90 (50 ಎಸೆತ, 10 ಬೌಂಡರಿ, 6 ಸಿಕ್ಸರ್) ನದಿನಿ ಡಿ ಕ್ಲರ್ಕ್ 28 (20 ಎಸೆತ, 3 ಬೌಂಡರಿ, 1 ಸಿಕ್ಸರ್) ಹೇಲಿ ಮ್ಯಾಥ್ಯೂಸ್ 3 ವಿಕೆಟ್, ಶಬ್ನಮ್ ಇಸ್ಮಾಯಿಲ್ ಮತ್ತು ಅಮೇಲಿ ಕೆರ್ 2, ಅಮ್ಜೌತ್ ಕೌರ್ 1 ವಿಕೆಟ್.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

