ಭಾರತ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಪಾಕಿಸ್ತಾನ ಸರ್ಕಾರದ ನಿರ್ಧಾರದ ಬೆನ್ನಲ್ಲೇ, ಐಸಿಸಿ ಪುರುಷರ ಟಿ20 ವಿಶ್ವಕಪ್ 2026ರಲ್ಲಿ ಪಾಕಿಸ್ತಾನದ ಭಾಗವಹಿಸುವಿಕೆ ಕುರಿತು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮಹತ್ವದ ತೀರ್ಮಾನಕ್ಕೆ ಮುಂದಾಗಿದೆ.
ವರದಿಗಳ ಪ್ರಕಾರ, ಈ ವಿಷಯದ ಕುರಿತು ಚರ್ಚೆ ನಡೆಸಲು ಐಸಿಸಿ ಬೋರ್ಡ್ ಸೋಮವಾರ ಆನ್‌ಲೈನ್ ಸಭೆ ನಡೆಸಲಿದ್ದು, ಪಾಕಿಸ್ತಾನ ಕ್ರಿಕೆಟ್ ಮಂಡಳಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವ ಸಾಧ್ಯತೆಗಳನ್ನೂ ಪರಿಶೀಲಿಸಲಿದೆ.

ಫೆಬ್ರವರಿ 15ರಂದು ಕೊಲಂಬೊದ ಆರ್ ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆಯಬೇಕಿದ್ದ ಭಾರತ–ಪಾಕಿಸ್ತಾನ ಹೈ-ಪ್ರೊಫೈಲ್ ಪಂದ್ಯವನ್ನು ಬಹಿಷ್ಕರಿಸುವುದಾಗಿ ಪಾಕಿಸ್ತಾನ ಸರ್ಕಾರ ಘೋಷಿಸಿದ ನಂತರ ಈ ವಿವಾದ ಭುಗಿಲೆದ್ದಿದೆ. ಟೂರ್ನಮೆಂಟ್‌ನಲ್ಲಿ ಭಾಗವಹಿಸಲು ರಾಷ್ಟ್ರೀಯ ತಂಡಕ್ಕೆ ಅನುಮತಿ ನೀಡಲಾಗಿದೆ ಆದರೆ ಭಾರತ ವಿರುದ್ಧದ ಪಂದ್ಯಕ್ಕೆ ಮಾತ್ರ ಬಹಿಷ್ಕಾರ ಎಂದು ಸರ್ಕಾರ ಸ್ಪಷ್ಟಪಡಿಸಿದೆ.
ಇದನ್ನೂ ಓದಿ: ಟಿ20 ವಿಶ್ವಕಪ್: ಭಾರತ ವಿರುದ್ಧದ ಪಂದ್ಯ ಬಹಿಷ್ಕರಿಸಿದ ಪಾಕಿಸ್ತಾನ
ಈ ನಿರ್ಧಾರದ ಹಿಂದಿನ ಸ್ಪಷ್ಟ ಕಾರಣವನ್ನು ಸರ್ಕಾರ ಹೇಳಿಕೆಯಲ್ಲಿ ಉಲ್ಲೇಖಿಸದಿದ್ದರೂ, ಬಾಂಗ್ಲಾದೇಶದೊಂದಿಗೆ ಐಕ್ಯತೆ ವ್ಯಕ್ತಪಡಿಸುವ ನಿಟ್ಟಿನಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಭದ್ರತಾ ಕಾರಣಗಳನ್ನು ಮುಂದಿಟ್ಟುಕೊಂಡು ಪಂದ್ಯಗಳನ್ನು ಭಾರತದಿಂದ ಬೇರೆಡೆಗೆ ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ, ಅವರನ್ನು ಟೂರ್ನಮೆಂಟ್‌ನಿಂದ ಹೊರಗಿಡಲಾಗಿತ್ತು. ಅವರ ಸ್ಥಾನಕ್ಕೆ ಸ್ಕಾಟ್‌ಲ್ಯಾಂಡ್ ತಂಡವನ್ನು ಗ್ರೂಪ್ ‘ಸಿ’ಯಲ್ಲಿ ಸೇರಿಸಲಾಗಿದೆ.
ಇನ್ನು ಪಾಕಿಸ್ತಾನ ತಂಡವು ಗ್ರೂಪ್ ‘ಎ’ಯಲ್ಲಿ ಭಾರತ, ನಾಮಿಬಿಯಾ, ನೆದರ್‌ಲ್ಯಾಂಡ್ಸ್ ಹಾಗೂ ಅಮೆರಿಕ ತಂಡಗಳೊಂದಿಗೆ ಸ್ಥಾನ ಪಡೆದಿದ್ದು, ಫೆಬ್ರವರಿ 7ರಂದು ನೆದರ್‌ಲ್ಯಾಂಡ್ಸ್ ವಿರುದ್ಧ ತಮ್ಮ ಅಭಿಯಾನ ಆರಂಭಿಸಲು ಸಜ್ಜಾಗಿದೆ.
ಪಾಕಿಸ್ತಾನ ಕ್ರಿಕೆಟ್ ಮಂಡಳಿ ಇನ್ನೂ ಐಸಿಸಿಗೆ ಅಧಿಕೃತವಾಗಿ ತನ್ನ ನಿಲುವನ್ನು ತಿಳಿಸದಿದ್ದರೂ, ಈ ಬಹಿಷ್ಕಾರವನ್ನು ಐಸಿಸಿ ಗಂಭೀರವಾಗಿ ಪರಿಗಣಿಸುವ ಸಾಧ್ಯತೆ ಇದೆ. ವರದಿಗಳ ಪ್ರಕಾರ, ಪಾಕಿಸ್ತಾನಕ್ಕೆ ಟೂರ್ನಮೆಂಟ್‌ನಲ್ಲಿ ಮುಂದುವರಿಯಲು ಅವಕಾಶ ನೀಡಿದರೂ, ಕಠಿಣ ನಿರ್ಬಂಧಗಳು ವಿಧಿಸುವ ಸಾಧ್ಯತೆ ಇದೆ.
ಇದನ್ನೂ ಓದಿ: T20 World Cup: ಪಾಕಿಸ್ತಾನ ಪಂದ್ಯ ಬಹಿಷ್ಕರಿಸಿದರೆ ಭಾರತ ಅನುಸರಿಸುವ ನಡೆ ಹೀಗಿದೆ
ಭಾರತ–ಪಾಕಿಸ್ತಾನ ಪಂದ್ಯವು ಜಾಗತಿಕ ಕ್ರಿಕೆಟ್‌ನ ಅತಿದೊಡ್ಡ ಆದಾಯ ಮೂಲಗಳಲ್ಲಿ ಒಂದಾಗಿದ್ದು, ಜಾಹೀರಾತು ನಷ್ಟವೇ ಸುಮಾರು 200 ಕೋಟಿ ರೂಪಾಯಿಗಳನ್ನೂ ಮೀರಬಹುದು ಎನ್ನಲಾಗಿದೆ. ಪ್ರಸಾರ ಸಂಸ್ಥೆಗಳು ಮತ್ತು ಪ್ರಾಯೋಜಕರು ಹೊಣೆಗಾರಿಕೆಗೆ ಒತ್ತಾಯಿಸುವ ಸಾಧ್ಯತೆ ಇದ್ದು, ಇದು ಐಸಿಸಿಯ ಮೇಲೆ ಮತ್ತಷ್ಟು ಒತ್ತಡ ತಂದಿದೆ.
ಪಾಕಿಸ್ತಾನವನ್ನು ಟೂರ್ನಮೆಂಟ್‌ನಿಂದ ಹೊರಗಿಟ್ಟರೆ, ಉಗಾಂಡಾ ತಂಡವು ಅವರ ಸ್ಥಾನವನ್ನು ಭರ್ತಿ ಮಾಡುವ ನಿರೀಕ್ಷೆಯಿದೆ. ಇದರ ಪರಿಣಾಮಗಳು ಕೇವಲ ಈ ವಿಶ್ವಕಪ್‌ಗೆ ಸೀಮಿತವಾಗದೆ, ಭವಿಷ್ಯದಲ್ಲಿ ಪಾಕಿಸ್ತಾನದ ಅಂತರಾಷ್ಟ್ರೀಯ ಕ್ರಿಕೆಟ್ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ.
ಪಾಕ್ ಟೀಂ ಮೇಲೆ ಆಗುವ ಐದು ಪರಿಣಾಮಗಳು
- ನಡೆಯುತ್ತಿರುವ ಟಿ20 ವಿಶ್ವಕಪ್‌ನಿಂದ ಸಂಪೂರ್ಣ ನಿಷೇಧ
- ಐಸಿಸಿ ವಾರ್ಷಿಕ ಆದಾಯ ಹಂಚಿಕೆಯನ್ನು ಪಿಸಿಬಿಗೆ ತಡೆಹಿಡಿಯುವ ಸಾಧ್ಯತೆ
- ವಾಣಿಜ್ಯ ನಷ್ಟಕ್ಕಾಗಿ ಜಿಯೋ–ಸ್ಟಾರ್ ಪ್ರಸಾರ ಸಂಸ್ಥೆಗೆ ಪರಿಹಾರ ಪಾವತಿ
- ದ್ವಿಪಕ್ಷೀಯ ಸರಣಿಗಳ ಮೇಲೆ ನಿರ್ಬಂಧ, ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಅಂಕಗಳ ನಷ್ಟ ಹಾಗೂ ಐಸಿಸಿ ರ್ಯಾಂಕಿಂಗ್ ಮೇಲೆ ಪರಿಣಾಮ
- ಪಾಕಿಸ್ತಾನ್ ಸೂಪರ್ ಲೀಗ್‌ನಲ್ಲಿ ವಿದೇಶಿ ಆಟಗಾರರ ಮೇಲೆ ನಿರ್ಬಂಧ, ಇದರಿಂದ ಲೀಗ್‌ನ ಗುಣಮಟ್ಟ ಮತ್ತು ಆರ್ಥಿಕತೆಗೆ ಭಾರಿ ಹೊಡೆತ
ಈ ವಿಚಾರದಲ್ಲಿ ಐಸಿಸಿ ಕೈಗೊಳ್ಳುವ ತೀರ್ಮಾನವು, ರಾಜಕೀಯ ನಿರ್ಧಾರಗಳು ಅಂತಾರಾಷ್ಟ್ರೀಯ ಕ್ರಿಕೆಟ್ ಮೇಲೆ ಹೇಗೆ ಪರಿಣಾಮ ಬೀರುತ್ತವೆ ಎಂಬುದಕ್ಕೆ ಬಲವಾದ ಉದಾಹರಣೆಯಾಗಲಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

