ಹಾಸನ, ನ.11: ವಿಶ್ವವಿಖ್ಯಾತ ಹಾಸನದ ಶ್ರೀ ಹಾಸನಾಂಬೆ ದೇವಿ ದರ್ಶನೋತ್ಸವವು ಅತ್ಯಂತ ಯಶಸ್ವಿಯಾಗಿ ಮುಕ್ತಾಯಗೊಂಡಿದ್ದು, ಸಾಗರೋಪಾದಿಯಲ್ಲಿ ಹರಿದುಬಂದ ಭಕ್ತ ಸಾಗರದಿಂದಾಗಿ ಇತಿಹಾಸದಲ್ಲೇ ಅತ್ಯಂತ ಹೆಚ್ಚು ಆದಾಯ ಹಾಗೂ ಭಕ್ತರ ದರ್ಶನ ದಾಖಲಾಗಿದೆ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಂ. ಶಿವಲಿಂಗೇಗೌಡ (K.M. Shivalingegowda) ಅವರು, ಇನ್ಮುಂದೆ ಹಾಸನಾಂಬೆ ದರ್ಶನೋತ್ಸವವನ್ನು ಮೈಸೂರು ದಸರಾ ಮಾದರಿಯಲ್ಲೇ ಬೃಹತ್ ‘ನಾಡಹಬ್ಬ’ವಾಗಿ ಆಚರಿಸಲು ರಾಜ್ಯ ಸರ್ಕಾರ ನಿರ್ಣಯಿಸಿದೆ ಎಂದು ಪ್ರಕಟಿಸಿದ್ದಾರೆ.
ಈ ಬಾರಿಯ ಉತ್ಸವದಲ್ಲಿ ಇದುವರೆಗೆ ಒಟ್ಟು 30.07 ಲಕ್ಷ ಭಕ್ತರು ತಾಯಿ ಹಾಸನಾಂಬೆಯ ದರ್ಶನ ಪಡೆದು ಪುನೀತರಾಗಿದ್ದಾರೆ. ಹುಂಡಿ ಹಣದ ಎಣಿಕೆ ಆರಂಭವಾಗುವುದಕ್ಕೂ ಮುನ್ನವೇ ದರ್ಶನೋತ್ಸವದಿಂದ ₹25.60 ಕೋಟಿ ಒಟ್ಟು ಆದಾಯ ಹರಿದುಬಂದಿದೆ.

₹300 ವಿಶೇಷ ದರ್ಶನ ಟಿಕೆಟ್: ₹6.04 ಕೋಟಿ
₹1000 ವಿಐಪಿ ದರ್ಶನ ಟಿಕೆಟ್: ₹13.18 ಕೋಟಿ

ಆನ್‌ಲೈನ್ ಬುಕಿಂಗ್ ಮುಖಾಂತರ: ₹5.8 ಕೋಟಿ
ಲಡ್ಡು ಪ್ರಸಾದ ಮಾರಾಟದಿಂದ: ₹1.29 ಕೋಟಿ

ಇದನ್ನೂ ಓದಿ: ಹಾಸನದಲ್ಲಿ ಪ್ರೀ-ವೆಡ್ಡಿಂಗ್ ಶೂಟ್ ನಡೆಸುತ್ತಿದ್ದವರ ಮೇಲೆ ಪುಂಡರ ದಾಳಿ; ಕ್ಯಾಮೆರಾಮನ್ ಮೇಲೆ ಹಲ್ಲೆ!
“ಮೈಸೂರು ದಸರಾ ಮಾದರಿಯಲ್ಲಿ ‘ನಾಡಹಬ್ಬ’
“ದರ್ಶನೋತ್ಸವ ಸಂಪೂರ್ಣ ನಾಡಹಬ್ಬದ ಮಾದರಿಯಾಗಬೇಕೆಂದರೆ ಕ್ರೀಡೆ ಹಾಗೂ ಬೃಹತ್ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಬೇಕು. ಮೈಸೂರು ದಸರಾವನ್ನು ಮೀರಿಸುವ ರೀತಿ ಈ ಬಾರಿಯ ಜಾತ್ರೆ ನಡೆದಿದ್ದು, ಮುಂದೆಯೂ ಅದನ್ನೇ ಮಾದರಿಯಾಗಿಟ್ಟುಕೊಂಡು ಆಚರಿಸುತ್ತೇವೆ” ಎಂದು ಸಚಿವರು ಹೇಳಿದರು. “ಈ ಬಾರಿ ಜಿಲ್ಲೆಯಲ್ಲಿ ಮಳೆ-ಬೆಳೆ ಕಡಿಮೆಯಾಗಿದೆ. ನಾನು ದೇವಿಯ ದರ್ಶನ ಮಾಡಿದಾಗ ರೈತರ ಬದುಕು ಹಸನಾಗಲು ಹಾಗೂ ಕೃಷಿಕರಿಗೆ ಅನುಕೂಲವಾಗಲು ಉತ್ತಮ ಮಳೆ ಕೊಡಲಿ ಎಂದು ಪ್ರಾರ್ಥಿಸಿದ್ದೇನೆ” ಎಂದರು. “ಲಕ್ಷಾಂತರ ಜನರು ಬಂದಾಗ ಕೆಲವೆಡೆ ಸಣ್ಣಪುಟ್ಟ ತಪ್ಪುಗಳಾಗಿರಬಹುದು. ಯಾರಿಗಾದರೂ ನೋವಾಗಿದ್ದರೆ ನಾನು ಬಹಿರಂಗವಾಗಿ ಕ್ಷಮೆಯಾಚಿಸುತ್ತೇನೆ” ಎಂದು ಭಾವುಕರಾದರು.
ತಮ್ಮ ವಿರುದ್ಧ ಕೇಳಿಬಂದಿರುವ ಲಂಚದ ಆರೋಪ ಹಾಗೂ ಟೀಕೆಗಳಿಗೆ ಸಚಿವ ಶಿವಲಿಂಗೇಗೌಡ ಕಡಕ್ ತಿರುಗೇಟು ನೀಡಿದರು. “ಇಂತಹ ಪವಿತ್ರ ಜಾತ್ರಾ ಮಹೋತ್ಸವದಲ್ಲಿ ಕೆಲವರು ರಾಜಕೀಯ ಮಾಡುತ್ತಿದ್ದಾರೆ. ಅವರಿಗೆ ತಾಯಿ ಹಾಸನಾಂಬೆಯೇ ಒಳ್ಳೆಯ ಬುದ್ಧಿ ಕೊಡಲಿ. ಸಿಎಂ, ಮಾಜಿ ಸಿಎಂ, ಸಚಿವರು ಹಾಗೂ ಶಾಸಕರು ಬಂದು ದರ್ಶನ ಪಡೆದು ಜಿಲ್ಲಾಡಳಿತದ ಕಾರ್ಯವೈಖರಿಯನ್ನು ಹೊಗಳಿದ್ದಾರೆ.” “ಉತ್ತಮ ಕೆಲಸ ಮಾಡಿದ್ದೇವೆ ಎಂಬ ಸಮಾಧಾನ ನಮಗಿದೆ. ಜಿಲ್ಲಾಧಿಕಾರಿ (DC) ಹಾಗೂ ಆಡಳಿತಾಧಿಕಾರಿ (AO) ಅತ್ಯುತ್ತಮ ಕೆಲಸ ಮಾಡಿದ್ದಾರೆ. ಆದರೆ ಕೆಲವರು ಏನೇನೋ ಕಥೆ ಕಟ್ಟುತ್ತಿದ್ದಾರೆ. ಮುಂದೆ ಅದಕ್ಕೆ ಮಹಾಭಾರತವೇ ಶುರುವಾಗಲಿದೆ” ಎಂದು ಎಚ್ಚರಿಕೆ ನೀಡಿದರು.



