ಅಮೆರಿಕಾ : ಅಮೆರಿಕಾದಲ್ಲಿ ಭಾರೀ ಚಳಿಗಾಲದ ಚಂಡಮಾರುತ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ. ಉತ್ತರ–ಪೂರ್ವ ಭಾಗದಲ್ಲಿ ಸೋಮವಾರ (ಜನವರಿ 26) ಮತ್ತಷ್ಟು ಹಿಮಪಾತವಾಗಿದ್ದು, ದಕ್ಷಿಣ ಭಾಗದ ಹಲವೆಡೆ ಹಿಮಮಳೆ ಹಾಗೂ ಮಂಜು ಆವರಿಸಿದೆ. ಅಲ್ಲದೇ, ತೀವ್ರ ಚಳಿಯಿಂದ ಬಳಲುತ್ತಿರುವ ವಿವಿಧ ರಾಜ್ಯಗಳಲ್ಲಿ ಕನಿಷ್ಠ 30 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
ನ್ಯೂ ಇಂಗ್ಲೆಂಡ್‌ವರೆಗೆ ಸುಮಾರು 2,100 ಕಿಲೋಮೀಟರ್ ವ್ಯಾಪ್ತಿಯಲ್ಲಿ ಒಂದು ಅಡಿಗೂ ಅಧಿಕ ಹಿಮ ಜಮೆಯಾಗಿದ್ದು, ರಸ್ತೆ ಸಂಚಾರ ಸಂಪೂರ್ಣ ಸ್ಥಗಿತಗೊಂಡಿದೆ. ಸಾವಿರಾರು ವಿಮಾನ ಹಾರಾಟಗಳು ರದ್ದುಗೊಂಡಿದ್ದು, ಅನೇಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ. ಅಮೆರಿಕದ ಹವಾಮಾನ ಇಲಾಖೆ ಪ್ರಕಾರ, ಪಿಟ್ಸ್‌ಬರ್ಗ್‌ನ ಉತ್ತರ ಭಾಗದಲ್ಲಿ 20 ಇಂಚುಗಳಷ್ಟು ಹಿಮಪಾತ ದಾಖಲಾಗಿದ್ದು, ಗಾಳಿಯ ಚಳಿ ಮೈನಸ್ 25 ಡಿಗ್ರಿ ಫಾರೆನ್‌ಹೀಟ್ (ಮೈನಸ್ 31 ಡಿಗ್ರಿ ಸೆಲ್ಸಿಯಸ್)ವರೆಗೆ ಇಳಿದಿದೆ. ಮುಂದಿನ ದಿನಗಳಲ್ಲಿಯೂ ಚಳಿ ಮುಂದುವರಿಯುವ ಸಾಧ್ಯತೆ ಇದ್ದು, ವಾರಾಂತ್ಯದಲ್ಲಿ ಪೂರ್ವ ಕರಾವಳಿಗೆ ಮತ್ತೊಂದು ಚಂಡಮಾರುತ ಬೀಳುವ ಆತಂಕವಿದೆ.

ಇದನ್ನೂ ಓದಿ : ಪುತ್ತೂರು: ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ವ್ಯವಸ್ಥೆ ಮಂಜೂರಾಗುವ ಸಾಧ್ಯತೆ
ಮ್ಯಾಸಚೂಸೆಟ್ಸ್ ಮತ್ತು ಒಹಾಯೋದಲ್ಲಿ ಹಿಮ ತೆರವುಗೊಳಿಸುವ ವಾಹನಗಳು ಡಿಕ್ಕಿ ಹೊಡೆದು ಇಬ್ಬರು ಮೃತಪಟ್ಟಿದ್ದಾರೆ. ಕ್ಯಾನ್ಸಸ್‌ನಲ್ಲಿ ಮಹಿಳೆಯೊಬ್ಬರ ಶವ ಹಿಮದೊಳಗೆ ಪತ್ತೆಯಾಗಿದೆ. ನ್ಯೂಯಾರ್ಕ್ ನಗರದಲ್ಲಿ ಕಳೆದ ವಾರಾಂತ್ಯದಲ್ಲಿ ಹೊರಾಂಗಣದಲ್ಲಿ ಎಂಟು ಮಂದಿ ಮೃತದೇಹಗಳು ಪತ್ತೆಯಾಗಿವೆ.
12,000ಕ್ಕೂ ಹೆಚ್ಚು ವಿಮಾನ ಹಾರಾಟ ರದ್ದು ಅಥವಾ ವಿಳಂಬ ;
ಜನವರಿ 26ರಂದು ದೇಶಾದ್ಯಂತ 12,000ಕ್ಕೂ ಹೆಚ್ಚು ವಿಮಾನ ಹಾರಾಟಗಳು ರದ್ದಾಗಿವೆ ಅಥವಾ ವಿಳಂಬವಾಗಿವೆ ಎಂದು ವರದಿಯಾಗಿದೆ. ಭಾನುವಾರ ಮಾತ್ರವೇ 45 ಶೇಕಡಾ ವಿಮಾನಗಳು ರದ್ದಾಗಿದ್ದು, ಇದು ಕೋವಿಡ್ ನಂತರದ ಅತ್ಯಧಿಕ ಪ್ರಮಾಣವಾಗಿದೆ ಎಂದು ವಿಮಾನಯಾನ ವಿಶ್ಲೇಷಣಾ ಸಂಸ್ಥೆ ತಿಳಿಸಿದೆ. ಕೆಲ ಪ್ರದೇಶಗಳಲ್ಲಿ 8ರಿಂದ 15 ಇಂಚುಗಳಷ್ಟು ಹಿಮ ಸುರಿದಿದೆ. ಶಾಲೆಗಳು ಮುಚ್ಚಲ್ಪಟ್ಟಿದ್ದರೂ ಸುಮಾರು ಐದು ಲಕ್ಷ ವಿದ್ಯಾರ್ಥಿಗಳಿಗೆ ಆನ್‌ಲೈನ್ ತರಗತಿಗಳಿಗೆ ಹಾಜರಾಗುವಂತೆ ಸೂಚಿಸಲಾಗಿದೆ.
ಹೋಟೆಲ್‌ಗಳು ಸಂಪೂರ್ಣ ಭರ್ತಿ ;
ಟೆನ್ನೆಸ್ಸಿಯ ನ್ಯಾಷ್‌ವಿಲ್ಲೆ ಪ್ರದೇಶದಲ್ಲಿ ಸಾವಿರಾರು ಮನೆಗಳಿಗೆ ವಿದ್ಯುತ್ ಮರು ಸಂಪರ್ಕ ಕಲ್ಪಿಸಲಾದರೂ, ಇನ್ನೂ ಸುಮಾರು 1.46 ಲಕ್ಷ ಮನೆಗಳು ಕತ್ತಲಲ್ಲೇ ಉಳಿದಿವೆ. ಚಳಿ ಮತ್ತು ವಿದ್ಯುತ್ ಕೊರತೆಯಿಂದ ತಪ್ಪಿಸಿಕೊಳ್ಳಲು ಅನೇಕರು ಹೋಟೆಲ್‌ಗಳಲ್ಲಿ ಆಶ್ರಯ ಪಡೆದಿದ್ದು, ಬಹುತೇಕ ಹೋಟೆಲ್‌ಗಳು ಒಂದು ರಾತ್ರಿಯಲ್ಲೇ ಸಂಪೂರ್ಣ ಭರ್ತಿಯಾಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ದೇಶದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

