ಕಡಬ: ತಂದೆಗೆ ಚಾಕು ಇರಿದ ಬಳಿಕ ಬಂದೂಕಿನಿಂದ ಗುಂಡು ಹಾರಿಸಿ ಮಗ ಆತ್ಮಹತ್ಯೆ ಮಾಡಿಕೊಂಡ ಪ್ರಕರಣ ಉಲ್ಟಾ ಹೊಡೆದಿದೆ. ಹೌದು, ತನ್ನ ಮಗನನ್ನು ಪತಿಯೇ ಗುಂಡು ಹಾರಿಸಿ ಕೊಂದಿರುವುದಾಗಿ ಆರೋಪಿಸಿ ಪತ್ನಿ ಠಾಣೆ ಮೆಟ್ಟಿಲೇರಿದ್ದಾರೆ.
ಜ.24 ರಂದು ಸಂಜೆ 4:30 ರ ವೇಳೆಗೆ ತಂದೆ ಮಗನ ನಡುವೆ ಜಗಳ ನಡೆದು ಮಗ ಮೋಕ್ಷ ತನ್ನ ತಂದೆ ವಸಂತ ಅಮೀನ್ ಅವರಿಗೆ ಚಾಕುವಿನಿಂದ ಇರಿದು ಬಳಿಕ ತಾನು ಗುಂಡು ಹಾರಿಸಿ ಆತ್ಮಹತ್ಯೆ ಮಾಡಿಕೊಂಡಿದ್ದನು. ಆದರೆ, ಮನೆಗೆ ಬಂದ ಮಂಗಳೂರಿನಲ್ಲಿ ನ್ಯಾಯವಾದಿಯಾಗಿರುವ ಜಯಶ್ರೀಯವರ ಸಹೋದರ ಶ್ರೀಧರ ಹಾಗೂ ಇತರ ಮೂವರು ಸಹೋದರರ ಮುಂದೆ ವಸಂತ ಅಮೀನ್ ಅವರೇ ಮಗನನ್ನು ಕೊಂದು ಚೂರಿಯಲ್ಲಿ ಇರಿದುಕೊಂಡು ನಾಟಕವಾಡುತ್ತಿದ್ದಾರೆ ಎಂದು ಹೇಳಿಕೊಂಡಿದ್ದಾರೆ. ಅಲ್ಲದೆ, ಪತಿ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: WPL: ಆರ್ಸಿಬಿ ಗೆಲುವಿನ ನಾಗಾಲೋಟಕ್ಕೆ ಬ್ರೇಕ್ ಹಾಕಿದ ಡೆಲ್ಲಿ ಕ್ಯಾಪಿಟಲ್ಸ್
17 ವರ್ಷದ ಮೋಕ್ಷ್ ಎಸ್ಎಸ್ಎಲ್ಸಿ ತನಕ ಉಪ್ಪಿನಂಗಡಿಯ ವಿದ್ಯಾಸಂಸ್ಥೆಯೊಂದರಲ್ಲಿ ವ್ಯಾಸಂಗ ಮಾಡಿದ್ದು, ಬಳಿಕ ಪಿಯುಸಿಗೆ ದಾಖಲಾಗಿದ್ದರೂ ಕಾಲೇಜಿಗೆ ಹೋಗುತ್ತಿರಲಿಲ್ಲ ಎನ್ನಲಾಗಿದೆ. 5 ತಿಂಗಳ ಹಿಂದೆ ಪೆರ್ಲಕ್ಕೆ ತೆರಳಿದ್ದ ತಾಯಿ ಜಯಶ್ರೀ ಜೊತೆಗೆ ಪೆರ್ಲದಲ್ಲಿದ್ದ ಮೋಕ್ಷ್ 1 ತಿಂಗಳ ಹಿಂದೆ ರಾಮಕುಂಜ ಗ್ರಾಮದ ಪಾದೆ ಮನೆಗೆ ಮತ್ತೆ ಬಂದು ತಂದೆಯ ಜೊತೆ ವಾಸ್ತವ್ಯವಿದ್ದರು. ಜ.24 ರಂದು ಮೋಕ್ಷ್ನನ್ನು ಮಂಗಳೂರಿನ ಆಸ್ಪತ್ರೆಯೊಂದಕ್ಕೆ ಚಿಕಿತ್ಸೆಗೆಂದು ವಸಂತ ಅಮೀನ್ ಕರೆದುಕೊಂಡು ಹೋಗಿದ್ದು ಸಂಜೆ ಮನೆಗೆ ಬಂದ ಬಳಿಕ ಸುಮಾರು ನಾಲ್ಕೂವರೇ ಗಂಟೆ ವೇಳೆಗೆ ಈ ದುರ್ಘಟನೆ ನಡೆದಿದೆ.
ನನ್ನ ಪತಿ ದುರುದ್ದೇಶದಿಂದಲೇ ನನ್ನ ಮಗನನ್ನು ಕೊಲೆ ಮಾಡಿ ಪರಾರಿಯಾಗಿದ್ದಾರೆ. ಅವರ ಮೇಲೆ ಸರಿಯಾದ ತನಿಖೆ ಮಾಡಿ ಸೂಕ್ತ ಕಾನೂನು ಕ್ರಮ ಕೈಗೊಂಡು ನ್ಯಾಯ ಒದಗಿಸಿಕೊಡುವಂತೆ ಜಯಶ್ರೀ ದೂರಿನಲ್ಲಿ ಒತ್ತಾಯಿಸಿದ್ದಾರೆ. ಘಟನಾ ಸ್ಥಳಕ್ಕೆ ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಉಪ್ಪಿನಂಗಡಿ ಸರ್ಕಲ್ ಇನ್ಸ್ಪೆಕ್ಟರ್ ನಾಗರಾಜ್, ಕಡಬ ಹಾಗೂ ಉಪ್ಪಿನಂಗಡಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾತ್ರಿ ಎಫ್ಎಸ್ಎಲ್ ಅಧಿಕಾರಿಗಳ ತಂಡವೂ ಭೇಟಿ ನೀಡಿ ಮಾಹಿತಿ ಕಲೆ ಹಾಕಿದೆ.
ಕುಟುಂಬ ಕಲಹ
ಕೌಟುಂಬಿಕ ಕಲಹದಿಂದಾಗಿ ಈ ಘಟನೆ ನಡೆದಿದೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ದ.ಕ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಅನಿಲ್ ಕುಮಾರ್ ಎಸ್. ಭೂಮರೆಡ್ಡಿ, ಘಟನೆ ಬಗ್ಗೆ ಮೃತ ಬಾಲಕನ ತಾಯಿಯಿಂದಲೂ ದೂರು ಪಡೆಯುತ್ತೇವೆ. ಬಾಲಕನ ತಂದೆಯೂ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರಿಂದಲೂ ಮಾಹಿತಿ ಪಡೆಯಲಾಗುವುದು. ಎರಡೂ ಕಡೆಯಿಂದಲೂ ಹೇಳಿಕೆ ಪಡೆದುಕೊಂಡು ಎಲ್ಲಾ ಆಯಾಮದಿಂದ ತನಿಖೆ ನಡೆಸುತ್ತೇವೆ ಎಂದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

