ಬೆಂಗಳೂರು: ಕರ್ನಾಟಕದ ಕರಾವಳಿ ಭಾಗವನ್ನು ರಾಜ್ಯದ ರಾಜಧಾನಿ ಬೆಂಗಳೂರಿಗೆ ಸಂಪರ್ಕಿಸುವ ಅತ್ಯಾಧುನಿಕ ವಂದೇ ಭಾರತ್ ಎಕ್ಸ್‌ಪ್ರೆಸ್ (Vande Bharat Express) ರೈಲು ಸೇವೆಗೆ ಅಂತಿಮ ಮುಹೂರ್ತ ನಿಗದಿಯಾಗಿದೆ. ನವೆಂಬರ್ 13, ಶುಕ್ರವಾರ ಮಧ್ಯಾಹ್ನ 2 ಗಂಟೆಗೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ಅವರು ಬೆಂಗಳೂರಿನಲ್ಲಿ ‘ಬೆಂಗಳೂರು-ಮಂಗಳೂರು-ಮಡಗಾಂವ್’ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಅಧಿಕೃತವಾಗಿ ಹಸಿರು ನಿಶಾನೆ ತೋರಿಸಲಿದ್ದಾರೆ ಎಂದು ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ (Kota Srinivas Poojary) ಮಾಧ್ಯಮಗೋಷ್ಟಿಯಲ್ಲಿ ತಿಳಿಸಿದ್ದಾರೆ.
ಬೆಂಗಳೂರಿನಲ್ಲಿ ಪ್ರಧಾನಿ ಮೋದಿ ಉದ್ಘಾಟಿಸುವ ಅದೇ ವೇಳೆಗೆ, ಮಂಗಳೂರು ಜಂಕ್ಷನ್‌ನಿಂದ ಬೆಂಗಳೂರು ಕಡೆಗೆ ಹೊರಡುವ ವಂದೇ ಭಾರತ್ ರೈಲಿಗೆ ಸಾಂಕೇತಿಕ ಚಾಲನೆ ನೀಡಲಾಗುವುದು. ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್, ಸಚಿವ ವಿ. ಸೋಮಣ್ಣ ಹಾಗೂ ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ, ಉತ್ತರ ಕನ್ನಡ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಕೋಟ ಶ್ರೀನಿವಾಸ ಪೂಜಾರಿ ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ನವೆಂಬರ್ 13ರ ಉದ್ಘಾಟನೆಯ ಬಳಿಕ, ನವೆಂಬರ್ 15ರಿಂದ ಎರಡೂ ಮಾರ್ಗಗಳಲ್ಲಿ (ಬೆಂಗಳೂರು-ಮಡಗಾಂವ್ ಹಾಗೂ ಮಡಗಾಂವ್-ಬೆಂಗಳೂರು) ಈ ವಂದೇ ಭಾರತ್ ರೈಲಿನ ನಿಯಮಿತ ಸಾರ್ವಜನಿಕ ಸೇವೆ (Regular Service) ಆರಂಭವಾಗಲಿದೆ.

2019ರಲ್ಲಿ ರೈಲ್ವೆ ಸಚಿವ ಪಿಯೂಷ್ ಗೋಯಲ್ ಕರಾವಳಿಗೆ ವಂದೇ ಭಾರತ್ ತರುವ ಕನಸು ಕಂಡಿದ್ದರು. ಆದರೆ, ಸಕಲೇಶಪುರ-ಸುಬ್ರಹ್ಮಣ್ಯ ಘಾಟ್ ವಿಭಾಗದ ವಿದ್ಯುದ್ದೀಕರಣ ಬಾಕಿ ಇತ್ತು. ಭಾರತೀಯ ರೈಲ್ವೆಯ ಶೇ. 100ರಷ್ಟು ವಿದ್ಯುದ್ದೀಕರಣ ಯೋಜನೆಯಡಿ ಕಾರ್ವಾರ-ಮಂಗಳೂರು-ಬೆಂಗಳೂರು ಇಡೀ ಮಾರ್ಗದ ವಿದ್ಯುದ್ದೀಕರಣ ಪೂರ್ಣಗೊಂಡಿದ್ದರಿಂದ ಈ ಯೋಜನೆ ಸಾಕಾರಗೊಂಡಿದೆ. ಬೆಂಗಳೂರಿನಿಂದ ಮಂಗಳೂರು ಮೂಲಕ ಮಡಗಾಂವ್‌ವರೆಗೆ ವಂದೇ ಭಾರತ್ ಚಲಾಯಿಸಲು ಸಚಿವ ಅಶ್ವಿನಿ ವೈಷ್ಣವ್ ಘೋಷಣೆ ಮಾಡಿದ್ದರು. ಈಗಾಗಲೇ ಹಲವು ಬಾರಿಯ ಟ್ರಯಲ್ ರನ್‌ಗಳು (Trial Runs) ಯಶಸ್ವಿಯಾಗಿ ಪೂರ್ಣಗೊಂಡಿವೆ.

ಕರಾವಳಿ ಭಾಗವು ದೇವಾಲಯಗಳ ನಾಡು, ಶಿಕ್ಷಣ ಸಂಸ್ಥೆಗಳ ಹಬ್, ಹೊಟೇಲ್ ಹಾಗೂ ಪ್ರವಾಸೋದ್ಯಮದ ಪ್ರಮುಖ ಕೇಂದ್ರವಾಗಿದೆ. ಜೊತೆಗೆ ಸೀಬರ್ಡ್ ನೌಕಾನೆಲೆ (Seabird Naval Base) ಹಾಗೂ ಕೈಗಾ ಅಣು ವಿದ್ಯುತ್ ಸ್ಥಾವರದಂತಹ ರಾಷ್ಟ್ರೀಯ ಮಹತ್ವದ ಸಂಸ್ಥೆಗಳನ್ನು ಹೊಂದಿದೆ. ಈ ಅತ್ಯಾಧುನಿಕ ವೇಗದ ರೈಲು ಸಂಪರ್ಕದಿಂದ ಪ್ರವಾಸೋದ್ಯಮ, ಉದ್ಯೋಗ ಹಾಗೂ ಪ್ರಯಾಣಿಕರ ಸಮಯ ಉಳಿತಾಯಕ್ಕೆ ಭಾರಿ ಅನುಕೂಲವಾಗಲಿದೆ. ದಶಕಗಳ ಬೇಡಿಕೆ ಈಡೇರಿದ್ದಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಹರ್ಷ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


