ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿರುವ ಪ್ರತಿಷ್ಠಿತ ಟೋಲಾನಿ ಮ್ಯಾರಿಟೈಮ್ ಇನ್‌ಸ್ಟಿಟ್ಯೂಟ್‌ನಲ್ಲಿ (Tolani Maritime Institute) ಭಾನುವಾರ ಬೆಳಿಗ್ಗೆ ಭೀಕರ ಅಪಘಾತವೊಂದು ಸಂಭವಿಸಿದೆ. ಬಾಸ್ಕೆಟ್‌ಬಾಲ್ ಕಂಬದ ಲೋಹದ ಫ್ರೇಮ್ ಕುಸಿದು ಬಿದ್ದ ಪರಿಣಾಮ 20 ವರ್ಷದ ಸಮುದ್ರ ಇಂಜಿನಿಯರಿಂಗ್ ವಿದ್ಯಾರ್ಥಿ ವಿಶಾಲ್ ವರ್ಮಾ ಸಾವನ್ನಪ್ಪಿದ್ದಾರೆ.
ಉತ್ತರ ಪ್ರದೇಶದ ಬಸ್ತಿ ಜಿಲ್ಲೆಯ ನಿವಾಸಿಯಾಗಿದ್ದ ವಿಶಾಲ್ ವರ್ಮಾ, ದ್ವಿತೀಯ ವರ್ಷದ ಮೆರೈನ್ ಇಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದರು. ಭಾನುವಾರ ಬೆಳಿಗ್ಗೆ ಕಾಲೇಜು ಆವರಣದಲ್ಲಿ ವ್ಯಾಯಾಮ ಮಾಡುತ್ತಿದ್ದ ಅವರು, ಬಾಸ್ಕೆಟ್‌ಬಾಲ್ ಹೂಪ್‌ಗೆ (Basketball Hoop) ಕೈ ಹಾಕಿ ‘ಪುಲ್ ಅಪ್ಸ್’ ಮಾಡುತ್ತಿದ್ದರು. ಈ ವೇಳೆ ಹಳೆಯದಾಗಿದ್ದ ಅಥವಾ ತುಕ್ಕು ಹಿಡಿದಿದ್ದ ಲೋಹದ ಕಂಬವು ಭಾರ ತಾಳಲಾರದೆ ಏಕಾಏಕಿ ಬುಡ ಸಮೇತ ಕಿತ್ತು ವಿಶಾಲ್ ಅವರ ತಲೆಯ ಮೇಲೆ ಬಿದ್ದಿದೆ.

ತಲೆಗೆ ಗಂಭೀರ ಪೆಟ್ಟು ಬಿದ್ದಿದ್ದರಿಂದ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಶಾಲ್ ಅವರನ್ನು ತಕ್ಷಣವೇ ಸಹಪಾಠಿಗಳು ಮತ್ತು ಕಾಲೇಜು ಸಿಬ್ಬಂದಿ ಸಮೀಪದ ಆಸ್ಪತ್ರೆಗೆ ದಾಖಲಿಸಿದರು. ಆದರೆ, ತೀವ್ರ ರಕ್ತಸ್ರಾವವಾಗಿದ್ದರಿಂದ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ ಎಂದು ವೈದ್ಯರು ಘೋಷಿಸಿದ್ದಾರೆ. 2024ರಲ್ಲಿ ಕಾಲೇಜು ಸೇರಿದ್ದ ವಿಶಾಲ್, 2028ರಲ್ಲಿ ಪದವಿ ಪಡೆಯಬೇಕಿತ್ತು.
ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ನೆತ್ತರು: ಬಾಂಬ್ ದಾಳಿಗೆ ಇಬ್ಬರು ಪುಟಾಣಿಗಳು ಬಲಿ, ತಾಯಿ ಸ್ಥಿತಿ ಗಂಭೀರ!

ಕಾಲೇಜು ಆಡಳಿತ ಮಂಡಳಿಯ ನಿರ್ಲಕ್ಷ್ಯವೇ ಈ ಸಾವಿಗೆ ಕಾರಣ ಎಂದು ಆರೋಪ ಕೇಳಿಬಂದಿದೆ. ಕ್ರೀಡಾ ಸಲಕರಣೆಗಳ ಸರಿಯಾದ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಈ ಅಪಘಾತ ಸಂಭವಿಸಿದೆ ಎಂಬ ದೂರಿನ ಮೇರೆಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನೆಯ ತಾಂತ್ರಿಕ ಕಾರಣಗಳ ಬಗ್ಗೆ ತನಿಖೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


