ಸುಳ್ಯ: ಮಹಿಳಾ ಮೀಸಲಾತಿ ಮಸೂದೆಗೆ ಅಡ್ಡಿಪಡಿಸುತ್ತಿರುವ ಕಾಂಗ್ರೆಸ್ ಮತ್ತು ಅದರ ಮಿತ್ರಪಕ್ಷಗಳಾದ ಇಂಡಿ (I.N.D.I.A) ಒಕ್ಕೂಟದ ನಡೆಯು ‘ಮಹಿಳಾ ವಿರೋಧಿ’ ಧೋರಣೆಯಾಗಿದೆ ಎಂದು ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ ತೀವ್ರವಾಗಿ ಖಂಡಿಸಿದ್ದಾರೆ.
ಪತ್ರಿಕಾ ಪ್ರಕಟಣೆ ಹೊರಡಿಸಿರುವ ಶಾಸಕರು, “ದಶಕಗಳ ಕಾಲ ಮಹಿಳಾ ಸಬಲೀಕರಣದ ಬಗ್ಗೆ ಕೇವಲ ಭಾಷಣಗಳಿಗೆ ಸೀಮಿತವಾಗಿದ್ದ ಕಾಂಗ್ರೆಸ್, ಇಂದು ಸಂಸತ್ತಿನಲ್ಲಿ ಮಸೂದೆಯ ವಿರುದ್ಧ ಮತ ಚಲಾಯಿಸುವ ಮೂಲಕ ತನ್ನ ನೈಜ ಮುಖವನ್ನು ಪ್ರದರ್ಶಿಸಿದೆ. ಮಾತೃಶಕ್ತಿಗೆ ಸಂವಿಧಾನಾತ್ಮಕ ಅಧಿಕಾರ ನೀಡುವ ಐತಿಹಾಸಿಕ ಸಂದರ್ಭದಲ್ಲಿ ಕಾಂಗ್ರೆಸ್ ಬೆನ್ನು ತೋರಿಸಿ ಮಹಿಳೆಯರಿಗೆ ದ್ರೋಹ ಬಗೆದಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಮಹಿಳೆಯರು ದೇಶದ ಅಭಿವೃದ್ಧಿಯ ಚಕ್ರವಿದ್ದಂತೆ. ಅವರಿಗೆ ಶಾಸನಸಭೆಗಳಲ್ಲಿ ಸೂಕ್ತ ಪ್ರಾತಿನಿಧ್ಯ ಸಿಗಬಾರದು ಎಂಬ ಹಠಮಾರಿ ಧೋರಣೆ ಕಾಂಗ್ರೆಸ್ ಒಕ್ಕೂಟದ ಪ್ರಗತಿವಿರೋಧಿ ನೀತಿಗೆ ಸಾಕ್ಷಿಯಾಗಿದೆ. ಇದು ಕೇವಲ ರಾಜಕೀಯ ನಿರ್ಧಾರವಲ್ಲ, ಅರ್ಧದಷ್ಟು ಜನಸಂಖ್ಯೆಯ ಹಕ್ಕನ್ನು ಕಸಿದುಕೊಳ್ಳುವ ಸಂಕುಚಿತ ಮನಸ್ಥಿತಿಯಾಗಿದೆ ಎಂದು ಅವರು ಕಿಡಿಕಾರಿದರು.
ಇದನ್ನೂ ಓದಿ: ಮಂಗಳೂರಿನಲ್ಲಿ ಸಂಸದ ಕ್ಯಾ. ಚೌಟ ಅವರನ್ನು ಭೇಟಿ ಮಾಡಿದ ಆಸ್ಟ್ರೇಲಿಯಾ ಕಾನ್ಸುಲ್ ಜನರಲ್ ಹಿಲರಿ ಮೆಕ್‌ಗೀಚಿ

“ಅಧಿಕಾರದ ಹಪಾಹಪಿಯಲ್ಲಿರುವ ಇವರಿಗೆ ಮಹಿಳೆಯರ ಹಕ್ಕುಗಳಿಗಿಂತ ರಾಜಕೀಯ ಹಿತಾಸಕ್ತಿಯೇ ದೊಡ್ಡದಾಗಿದೆ. ಈ ಜನವಿರೋಧಿ ನಿಲುವನ್ನು ದೇಶದ ಮಹಿಳೆಯರು ಎಂದಿಗೂ ಕ್ಷಮಿಸುವುದಿಲ್ಲ. ಬರುವ ದಿನಗಳಲ್ಲಿ ಜನರೇ ತಕ್ಕ ಪಾಠ ಕಲಿಸಲಿದ್ದಾರೆ. ಈ ಕೂಡಲೇ ಕಾಂಗ್ರೆಸ್ ನಾಯಕರು ಮಹಿಳೆಯರಲ್ಲಿ ಕ್ಷಮೆಯಾಚಿಸಬೇಕು” ಎಂದು ಶಾಸಕಿ ಭಾಗೀರಥಿ ಮುರುಳ್ಯ ಎಚ್ಚರಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

