ಹೈದರಾಬಾದ್‌: ಸೊಳ್ಳೆ ಪರದೆ ಒಳಗೆ ಕುಳಿತುಕೊಂಡು ನೈಟ್ ಡ್ಯೂಟಿ ಮಾಡಿದ ಸೆಕ್ಯೂರಿಟಿ ಗಾರ್ಡ್; ವಿಡಿಯೋ ವೈರಲ್

ಹೈದರಾಬಾದ್: ರಾತ್ರಿ ಪಾಳಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿಯೊಬ್ಬರು ಸೊಳ್ಳೆ ಪರದೆಯೊಳಗೆ ಕುಳಿತುಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನಿವಾಸಿ ಅಪಾರ್ಟ್‌ಮೆಂಟ್‌ಗಳಲ್ಲಿ ಗಾರ್ಡ್‌ಗಳ ಕೆಲಸದ ಪರಿಸ್ಥಿತಿಯ ಕುರಿತು ಚರ್ಚೆಗೆ ಕಾರಣವಾಗಿದೆ.

ಈ ವಿಡಿಯೋವನ್ನು ‘ಎಕ್ಸ್’ (X) ನಲ್ಲಿ ಸುರಜ್ ಕುಮಾರ್ ಬೌದ್ಧ್ ಎಂಬ ಬಳಕೆದಾರರು ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಭದ್ರತಾ ಸಿಬ್ಬಂದಿಯೊಬ್ಬರು ಕುರ್ಚಿಯಲ್ಲಿ ಕುಳಿತು ಸೊಳ್ಳೆ ಪರದೆ ಹೊದಿಸಿಕೊಂಡಿರುವ ದೃಶ್ಯವಿದೆ. ಈ ವೇಳೆ ಮಹಿಳೆಯೊಬ್ಬರು ಗಾರ್ಡ್ ಜೊತೆ ಮಾತನಾಡುತ್ತಿದ್ದು, ಗಾರ್ಡ್‌ ಅವರು ರಾತ್ರಿ ಪೂರ್ತಿ ಎಚ್ಚರಿಕೆಯಿಂದ ಕರ್ತವ್ಯ ನಿರ್ವಹಿಸುತ್ತಿರುವುದು ಕಂಡುಬರುತ್ತದೆ.

ಇದನ್ನೂ ಓದಿ: ಲವ್ ಗಿಫ್ಟ್ ಗಾಗಿ ಲಾಕ್ ಬ್ರೇಕ್: ಯುವತಿಯ ದುಸ್ಸಾಹಸ ಕೊನೆಗೂ ವಿಫಲ

ವಿಡಿಯೋ ಹಂಚಿಕೊಂಡ ಸುರಜ್ ಕುಮಾರ್ ಬೌದ್ಧ್ ಅವರು, “ಭಾರತದಲ್ಲಿ ಸೆಕ್ಯೂರಿಟಿ ಗಾರ್ಡ್‌ಗಳ ಜೀವನ ಇದು. ಬಡ ಗಾರ್ಡ್ ಸೊಳ್ಳೆ ಪರದೆಯೊಳಗೆ ಕುಳಿತು ರಾತ್ರಿಯಿಡೀ ಎಚ್ಚರಿಕೆಯಿಂದ ಕರ್ತವ್ಯ ಮಾಡುತ್ತಿದ್ದಾರೆ. ಸಮಾಜದ ಸದಸ್ಯರು ಏಸಿ ರೂಮ್‌ಗಳಲ್ಲಿ ಆರಾಮವಾಗಿ ಇರುತ್ತಾರೆ. ಗಾರ್ಡ್‌ಗೆ ಸುರಕ್ಷಿತ ಸ್ಥಳ ಒದಗಿಸಲು ಸಾಧ್ಯವಿಲ್ಲವೇ? ನಿಜವಾದ ಸಮಸ್ಯೆ ಕರುಣೆ. ಜನರು ಬಡವರ ಮೇಲಿನ ಕರುಣೆಯನ್ನು ಕಳೆದುಕೊಂಡಿದ್ದಾರೆ” ಎಂದು ಬರೆದುಕೊಂಡಿದ್ದಾರೆ.

ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಡಿದ್ದು, 4 ಲಕ್ಷಕ್ಕೂ ಅಧಿಕ ವೀಕ್ಷಣೆ ಪಡೆದುಕೊಂಡಿದೆ. ಜೊತೆಗೆ ಅನೇಕರು ಗಾರ್ಡ್‌ಗಳಿಗೆ ಅಗತ್ಯ ಮೂಲ ಸೌಲಭ್ಯಗಳ ಕೊರತೆಯ ಬಗ್ಗೆ ಪ್ರಶ್ನಿಸಿದ್ದಾರೆ.

ಈ ಘಟನೆಯು ಭದ್ರತಾ ಸಿಬ್ಬಂದಿಗೆ ಕನಿಷ್ಠ ಸೌಲಭ್ಯಗಳು, ವಿಶ್ರಾಂತಿ ವ್ಯವಸ್ಥೆ ಮತ್ತು ಮಾನವೀಯ ವರ್ತನೆ ಒದಗಿಸುವ ಅಗತ್ಯವಿದೆ ಎಂಬುದನ್ನು ಮತ್ತೊಮ್ಮೆ ಸಮಾಜದ ಗಮನಕ್ಕೆ ತಂದಿದೆ.

ವೈರಲ್ ವಿಡಿಯೋಗಳನ ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ