ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕ್ಯಾನ್ಸರ್ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ. ಕಳೆದ ಒಂದು ವರ್ಷದಲ್ಲಿ ಸರ್ಕಾರಿ ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಒಟ್ಟು 13,322 ಮಂದಿಗೆ ಕ್ಯಾನ್ಸರ್ ಪತ್ತೆಯಾಗಿದೆ.
ರಾಜ್ಯ ಸರ್ಕಾರದ ‘ಗೃಹ ಆರೋಗ್ಯ’ ಯೋಜನೆ ಹಾಗೂ ಅಸಂಕ್ರಾಮಕ ರೋಗ ಪತ್ತೆ ಅಭಿಯಾನದಡಿ ವ್ಯಾಪಕ ತಪಾಸಣೆ ನಡೆಸಲಾಗುತ್ತಿದೆ. 2025-26ರ ಅವಧಿಯಲ್ಲಿ ಬಾಯಿ ಕ್ಯಾನ್ಸರ್ 1,540 ಮಂದಿಯಲ್ಲಿ ಪತ್ತೆಯಾಗಿದೆ. ಸ್ತನ ಕ್ಯಾನ್ಸರ್ 938 ಮಂದಿಗೆ, ಗರ್ಭಾಶಯ ಕ್ಯಾನ್ಸರ್ 539 ಮಂದಿಗೆ ಹಾಗೂ ಇತರೆ ಕ್ಯಾನ್ಸರ್ 10,305 ಮಂದಿಗೆ ದೃಢಪಟ್ಟಿದೆ.

ಸರ್ಕಾರಿ ಆಸ್ಪತ್ರೆಗಳಿಗಿಂತ ಖಾಸಗಿ ಆಸ್ಪತ್ರೆಗಳಲ್ಲಿ ಹೆಚ್ಚು ಪ್ರಕರಣಗಳು ದಾಖಲಾಗಿರುವುದು ಗಮನಾರ್ಹ. 2023-24ರಲ್ಲಿ 1,045 ಪ್ರಕರಣಗಳು ದಾಖಲಾಗಿದ್ದರೆ, 2024-25ರಲ್ಲಿ 1,411ಕ್ಕೆ ಏರಿಕೆಯಾಗಿದೆ.
ಇದನ್ನೂ ಓದಿ: ಏ.4 ರಿಂದ ಮಂಗಳೂರು ಉತ್ಸವ ಕಲರವ: ಜನಾಕರ್ಷಿಸಲಿದೆ ಡಾನ್ಸ್, ಗಾಯನ, ಆಹಾರ ಮೇಳಗಳು
ಹಿಂದಿನ ವರ್ಷದಿಂದ ಖಾಸಗಿ ಆಸ್ಪತ್ರೆಗಳ ಮಾಹಿತಿಯನ್ನೂ ಅಧಿಕೃತವಾಗಿ ದಾಖಲಿಸಲಾಗುತ್ತಿದೆ. ಜೀವನಶೈಲಿ ಬದಲಾವಣೆ ಮತ್ತು ರೋಗ ಪತ್ತೆ ಬಗ್ಗೆ ಹೆಚ್ಚಿದ ಜಾಗೃತಿ ಕಾರಣದಿಂದ ಪ್ರಕರಣಗಳ ಸಂಖ್ಯೆ ಹೆಚ್ಚಾಗಿ ಕಾಣಿಸುತ್ತಿದೆ ಎಂದು ಆರೋಗ್ಯ ಇಲಾಖೆ ತಿಳಿಸಿದೆ.
‘ಗೃಹ ಆರೋಗ್ಯ’ ಯೋಜನೆಯಡಿ ಆಶಾ ಕಾರ್ಯಕರ್ತರು ಗ್ರಾಮೀಣ ಪ್ರದೇಶಗಳಲ್ಲಿ ಮನೆಮನೆಗೆ ಭೇಟಿ ನೀಡಿ 30 ವರ್ಷ ಮೇಲ್ಪಟ್ಟವರ ತಪಾಸಣೆ ನಡೆಸುತ್ತಿರುವುದು ಕೂಡ ಹೆಚ್ಚಿನ ಪ್ರಕರಣ ಪತ್ತೆಗೆ ಕಾರಣವಾಗಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

