ಕೋಲ್ಕತ್ತಾ ನೈಟ್ ರೈಡರ್ಸ್ ತಂಡವು ಗುಜರಾತ್ ಟೈಟಾನ್ಸ್ ವಿರುದ್ಧ ನಡೆದ ಐಪಿಎಲ್ 60ನೇ ಪಂದ್ಯದಲ್ಲಿ 29 ರನ್ಗಳ ಭರ್ಜರಿ ಗೆಲುವು ದಾಖಲಿಸಿದೆ. ಇಡೇನ್ ಗಾರ್ಡನ್ಸ್ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಕೋಲ್ಕತ್ತಾ, ಕೇವಲ 2 ವಿಕೆಟ್ ನಷ್ಟಕ್ಕೆ 247 ರನ್ಗಳ ಪರ್ವತಾಕಾರದ ಮೊತ್ತ ಕಲೆಹಾಕಿತು.
ಕೋಲ್ಕತ್ತಾ ಪರ ಆರಂಭದಿಂದಲೇ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ಫಿನ್ ಅಲೆನ್ ಕೇವಲ 35 ಎಸೆತಗಳಲ್ಲಿ 4 ಬೌಂಡರಿ ಹಾಗೂ 10 ಭರ್ಜರಿ ಸಿಕ್ಸರ್ಗಳ ನೆರವಿನಿಂದ 93 ರನ್ ಸಿಡಿಸಿ ತಂಡಕ್ಕೆ ಭದ್ರ ಅಡಿಪಾಯ ಹಾಕಿದರು.
ಇವರಿಗೆ ಉತ್ತಮ ಸಾಥ್ ನೀಡಿದ ಅಂಗ್ಕ್ರಿಶ್ ರಘುವಂಶಿ 44 ಎಸೆತಗಳಲ್ಲಿ 4 ಬೌಂಡರಿ ಮತ್ತು 7 ಸಿಕ್ಸರ್ಗಳೊಂದಿಗೆ 82 ರನ್ ಗಳಿಸಿ ಮಿಂಚಿದರು. ಅಂತಿಮ ಹಂತದಲ್ಲಿ ಕ್ಯಾಮೆರಾನ ಗ್ರೀನ್ ಅಜೇಯ 52 ರನ್ ಬಾರಿಸಿದರೆ, ಅಜಿಂಕ್ಯ ರಹಾನೆ 14 ರನ್ ಗಳಿಸಿದರು.
ಗುಜರಾತ್ ಪರ ಮೊಹಮ್ಮದ್ ಸಿರಾಜ್ ಹಾಗೂ ಸಾಯಿ ಕಿಶೋರ್ ತಲಾ ಒಂದೊಂದು ವಿಕೆಟ್ ಪಡೆದರು.
ಇದನ್ನೂ ಓದಿ: IPL: ಮಾರ್ಷ್ ಸಿಡಿಲಾಟಕ್ಕೆ ಮಣಿದ ಚೆನ್ನೈ; ಲಕ್ನೋಗೆ 7 ವಿಕೆಟ್ಗಳ ರೋಚಕ ಜಯ
248 ರನ್ಗಳ ಕಠಿಣ ಗುರಿ ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು ಉತ್ತಮ ಆರಂಭ ಪಡೆದರೂ, ನಿರಂತರವಾಗಿ ಏರಿಕೆಯಾಗುತ್ತಿದ್ದ ಅಗತ್ಯ ರನ್ರೇಟ್ ಒತ್ತಡಕ್ಕೆ ಮಣಿಯಿತು. 20 ಓವರ್ಗಳಲ್ಲಿ 4 ವಿಕೆಟ್ ಕಳೆದುಕೊಂಡು 218 ರನ್ ಗಳಿಸಲಷ್ಟೇ ಶಕ್ತವಾಯಿತು.
ತಂಡದ ಪರ ನಾಯಕ ಶುಭ್ಮನ್ ಗಿಲ್ 49 ಎಸೆತಗಳಲ್ಲಿ 5 ಬೌಂಡರಿ ಹಾಗೂ 7 ಸಿಕ್ಸರ್ಗಳ ನೆರವಿನಿಂದ 85 ರನ್ ಗಳಿಸಿ ಹೋರಾಟ ನಡೆಸಿದರು. ಸಾಯಿ ಸುದರ್ಶನ್ 53 ರನ್ಗಳ ಅಜೇಯ ಇನ್ನಿಂಗ್ಸ್ ಆಡಿದರೆ, ಜೋಸ್ ಬಟ್ಲರ್ 57 ರನ್ಗಳ ಕೊಡುಗೆ ನೀಡಿದರು. ಉಳಿದಂತೆ ರಾಹುಲ್ ತೆವಟಿಯಾ 2 ಹಾಗೂ ನಿಶಾಂತ್ ಸಿಂಧು 1 ರನ್ ಗಳಿಸಿದರು.
ಕೋಲ್ಕತ್ತಾ ಪರ ಸುನೀಲ್ ನರೈನ್ 2 ವಿಕೆಟ್ ಪಡೆದು ಮಿಂಚಿದರೆ, ಸೌರಭ್ ದುಬೆ ಮತ್ತು ಕ್ಯಾಮೆರಾನ್ ಗ್ರೀನ್ ತಲಾ ಒಂದೊಂದು ವಿಕೆಟ್ ಪಡೆದರು.
ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


