ಮಂಗಳೂರು: ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಲೋಕಸಭೆಯಲ್ಲಿ ಹಣಕಾಸು ಮಸೂದೆಯ ಮೇಲಿನ ಚರ್ಚೆಯಲ್ಲಿ ಭಾಗವಹಿಸಿ, ತಮ್ಮ ಕ್ಷೇತ್ರದ ಪ್ರಮುಖ ಸಮಸ್ಯೆಗಳು ಮತ್ತು ರಾಷ್ಟ್ರೀಯ ಭದ್ರತೆಯ ಕುರಿತು ಪ್ರಬಲವಾಗಿ ಧ್ವನಿ ಎತ್ತಿದ್ದಾರೆ. ಉಳ್ಳಾಲ ಮತ್ತು ಸೋಮೇಶ್ವರ ಭಾಗದಲ್ಲಿ ತೀವ್ರವಾಗಿರುವ ಕಡಲ್ಕೊರೆತ ಸಮಸ್ಯೆಗೆ ಕೇಂದ್ರ ಪರಿಸರ ಮತ್ತು ಭೂವಿಜ್ಞಾನ ಸಚಿವಾಲಯಗಳ ಸಹಯೋಗದೊಂದಿಗೆ ವೈಜ್ಞಾನಿಕ ಸಮಗ್ರ ಕರಾವಳಿ ರಕ್ಷಣಾ ಯೋಜನೆ ರೂಪಿಸಿ ವಿಶೇಷ ಅನುದಾನ ನೀಡುವಂತೆ ಒತ್ತಾಯಿಸಿದರು.
ಮಂಗಳೂರು-ಬೆಂಗಳೂರು ಎಕ್ಸ್‌ಪ್ರೆಸ್‌ವೇ ಕಾರಿಡಾರ್ ಮತ್ತು ಮಂಗಳೂರು ಬೈಪಾಸ್ ಕಾಮಗಾರಿಗಳಿಗೆ ವೇಗ ನೀಡಲು ವಿನಂತಿಸಿದರು. ೫೦ನೇ ವರ್ಷದ ಸಂಭ್ರಮದಲ್ಲಿರುವ ನವ ಮಂಗಳೂರು ಬಂದರಿನ ಪೂರ್ಣ ಸಾಮರ್ಥ್ಯ ಬಳಕೆಗೆ ರಸ್ತೆ ಸಂಪರ್ಕ ಸುಧಾರಣೆ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಹಾಸನ-ಮಂಗಳೂರು ರೈಲು ಮಾರ್ಗದ ಶಿರಾಡಿ ಘಾಟ್ ವಿಭಾಗದ ಡಿಪಿಆರ್ (DPR) ಸಿದ್ಧಪಡಿಸಲು ಅನುಮೋದನೆ ನೀಡಿದ ರೈಲ್ವೆ ಸಚಿವರಿಗೆ ಧನ್ಯವಾದ ಸಲ್ಲಿಸಿ, ಕಾಮಗಾರಿಯನ್ನು ಶೀಘ್ರ ಆರಂಭಿಸಲು ಕೋರಿದರು.

ಇದನ್ನೂ ಓದಿ: ಮಡಿಕೇರಿ ಸಮೀಪ ಕಾಫಿತೋಟದಲ್ಲಿ ಹುಲಿ ಪ್ರತ್ಯಕ್ಷ: ಸಿಸಿ ಕ್ಯಾಮರಾದಲ್ಲಿ ಸೆರೆಯಾಯ್ತು ದೃಶ್ಯ
ಮಂಗಳೂರನ್ನು ‘ಸಿಟಿ ಎಕನಾಮಿಕ್ ರೀಜನ್’ ಯೋಜನೆಯಡಿ ಆದ್ಯತೆಯ ಮೇಲೆ ಪರಿಗಣಿಸುವಂತೆ ಹಣಕಾಸು ಸಚಿವರಿಗೆ ಮನವಿ ಮಾಡಿದರು. ಜಿಎಸ್‌ಟಿ (GST) ಸುಧಾರಣೆಗಳು ಸಾಮಾನ್ಯ ಜನರ ಬದುಕನ್ನು ಸುಲಭಗೊಳಿಸಿವೆ ಎಂದು ಶ್ಲಾಘಿಸಿದ ಅವರು, ಮಾಜಿ ಸೈನಿಕರ ಕಲ್ಯಾಣ ಮತ್ತು ಹಣಕಾಸು ಶಿಸ್ತಿನ ಬಗ್ಗೆಯೂ ಮಾತನಾಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

