ಬಂಟ್ವಾಳ: ಜನರ ಅತ್ಯಂತ ಪ್ರಮುಖ ಗುರುತಿನ ಚೀಟಿಯಾದ ಆಧಾರ್ ಕಾರ್ಡ್ಗಳು (Aadhaar Cards) ಹಕ್ಕು ಚಲಾಯಿಸಬೇಕಾದವರ ಕೈ ಸೇರುವ ಬದಲು ನೇತ್ರಾವತಿ ನದಿ ತೀರದ ಪೊದೆಗಳಲ್ಲಿ ಪತ್ತೆಯಾಗಿವೆ. ಬಂಟ್ವಾಳದ ನೇತ್ರಾವತಿ ಸೇತುವೆಯ ಸಮೀಪ ಈ ಘಟನೆ ಬೆಳಕಿಗೆ ಬಂದಿದ್ದು, ವ್ಯವಸ್ಥೆಯ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದೆ.
ಬಂಟ್ವಾಳ ತಾಲೂಕಿನ ನೇತ್ರಾವತಿ ನದಿ ತೀರದಲ್ಲಿ ನೂರಾರು ಆಧಾರ್ ಕಾರ್ಡ್ಗಳು ಪತ್ತೆಯಾಗಿವೆ. ಸ್ಥಳೀಯರು ಇದನ್ನು ಗಮನಿಸಿ ಮಾಹಿತಿ ನೀಡಿದಾಗ ಘಟನೆ ಬಯಲಾಗಿದೆ. ಪತ್ತೆಯಾದ ಕಾರ್ಡ್ಗಳು ಬಂಟ್ವಾಳ ಮತ್ತು ಸುತ್ತಮುತ್ತಲ ಗ್ರಾಮಗಳ ನಿವಾಸಿಗಳಿಗೆ ಸೇರಿದವು ಎನ್ನಲಾಗಿದೆ. ಇವುಗಳಲ್ಲಿ ಹಳೆಯ ಕಾರ್ಡ್ಗಳ ಜೊತೆಗೆ ಇತ್ತೀಚೆಗೆ ನವೀಕರಣಗೊಂಡ ಕಾರ್ಡ್ಗಳೂ ಇವೆ ಎಂದು ತಿಳಿದುಬಂದಿದೆ.

ಸಾಮಾನ್ಯವಾಗಿ ಆಧಾರ್ ಕಾರ್ಡ್ಗಳು ಅಂಚೆ ಇಲಾಖೆಯ ಮೂಲಕ ಜನರ ಮನೆಗೆ ತಲುಪುತ್ತವೆ. ಆದರೆ, ವಿತರಿಸುವ ಬದಲು ಯಾರೋ ದುಷ್ಕರ್ಮಿಗಳು ಅಥವಾ ಸಂಬಂಧಪಟ್ಟ ಸಿಬ್ಬಂದಿ ಇವುಗಳನ್ನು ನದಿಗೆ ಎಸೆದಿರಬಹುದು ಎಂಬ ಸಂಶಯ ವ್ಯಕ್ತವಾಗಿದೆ. ಪ್ರತಿಯೊಬ್ಬ ವ್ಯಕ್ತಿಯ ಬಯೋಮೆಟ್ರಿಕ್ ಮತ್ತು ವೈಯಕ್ತಿಕ ಮಾಹಿತಿ ಹೊಂದಿರುವ ಈ ದಾಖಲೆಗಳು ಹೀಗೆ ಅನಾಥವಾಗಿ ಬಿದ್ದಿರುವುದು ಡೇಟಾ ದುರುಪಯೋಗದ ಭಯವನ್ನು ಹೆಚ್ಚಿಸಿದೆ.
ಇದನ್ನೂ ಓದಿ: ಮೌಲ್ವಿಗಳ ಮೇಲೆ ಹಲ್ಲೆ ಆರೋಪ; ಪೊಲೀಸ್ ಠಾಣೆಗೆ ಸಾವಿರಾರು ಮುಸ್ಲಿಮರ ಮುತ್ತಿಗೆ
ಆಧಾರ್ ಕಾರ್ಡ್ ಸಿಗದೆ ಅನೇಕರು ಸರ್ಕಾರಿ ಸವಲತ್ತುಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಾವಿರಾರು ರೂಪಾಯಿ ವೆಚ್ಚ ಮಾಡಿ ಸರ್ಕಾರ ಸಿದ್ಧಪಡಿಸಿದ ದಾಖಲೆಗಳು ಹೀಗೆ ನದಿ ಪಾಲಾಗಿರುವುದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಪೊಲೀಸರು ಮತ್ತು ಅಂಚೆ ಇಲಾಖೆಯ ಹಿರಿಯ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

