ದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಬೇಕೆಂಬ ಹಂಬಲ ಮತ್ತು ಅಪಾಯಕಾರಿ ರೀಲ್ಸ್ ಮಾಡುವ ಹುಚ್ಚು ದೆಹಲಿಯ ಯುವಕನೊಬ್ಬನ ಪ್ರಾಣವನ್ನೇ ಬಲಿಪಡೆದಿದೆ. ಸಿನಿಮಾ ಶೈಲಿಯಲ್ಲಿ ರಿವಾಲ್ವರ್ ಹಿಡಿದು ರೀಲ್ಸ್ ಮಾಡುತ್ತಿದ್ದಾಗ ಅಚಾನಕ್ಕಾಗಿ ಗುಂಡು ಹಾರಿದ ಪರಿಣಾಮ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನನ್ನು ದೆಹಲಿಯ ದಲ್ಲುಪುರ ನಿವಾಸಿ ಪವನ್ ಎಂದು ಗುರುತಿಸಲಾಗಿದೆ.
ಪವನ್ ತನ್ನ ಗೆಳೆಯನ ಜೊತೆ ಸೇರಿ ರೀಲ್ಸ್ ಮಾಡಲು ಮುಂದಾಗಿದ್ದ. ತನ್ನ ಬಳಿ ಇದ್ದ ರಿವಾಲ್ವರ್‌ಗೆ ಬುಲೆಟ್ ಲೋಡ್ ಮಾಡುವುದು ಹೇಗೆ ಮತ್ತು ಅದನ್ನು ಭಯವಿಲ್ಲದೆ ನಿಭಾಯಿಸುವುದು ಹೇಗೆ ಎಂದು ವಿಡಿಯೋ ಮೂಲಕ ತೋರಿಸುತ್ತಿದ್ದ. ವಿಡಿಯೋ ಮಾಡುತ್ತಾ ಪವನ್ ನಗುಮುಖದಿಂದಲೇ ಲೋಡೆಡ್ ರಿವಾಲ್ವರ್ ಅನ್ನು ತನ್ನ ಎದೆಗೆ ಇಟ್ಟುಕೊಂಡಿದ್ದಾನೆ. ಈ ವೇಳೆ ವಿಡಿಯೋ ಚಿತ್ರೀಕರಿಸುತ್ತಿದ್ದ ಗೆಳೆಯ “ಗುಂಡು ಹಾರಿಸಬೇಡ ಸಹೋದರ” ಎಂದು ಎಚ್ಚರಿಕೆ ನೀಡಿದ್ದಾನೆ. ಆದರೆ ಪವನ್ “ಅರೆ ಇಲ್ಲಪ್ಪ” ಎಂದು ಉತ್ತರಿಸುವಷ್ಟರಲ್ಲೇ ಟ್ರಿಗರ್ ಒತ್ತಲ್ಪಟ್ಟು ಗುಂಡು ಎದೆಯನ್ನು ಸೀಳಿ ಹೋಗಿದೆ.

ಇದನ್ನೂ ಓದಿ: ವರ್ಕ್ ಫ್ರಮ್ ಹೋಮ್ ಅಂದ್ರೆ ಹೀಗಿರಬೇಕಾ? ಮುಖಕ್ಕೆ ಫೇಸ್ ಪ್ಯಾಕ್ ಹಾಕಿ ಆಫೀಸ್ ಮೀಟಿಂಗ್‌ಗೆ ಬಂದ ಉದ್ಯೋಗಿ!
ಗೆಳೆಯನ ಕಣ್ಣೆದುರೇ ನಡೆದ ಈ ಭೀಕರ ದೃಶ್ಯ ವಿಡಿಯೋದಲ್ಲಿ ದಾಖಲಾಗಿದೆ. ತಕ್ಷಣವೇ ಪವನ್‌ನನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲೇ ಆತ ಮೃತಪಟ್ಟಿದ್ದ. ದೆಹಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಇದು ನಿಜಕ್ಕೂ ಅಪಘಾತವೇ ಅಥವಾ ಆತ್ಮಹತ್ಯೆ ಯತ್ನವೇ ಎಂಬ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

