ತಿರುವನಂತಪುರಂ: ಕುಂಭಮೇಳದ ವೇಳೆ ಮಾಲೆ ಮಾರುತ್ತಿದ್ದಾಗ ತನ್ನ ಸುಂದರ ಕಣ್ಣು ಮತ್ತು ನಗುವಿನಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದ ಮೊನಾಲಿಸಾ ಭೋಸ್ಲೆ ಇದೀಗ ಮತ್ತೆ ಮುಸ್ಲಿಂ ಯುವಕನೊಂದಿಗಿನ ಪ್ರೇಮ ಸಂಬಂಧದ ಮೂಲಕ ಸುದ್ದಿಯಾಗಿದ್ದಾರೆ. ಕುಟುಂಬದ ವಿರೋಧದ ನಡುವೆಯೂ ಫಾರ್ಮಾನ್ ಖಾನ್ ಜೊತೆ ದೇವಸ್ಥಾನದಲ್ಲಿ ವಿವಾಹವಾಗಿದ್ದು, ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಮಾಧ್ಯಮ ವರದಿಗಳ ಪ್ರಕಾರ, ಮೊನಾಲಿಸಾ ಭೋಸ್ಲೆ ಮತ್ತು ಫಾರ್ಮಾನ್ ಖಾನ್ ತಿರುವನಂತಪುರಂನ ದೇವಸ್ಥಾನವೊಂದರಲ್ಲಿ ಸರಳವಾಗಿ ಮದುವೆಯಾಗಿದ್ದಾರೆ. ಕಳೆದ ಒಂದು ವರ್ಷಕ್ಕೂ ಹೆಚ್ಚು ಕಾಲದಿಂದ ಇಬ್ಬರೂ ಪ್ರೇಮ ಸಂಬಂಧದಲ್ಲಿದ್ದು, ಈ ಸಂಬಂಧಕ್ಕೆ ಮೊನಾಲಿಸಾ ಕುಟುಂಬದವರು ತೀವ್ರ ವಿರೋಧ ವ್ಯಕ್ತಪಡಿಸಿದ್ದರು.

ಕುಟುಂಬದಿಂದ ಭೀತಿ ಇರುವ ಹಿನ್ನೆಲೆಯಲ್ಲಿ ಮೊನಾಲಿಸಾ ಮತ್ತು ಫಾರ್ಮಾನ್ ಖಾನ್ ಇಬ್ಬರೂ ಕೇರಳ ಪೊಲೀಸರ ಬಳಿ ರಕ್ಷಣೆ ಕೋರಿದ್ದಾರೆ. ಅವರು ತಿರುವನಂತಪುರಂನ ತಂಪನೂರು ಪೊಲೀಸ್ ಠಾಣೆಗೆ ಭೇಟಿ ನೀಡಿ ತಮ್ಮ ಸುರಕ್ಷತೆಗಾಗಿ ಮನವಿ ಸಲ್ಲಿಸಿದ್ದಾರೆ ಎಂದು ತಿಳಿದುಬಂದಿದೆ. ಪೊಲೀಸರು ಇಬ್ಬರಿಗೂ ಅಗತ್ಯ ಭದ್ರತೆ ಒದಗಿಸುವ ಬಗ್ಗೆ ಭರವಸೆ ನೀಡಿದ್ದು, ಈ ವಿಷಯದಲ್ಲಿ ಕಾನೂನು ಪ್ರಕಾರ ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
ತಂದೆಯ ಮನವೊಲಿಕೆಗೂ ಕರಗದ ಮನಸು
ತನಗೆ ಇಷ್ಟವಿಲ್ಲದ ಹುಡುಗನೊಂದಿಗೆ ವಿವಾಹವಾಗಲು ಒತ್ತಾಯಿಸುತ್ತಿದ್ದಾರೆ ಎಂದು ಮೊನಾಲಿಸಾ ಪೊಲೀಸರ ಮುಂದೆ ದೂರು ನೀಡಿದ ಹಿನ್ನೆಲೆ ಆಕೆಯ ತಂದೆಯನ್ನು ತಂಪನೂರು ಠಾಣಾ ಪೊಲೀಸರು ಕರೆಸಿದ್ದರು. ಈ ವೇಳೆ ತಂದೆಯ ಮನವೊಲಿಕೆಗೂ ಮನಸು ಕರಗಿಸದ ಮೊನಾಲಿಸಾ, ಫಾರ್ಮಾನ್ ಜೊತೆ ಹೋಗುವುದಾಗಿ ಹೇಳಿಕೆ ನೀಡಿದ್ದಾಳೆ. ಹೀಗಾಗಿ ಆಕೆಯನ್ನು ಫರ್ಮಾನ್ ಜೊತೆ ಕಳುಹಿಸಿಕೊಟ್ಟಿದ್ದು, ಇದರ ಬೆನ್ನಲ್ಲೇ ದೇವಸ್ಥಾನವೊಂದರಲ್ಲಿ ಮದುವೆಯೂ ಆಗಿದ್ದಾರೆ.

