ತಿರುವನಂತಪುರಂ: ಕುಂಭಮೇಳದ ವೇಳೆ ತನ್ನ ಸುಂದರ ಕಣ್ಣು ಮತ್ತು ನಗುವಿನ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮಾಲೆ ಮಾರಾಟಗಾರ್ತಿ ಮೊನಾಲಿಸಾ ಭೋಸ್ಲೆ ತನ್ನ ಪೋಷಕರ ವಿರೋಧದ ನಡುವೆ ಮುಸ್ಲಿಂ ಯುವಕನೊಂದಿಗೆ ಕೇರಳಕ್ಕೆ ಓಡಿಹೋಗಿದ್ದು, ಪ್ರಕರಣ ಠಾಣೆ ಮೆಟ್ಟಿಲೇರಿದೆ.
ಮಾಹಿತಿಯ ಪ್ರಕಾರ, ಮೊನಾಲಿಸಾ ಭೋಸ್ಲೆ ಮತ್ತು ಫಾರ್ಮಾನ್ ಖಾನ್ ಎಂಬ ಮುಸ್ಲಿಂ ಯುವಕ ಕಳೆದ ಒಂದೂವರೆ ವರ್ಷದಿಂದ ಪ್ರೀತಿಸುತ್ತಿದ್ದಾರೆ. ಇಬ್ಬರೂ ಈಗ ಕೇರಳದ ಪೂವಾರ್ ಪ್ರದೇಶದಲ್ಲಿ ನಡೆಯುತ್ತಿರುವ ಸಿನಿಮಾದೊಂದರಲ್ಲಿ ಕೆಲಸ ಮಾಡುತ್ತಿದ್ದಾರೆ ಎನ್ನಲಾಗಿದೆ.

ಇತ್ತೀಚೆಗೆ ಮೊನಾಲಿಸಾ ಮತ್ತು ಫಾರ್ಮಾನ್ ಖಾನ್ ತಿರುವನಂತಪುರಂನ ತಂಪನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ಆಶ್ರಯ ಹಾಗೂ ರಕ್ಷಣೆ ಕೋರಿದ್ದರು. ತಮ್ಮ ಕುಟುಂಬದವರು ಪ್ರೇಮ ಸಂಬಂಧಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ತಮಗೆ ಇಷ್ಟವಿಲ್ಲದ ಮತ್ತೊಬ್ಬ ಯುವಕನೊಂದಿಗೆ ಮದುವೆ ಮಾಡಲು ಒತ್ತಡ ಹಾಕುತ್ತಿದ್ದಾರೆ ಎಂದು ಮೊನಾಲಿಸಾ ಪೊಲೀಸರಿಗೆ ದೂರು ನೀಡಿದ್ದಾಗಿ ವರದಿಯಾಗಿದೆ.
ಮೊನಾಲಿಸಾ ನೀಡಿದ ದೂರಿನ ಮೇರೆಗೆ ಅವರ ತಂದೆ ಜಯ್ ಸಿಂಗ್ ಭೋಸ್ಲೆ ಅವರನ್ನು ಪೊಲೀಸರು ಠಾಣೆಗೆ ಕರೆಯಿಸಿಕೊಂಡು ವಿಚಾರಣೆ ನಡೆಸಿದರು. ಈ ವೇಳೆ ಮೊನಾಲಿಸಾ ವಯಸ್ಕಳಾಗಿರುವುದರಿಂದ ತಾನು ಯಾರೊಂದಿಗೆ ಬದುಕಬೇಕು ಎಂಬುದನ್ನು ಆಯ್ಕೆಮಾಡುವ ಹಕ್ಕು ಅವಳಿಗಿದೆ ಎಂದು ಪೊಲೀಸರು ಕುಟುಂಬದವರಿಗೆ ತಿಳಿಸಿದರು. ಅವಳನ್ನು ಬಲವಂತವಾಗಿ ಮತ್ತೊಬ್ಬರೊಂದಿಗೆ ಮದುವೆ ಮಾಡಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಪೊಲೀಸರ ಮಾತುಕತೆ ಹಾಗೂ ಭರವಸೆಗಳ ನಂತರ ಮೊನಾಲಿಸಾ ಮತ್ತು ಫಾರ್ಮಾನ್ ಖಾನ್ ಇಬ್ಬರನ್ನೂ ಒಟ್ಟಿಗೆ ತೆರಳಲು ಅನುಮತಿಸಲಾಯಿತು.
ಮಲಯಾಳಂ ಮಾಧ್ಯಮಗಳ ವರದಿ ಪ್ರಕಾರ, ಮೊನಾಲಿಸಾ ಈಗ ಹಲವು ಪ್ರಮುಖ ಕಾರ್ಯಕ್ರಮಗಳಲ್ಲಿ ಅತಿಥಿಯಾಗಿ ಹಾಗೂ ಮಾದರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರು ಕೆಲವು ರಾಜಕೀಯ ನಾಯಕರು ಮತ್ತು ಉದ್ಯಮಿಗಳೊಂದಿಗೆ ತೆಗೆಸಿಕೊಂಡಿರುವ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಇತ್ತೀಚೆಗೆ ಪ್ರಸಿದ್ಧ ಚೆಮ್ಮನೂರ್ ಜ್ಯುವೆಲ್ಲರ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೂ ಅವರು ಭಾಗವಹಿಸಿದ್ದರು ಎಂದು ತಿಳಿದುಬಂದಿದೆ.

