ವೈಭವ್ ಸೂರ್ಯವಂಶಿಯ ಐತಿಹಾಸಿಕ ದಾಖಲೆ! ಕಮ್ಮಿನ್ಸ್ ಬೆವರಿಳಿಸಿ ಕೇವಲ 28 ಎಸೆತಗಳಲ್ಲಿ 97 ರನ್ ಚಚ್ಚಿದ 15 ವರ್ಷದ ಬಾಲಕ

ಅಹಮದಾಬಾದ್: ಐಪಿಎಲ್ 2026 ರ ಅತ್ಯಂತ ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ಕ್ರಿಕೆಟ್ ಜಗತ್ತು ಹಿಂದೆಂದೂ ಕಾಣದ ಅದ್ಭುತವೊಂದಕ್ಕೆ ಸಾಕ್ಷಿಯಾಗಿದೆ. ತಾನು ಕ್ರೀಸ್‌ನಲ್ಲಿ ಇರುವವರೆಗೂ ಎದುರಾಳಿ ಬೌಲರ್‌ಗಳ ಗುಂಡಿಗೆಯ ಬಡಿತ ಹೆಚ್ಚಿಸುವ 15 ವರ್ಷದ ಹಾಲ್ಗೆನ್ನೆಯ ಯುವ ಪ್ರತಿಭೆ ವೈಭವ್ ಸೂರ್ಯವಂಶಿ (Vaibhav Sooryavanshi), ಸನ್‌ರೈಸರ್ಸ್ ಹೈದರಾಬಾದ್ (SRH) ವಿರುದ್ಧದ ಪಂದ್ಯದಲ್ಲಿ ಅಕ್ಷರಶಃ ರನ್ ಸುನಾಮಿ ಸೃಷ್ಟಿಸಿದ್ದಾರೆ. ಟಿ20 ಕ್ರಿಕೆಟ್‌ಗೆ ತಾನೇ ಬಾಸ್ ಎಂಬುದನ್ನು ಸಾಬೀತುಪಡಿಸಿದ ವೈಭವ್ ಅಬ್ಬರಕ್ಕೆ ಹೈದರಾಬಾದ್ ತಂಡ ಹೆಣೆದಿದ್ದ ಎಲ್ಲಾ ರಣತಂತ್ರಗಳು ಧೂಳೀಪಟವಾಗಿವೆ.

ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬೌಲಿಂಗ್ ಆಯ್ದುಕೊಂಡ ಸನ್‌ರೈಸರ್ಸ್ ನಾಯಕ,  ಪ್ಯಾಟ್ ಕಮ್ಮಿನ್ಸ್ (Pat Cummins) ಅವರಿಗೆ ವೈಭವ್ ಚುಕ್ಕೆ ತೋರಿಸಿದರು. ಕಮ್ಮಿನ್ಸ್ ಓವರ್‌ನಲ್ಲೇ ಹ್ಯಾಟ್ರಿಕ್ ಸಿಕ್ಸರ್ ಸೇರಿದಂತೆ ಬರೋಬ್ಬರಿ 25 ರನ್ ಚಚ್ಚಿದ ವೈಭವ್, ಎಸ್‌ಆರ್‌ಎಚ್ ಆಟಗಾರರು ತಲೆ ಮೇಲೆ ಕೈಹೊತ್ತು ಕೂರುವಂತೆ ಮಾಡಿದರು. ಬೌಲರ್‌ಗಳನ್ನು ದಂಡಿಸುವುದನ್ನೇ ಕಾಯಕ ಮಾಡಿಕೊಂಡಂತೆ ಬ್ಯಾಟ್ ಬೀಸಿದ ಈ ಯುವ ಬ್ಯಾಟರ್, ಕೇವಲ 16 ಎಸೆತಗಳಲ್ಲಿ ತಮ್ಮ ಸ್ಫೋಟಕ ಅರ್ಧಶತಕ ಪೂರೈಸಿದರು. ಈ ಮೂಲಕ ಐಪಿಎಲ್ ಪ್ಲೇಆಫ್‌ (IPL Playoffs) ಇತಿಹಾಸದಲ್ಲೇ ಅತ್ಯಂತ ವೇಗದ ಅರ್ಧಶತಕ ಬಾರಿಸಿದ ಸಾರ್ವಕಾಲಿಕ ದಾಖಲೆಯನ್ನು ತಮ್ಮ ಹೆಸರಿಗೆ ಬರೆದುಕೊಂಡರು. ವಿಶೇಷವೆಂದರೆ ಈ ಅರ್ಧಶತಕದ ಇನ್ನಿಂಗ್ಸ್‌ನಲ್ಲಿ 8 ಸಿಕ್ಸರ್ ಹಾಗೂ 1 ಬೌಂಡರಿ ಸೇರಿತ್ತು.

ಇದನ್ನೂ ಓದಿ: ಧೋನಿ ಕಾಲ್ ಬಳಿಕ ಸತ್ಯ ಗೊತ್ತಾಯಿತು: ಕೊಹ್ಲಿ, ಶಾಸ್ತ್ರಿ ವಿರುದ್ಧ ಯುವರಾಜ್‌ ಸಿಂಗ್‌ ಅಸಮಾಧಾನ

ಅರ್ಧಶತಕದ ಬಳಿಕ ಮತ್ತಷ್ಟು ಉಗ್ರರೂಪ ತಾಳಿದ ವೈಭವ್ ಸೂರ್ಯವಂಶಿ, ಎಸ್‌ಆರ್‌ಎಚ್‌ನ ಪ್ರತಿಯೊಬ್ಬ ಬೌಲರ್ ಮೇಲೂ ಸವಾರಿ ಮಾಡಿದರು. ಕೇವಲ 28 ಎಸೆತಗಳನ್ನು ಎದುರಿಸಿದ ಅವರು ಬರೋಬ್ಬರಿ 97 ರನ್ ಕಲೆಹಾಕಿದರು. ಅಂದರೆ, 50 ರನ್‌ಗಳಿಂದ 97 ರನ್ ತಲುಪಲು ಅವರು ತೆಗೆದುಕೊಂಡಿದ್ದು ಕೇವಲ 12 ಎಸೆತಗಳನ್ನು ಮಾತ್ರ! ಕೇವಲ 3 ರನ್‌ಗಳಿಂದ ಶತಕ ವಂಚಿತರಾದರೂ, ಅವರ ಈ ಐತಿಹಾಸಿಕ ಮತ್ತು ಅತಿಮಾನುಷ ಬ್ಯಾಟಿಂಗ್ ನೆರವಿನಿಂದ ರಾಜಸ್ಥಾನ್ ರಾಯಲ್ಸ್ ತಂಡವು ಕೇವಲ 8 ಓವರ್‌ಗಳಲ್ಲಿ 125 ರನ್‌ಗಳ ಗಡಿ ದಾಟಿ ಬೃಹತ್ ಮೊತ್ತದತ್ತ ಮುನ್ನುಗ್ಗಿತು.

‘ಯೂನಿವರ್ಸ್ ಬಾಸ್’ ಕ್ರಿಸ್ ಗೈಲ್ ರೆಕಾರ್ಡ್ ಧೂಳೀಪಟ

ಕಳೆದ 2012 ರ ಐಪಿಎಲ್ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಪರ ಆಡಿದ್ದ ವೆಸ್ಟ್ ಇಂಡೀಸ್‌ನ ದೈತ್ಯ ಬ್ಯಾಟರ್ ಕ್ರಿಸ್ ಗೈಲ್, ಇಡೀ ಟೂರ್ನಿಯಲ್ಲಿ ಬರೋಬ್ಬರಿ 59 ಸಿಕ್ಸರ್‌ಗಳನ್ನು ಸಿಡಿಸಿ ಜಗತ್ತನ್ನೇ ಬೆರಗುಗೊಳಿಸಿದ್ದರು. ಒಂದೇ ಸೀಸನ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಈ ವಿರಾಟ ದಾಖಲೆ ಕಳೆದ 14 ವರ್ಷಗಳಿಂದ ಯಾರ ಕೈಗೂ ಸಿಗದೆ ಶಾಶ್ವತವಾಗಿ ಉಳಿದಿತ್ತು. ಆದರೆ, ಈ ಬಾರಿ ರಾಜಸ್ಥಾನ್ ರಾಯಲ್ಸ್ ಪರ ಕಣಕ್ಕಿಳಿದಿರುವ ವೈಭವ್, ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ ಎಲಿಮಿನೇಟರ್ ಪಂದ್ಯದಲ್ಲಿ ಸಿಕ್ಸರ್‌ಗಳ ಭರ್ಜರಿ ಬೇಟೆಯಾಡುವ ಮೂಲಕ ಪ್ರಸಕ್ತ ಸೀಸನ್‌ನಲ್ಲಿ ತಮ್ಮ ಒಟ್ಟು ಸಿಕ್ಸರ್‌ಗಳ ಸಂಖ್ಯೆಯನ್ನು 61ಕ್ಕೆ (61 Sixes) ಏರಿಸಿದ್ದಾರೆ. ಈ ಮೂಲಕ ಗೈಲ್ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಿದ್ದಾರೆ.

ಕ್ರಿಕೆಟ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು