ಮಂಗಳೂರು: ನಗರದಲ್ಲಿ ಮಾದಕ ದ್ರವ್ಯ ಜಾಲದ ವಿರುದ್ಧ ಕಂಕನಾಡಿ ಟೌನ್ ಪೊಲೀಸರು ಬೃಹತ್ ಕಾರ್ಯಾಚರಣೆ ನಡೆಸಿದ್ದು, ಲಕ್ಷಾಂತರ ರೂಪಾಯಿ ಮೌಲ್ಯದ ಎಂಡಿಎಂಎ ಮಾದಕ ವಸ್ತುವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ.
ಏಪ್ರಿಲ್ 19, ಭಾನುವಾರದಂದು ಮಂಗಳೂರಿನ ಜೆಪ್ಪಿನಮೊಗರು ಬಳಿ ದ್ವಿಚಕ್ರ ವಾಹನದಲ್ಲಿ ಮಾದಕ ದ್ರವ್ಯ ಸಾಗಾಟ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಪೊಲೀಸರಿಗೆ ಲಭಿಸಿತ್ತು. ತಕ್ಷಣ ಕಾರ್ಯಪ್ರವೃತ್ತರಾದ ಕಂಕನಾಡಿ ಪೊಲೀಸರು, ದಾಳಿ ನಡೆಸಿ ಬಜಾಜ್ ಫ್ರೀಡಂ (KA 70 K 3333) ಮೋಟಾರ್ ಸೈಕಲ್ ಅನ್ನು ತಡೆದು ತಪಾಸಣೆ ನಡೆಸಿದಾಗ ಮಾದಕ ಜಾಲ ಪತ್ತೆಯಾಗಿದೆ.

ಬಂಧಿತರನ್ನು ಮಂಗಳೂರಿನ ಪೆರ್ಮನ್ನೂರು ನಿವಾಸಿಗಳಾದ ಪರ್ವೇಜ್ ಅಲಿಯಾಸ್ ದಾವೂದ್ ಪರ್ವೇಜ್ (40) ಮತ್ತು ನಜರೆತ್ ಅಲಿ (37) ಎಂದು ಗುರುತಿಸಲಾಗಿದೆ. ಇವರ ಬಳಿಯಿದ್ದ ಸುಮಾರು 465.8 ಗ್ರಾಂ ಎಂಡಿಎಂಎ ವಶಪಡಿಸಿಕೊಳ್ಳಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯ ಅಂದಾಜು 46.5 ಲಕ್ಷ ರೂಪಾಯಿ ಎಂದು ಅಂದಾಜಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಆರೋಪಿ ಪರ್ವೇಜ್ ಹೊರ ಜಿಲ್ಲೆಗಳಿಂದ ದೊಡ್ಡ ಪ್ರಮಾಣದಲ್ಲಿ ಮಾದಕ ದ್ರವ್ಯಗಳನ್ನು ತರಿಸಿ ಮಂಗಳೂರು ನಗರದ ಯುವಕರು ಮತ್ತು ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದ ಎನ್ನುವ ಸ್ಫೋಟಕ ಮಾಹಿತಿ ಬೆಳಕಿಗೆ ಬಂದಿದೆ.

ಇದನ್ನೂ ಓದಿ: ಉಧಂಪುರದಲ್ಲಿ ಭೀಕರ ಬಸ್ ಅಪಘಾತ: ಆಳವಾದ ಪ್ರಪಾತಕ್ಕೆ ಉರುಳಿದ ಬಸ್; 15 ಪ್ರಯಾಣಿಕರ ಸಾವು, ಹಲವರು ಗಂಭೀರ!
ಮುಖ್ಯ ಆರೋಪಿ ಪರ್ವೇಜ್ ಒಬ್ಬ ಹವ್ಯಾಸಿ ಅಪರಾಧಿಯಾಗಿದ್ದು, ಈತನ ವಿರುದ್ಧ ಈಗಾಗಲೇ ಮಂಗಳೂರಿನ ಪಾಂಡೇಶ್ವರ, ವಾಮಂಜೂರು, ಬಂದರು ಹಾಗೂ ಬೆಂಗಳೂರಿನ ಅಮೃತಹಳ್ಳಿ ಮತ್ತು ಉಡುಪಿ ಸಿಇಎನ್ ಪೊಲೀಸ್ ಠಾಣೆಗಳಲ್ಲಿ ಹಲವು ಎನ್‌ಡಿಪಿಎಸ್ (NDPS) ಪ್ರಕರಣಗಳು ದಾಖಲಾಗಿವೆ. ನಜರೆತ್ ಅಲಿ ಈ ಜಾಲದಲ್ಲಿ ಸಕ್ರಿಯವಾಗಿ ಸಹಕರಿಸುತ್ತಿದ್ದ ಎನ್ನಲಾಗಿದೆ.
ದೇಶದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

