ಬೆಂಗಳೂರು : ಬೆಂಗಳೂರು ಜಿಲ್ಲೆಯ ದೇವನಹಳ್ಳಿಯಲ್ಲಿರುವ ಶಿಕ್ಷಣ ಸಂಸ್ಥೆಯೊಂದರಲ್ಲಿ ರ್ಯಾಗಿಂಗ್ ಹಾಗೂ ದೈಹಿಕ ಹಲ್ಲೆಯ ಪ್ರಕರಣ ಬೆಳಕಿಗೆ ಬಂದಿದೆ. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಪೊಲೀಸರು ಪಡೆದುಕೊಂಡಿದ್ದು, ಆಕಾಶ್ ಗ್ರೂಪ್ ಆಫ್ ಇನ್ಸ್ಟಿಟ್ಯೂಷನ್ಸ್ ನೀಡಿದ ದೂರಿನ ಮೇರೆಗೆ ಜನವರಿ 16ರಂದು ಎಫ್ಐಆರ್ ದಾಖಲಿಸಲಾಗಿದೆ.
ಪೊಲೀಸರ ಪ್ರಕಾರ ಬಿಲಾಲ್, ಮೊಹಮ್ಮದ್ ನೌಷಾದ್ ಮತ್ತು ಅಫ್ಜಲ್ ಎಂಬ ಮೂವರು ಆರೋಪಿಗಳನ್ನು ಬಂಧಿಸಲಾಗಿದ್ದು, ಇತರ ಆರೋಪಿಗಳನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ. ಬಂಧಿತರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ವರದಿಯಾಗಿದೆ.

22 ವಿದ್ಯಾರ್ಥಿಗಳ ವಿರುದ್ಧ ಎಫ್ಐಆರ್ ;
ಒಟ್ಟು 22 ವಿದ್ಯಾರ್ಥಿಗಳನ್ನು ಎಫ್ಐಆರ್ನಲ್ಲಿ ಆರೋಪಿಗಳಾಗಿ ಹೆಸರು ತಿಳಿಸಲಾಗಿದ್ದು, ಅವರು ಬಿ.ಫಾರ್ಮಾ, ನರ್ಸಿಂಗ್, ಡಿಪ್ಲೊಮಾ, ಆರೋಗ್ಯ ವಿಜ್ಞಾನ, ಮೆಡಿಕಲ್ ಇಮೇಜಿಂಗ್ ಟೆಕ್ನಾಲಜಿ (MIT) ಮತ್ತು ಫಿಸಿಯೋಥೆರಪಿ ಮುಂತಾದ ಕೋರ್ಸ್ಗಳಲ್ಲಿ ವ್ಯಾಸಂಗ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.
ಎಫ್ಐಆರ್ ಪ್ರಕಾರ, ಆರೋಪಿಗಳು ಕ್ಯಾಂಪಸ್ ಒಳಗೆ ಪ್ರಥಮ ವರ್ಷದ ವಿದ್ಯಾರ್ಥಿಗಳ ಮೇಲೆ ಹಲ್ಲೆ ನಡೆಸಿ, ತಮ್ಮ ಆದೇಶಗಳನ್ನು ಪಾಲಿಸುವಂತೆ ಬಲವಂತಪಡಿಸಿದ್ದರು. ಹಿರಿಯ ವಿದ್ಯಾರ್ಥಿಗಳು ಸಿಗರೇಟ್ ಹಾಗೂ ಪಾನೀಯಗಳನ್ನು ತಂದುಕೊಡಬೇಕು ಮತ್ತು ತಮ್ಮ ಪುಸ್ತಕಗಳನ್ನು ಹೊರುವಂತೆ ಒತ್ತಾಯಿಸುತ್ತಿದ್ದಾರೆ ಎಂದು ಕಿರಿಯ ವಿದ್ಯಾರ್ಥಿಗಳು ಪ್ರವೇಶ ವಿಭಾಗದ ಇನ್ಚಾರ್ಜ್ ಮಾಧವನ್ ಅವರಿಗೆ ದೂರು ನೀಡಿದ್ದರು. ಇದಾದ ನಂತರ ಮಾಧವನ್ ಹಿರಿಯ ವಿದ್ಯಾರ್ಥಿಗಳಿಗೆ ಇಂತಹ ಕೃತ್ಯಗಳನ್ನು ಮರುಕಳಿಸದಂತೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ : Shocking: ಕೇರಳದ ವಿಡಿಯೋ ಘಟನೆ ಮಾಸುವ ಮುನ್ನ ಕಾರವಾರದಲ್ಲಿ ಮತ್ತೊಂದು ಘಟನೆ
ಆದರೆ ಜನವರಿ 15ರಂದು ಸಂಜೆ ಸುಮಾರು 5 ಗಂಟೆಗೆ ಹಿರಿಯ ವಿದ್ಯಾರ್ಥಿಗಳು ಮತ್ತೆ ಕಿರುಕುಳ ನೀಡಲು ಪ್ರಾರಂಭಿಸಿದ್ದಾರೆ ಎನ್ನಲಾಗಿದೆ. ಇದರಿಂದ ಮತ್ತೆ ಕಿರಿಯ ವಿದ್ಯಾರ್ಥಿಗಳು ಮಾಧವನ್ ಅವರಿಗೆ ದೂರು ನೀಡಿದ್ದು, ರಾತ್ರಿ ಸುಮಾರು 9 ಗಂಟೆಗೆ ಅವರು ಕಾಲೇಜಿನ ಹಿಂಭಾಗದಲ್ಲಿರುವ ಟೀ ಅಂಗಡಿಯಲ್ಲಿ ಹಿರಿಯರನ್ನು ಭೇಟಿಯಾಗಲು ಕಿರಿಯ ವಿದ್ಯಾರ್ಥಿಗಳೊಂದಿಗೆ ತೆರಳಿದ್ದರು. ಸಮಸ್ಯೆಯನ್ನು ಬಗೆಹರಿಸುವ ಬದಲು, ಹಿರಿಯ ವಿದ್ಯಾರ್ಥಿಗಳು ಕಿರಿಯರು ಹಾಗೂ ಮಾಧವನ್ ಅವರ ಮೇಲೆ ಹಲ್ಲೆ ನಡೆಸಿದರು ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ಈ ವೇಳೆ ಬಿಲಾಲ್ ಎಂಬಾತ ಕಿರಿಯ ವಿದ್ಯಾರ್ಥಿಯೊಬ್ಬರ 32 ಗ್ರಾಂ ತೂಕದ ಚಿನ್ನದ ಸರವನ್ನು ಕಸಿದುಕೊಂಡಿದ್ದಾನೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೂರಿನ ಪ್ರಕಾರ, ಹಿರಿಯ ವಿದ್ಯಾರ್ಥಿಗಳ ಜೊತೆಗಿದ್ದ ನವೀನ್ ಎಂಬ ಹೊರಗಿನ ವ್ಯಕ್ತಿಯು ಕಿರಿಯರ ಮೇಲೆ ರಾಡ್ ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ, ಜೀವ ಬೆದರಿಕೆಯನ್ನೂ ಹಾಕಿದ್ದಾನೆ. ಪೊಲೀಸರು ಭಾರತೀಯ ನ್ಯಾಯ ಸಂಹಿತೆ (BNS) ಹಾಗೂ ಕರ್ನಾಟಕ ಶಿಕ್ಷಣ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಮುಂದುವರಿದಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ…
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

