ದೆಹಲಿ: ಭಾರತೀಯ ಸೇನೆಯ ಯೋಧರೊಬ್ಬರು ತಮ್ಮ ವೃತ್ತಿಜೀವನದ ಅತ್ಯಂತ ಮಹತ್ವದ ದಿನವನ್ನು ವೈಯಕ್ತಿಕ ಜೀವನದ ಮರೆಯಲಾಗದ ಕ್ಷಣವನ್ನಾಗಿ ಪರಿವರ್ತಿಸಿದ ಅಪರೂಪದ ಘಟನೆಯೊಂದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡುತ್ತಿದೆ. ಮಹಾರಾಷ್ಟ್ರದ ನಾಸಿಕ್‌ನಲ್ಲಿರುವ ‘ಕಾಂಬ್ಯಾಟ್ ಆರ್ಮಿ ಏವಿಯೇಷನ್ ಟ್ರೈನಿಂಗ್ ಸ್ಕೂಲ್’ (CAATS) ನಲ್ಲಿ ತರಬೇತಿ ಮುಗಿಸಿ ಪೈಲಟ್ ಆಗಿ ಹೊರಹೊಮ್ಮಿದ ಅಧಿಕಾರಿಯೊಬ್ಬರು, ಘಟಿಕೋತ್ಸವ ಮುಗಿದ ತಕ್ಷಣವೇ ಎಲ್ಲರ ಸಮ್ಮುಖದಲ್ಲಿ ತಮ್ಮ ಪ್ರೇಯಸಿಗೆ ವಿಶಿಷ್ಟವಾಗಿ ಪ್ರೇಮ ನಿವೇದನೆ (Love Proposal) ಮಾಡಿದ್ದಾರೆ.
ತರಬೇತಿ ಮುಗಿದ ಬೆನ್ನಲ್ಲೇ ಸರ್ಪ್ರೈಸ್ ಪ್ರಪೋಸಲ್:
ಆರ್ಮಿ ಏವಿಯೇಷನ್‌ನ ಪ್ರಶಿಕ್ಷಣಾರ್ಥಿ ಪೈಲಟ್‌ಗಳ ಕಠಿಣ ತರಬೇತಿ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯಗೊಂಡ ಹಿನ್ನೆಲೆಯಲ್ಲಿ ಅಲ್ಲಿ ಭವ್ಯ ಘಟಿಕೋತ್ಸವ ಸಮಾರಂಭ ಹಮ್ಮಿಕೊಳ್ಳಲಾಗಿತ್ತು. ಎಲ್ಲಾ ಯೋಧರು ತಮ್ಮ ವೃತ್ತಿಜೀವನದ ದೊಡ್ಡ ಮೈಲಿಗಲ್ಲನ್ನು ಸಂಭ್ರಮಿಸುತ್ತಿದ್ದಾಗ, ಯುವ ಅಧಿಕಾರಿ ಭರತ್ ಭಾರದ್ವಾಜ್ ಎಲ್ಲರಿಗೂ ಸರ್ಪ್ರೈಸ್ ನೀಡಿದ್ದಾರೆ.
ಇಲ್ಲಿದೆ ನೋಡಿ ವಿಡಿಯೋ:
#WATCH | Maharashtra: The passing out parade at the Combat Army Aviation Training School in Nashik, concluded on an emotional note for a couple as Captain Bharat Bhardwaj proposed marriage to his partner. pic.twitter.com/8Un1ZNBP1F
— ANI (@ANI) June 2, 2026
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ, ಅಧಿಕಾರಿ ಭರತ್ ಭಾರದ್ವಾಜ್ ಅವರು ತಮ್ಮ ಪ್ರೇಯಸಿ ಆರುಷಿ ಅವರ ಕೈ ಹಿಡಿದು ರನ್‌ವೇನಲ್ಲಿ ನಿಲ್ಲಿಸಲಾಗಿದ್ದ ಸೇನಾ ಹೆಲಿಕಾಪ್ಟರ್‌ನತ್ತ ಕರೆದೊಯ್ಯುವುದನ್ನು ಕಾಣಬಹುದು. ಅಲ್ಲಿ ನೆರೆದಿದ್ದ ಕುಟುಂಬಸ್ಥರು, ಸಹೋದ್ಯೋಗಿ ಅಧಿಕಾರಿಗಳು ಮತ್ತು ಅತಿಥಿಗಳು ನೋಡುತ್ತಿದ್ದಂತೆಯೇ, ಭರತ್ ಭಾರದ್ವಾಜ್ ಅವರು ಮಂಡಿಯೂರಿ ಆರುಷಿ ಅವರಿಗೆ ಪ್ರೇಮ ನಿವೇದನೆ ಮಾಡಿ ಉಂಗುರವನ್ನು ತೊಡಿಸಿದರು.
ತಮ್ಮ ಕಠಿಣ ತರಬೇತಿಯ ಸಂಕೇತವಾಗಿ ನಿಂತಿದ್ದ ಹೆಲಿಕಾಪ್ಟರ್ ಮುಂಭಾಗದಲ್ಲೇ ನಡೆದ ಈ ಅನಿರೀಕ್ಷಿತ ಪ್ರೇಮ ನಿವೇದನೆ ಅಲ್ಲಿದ್ದವರ ಗಮನ ಸೆಳೆಯಿತು. ಸೇನಾ ಶಿಸ್ತಿನ ಔಪಚಾರಿಕ ಕಾರ್ಯಕ್ರಮವು ಕೆಲವೇ ಕ್ಷಣಗಳಲ್ಲಿ ಅತ್ಯಂತ ಸುಂದರ ಹಾಗೂ ಭಾವನಾತ್ಮಕ ಆಚರಣೆಯಾಗಿ ಬದಲಾಯಿತು. ಆರುಷಿ ಅವರು ತಕ್ಷಣವೇ ಪ್ರಪೋಸಲ್ ಒಪ್ಪಿಕೊಳ್ಳುತ್ತಿದ್ದಂತೆ ಸುತ್ತಲೂ ನೆರೆದಿದ್ದ ಸಹೋದ್ಯೋಗಿ ಯೋಧರು ಮತ್ತು ಕುಟುಂಬಸ್ಥರು ಚಪ್ಪಾಳೆ ತಟ್ಟಿ, ಹರ್ಷೋದ್ಗಾರಗಳ ಮೂಲಕ ದಂಪತಿಯನ್ನು ಆಲಂಗಿಸಿ ಶುಭ ಹಾರೈಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಯುವ ಅಧಿಕಾರಿಯ ಸಮಯಪ್ರಜ್ಞೆ ಮತ್ತು ರೋಮ್ಯಾಂಟಿಕ್ ಶೈಲಿಗೆ ಮನಸೋತಿದ್ದಾರೆ. ಯುವ ಅಧಿಕಾರಿಗೆ ದೇಶಸೇವೆ ಮತ್ತು ವೈಯಕ್ತಿಕ ಜೀವನ ಎರಡರಲ್ಲೂ ಹೊಸ ಅಧ್ಯಾಯ ಆರಂಭವಾಗಿದೆ ಎಂದು ಹಲವರು ಕಾಮೆಂಟ್ ಮಾಡಿದ್ದಾರೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


