ಬಂಟ್ವಾಳ: ತಾಲೂಕಿನ ಮಂಚಿ ಗ್ರಾಮದ ಕುಕ್ಕಾಜೆ ಸಮೀಪದ ಪತ್ತುಮುಡಿಯ ಅಲೀಮಾ ಪ್ಲಾಝ ಸಂಕೀರ್ಣದಲ್ಲಿ ಬಂಟ್ವಾಳ, ಉಳ್ಳಾಲ ಹಾಗೂ ಮಂಗಳೂರು ವ್ಯಾಪ್ತಿಗೊಳಪಟ್ಟು ಸ್ಥಾಪಿಸಲಾದ ಇಂದಿರಾ ದರ್ಶಿನಿ ಸಹಕಾರಿ ಸಂಘವನ್ನು ಜ.4 ರಂದು ವಿಧಾನಸಭೆ ಸ್ಪೀಕರ್ ಯು.ಟಿ.ಖಾದರ್ ಉದ್ಘಾಟಿಸಿದರು.
ದೇಶ ಗ್ರಾಮೀಣ ಭಾಗದ ಆತ್ಮ ಸಹಕಾರಿ ಕ್ಷೇತ್ರ: ಯುಟಿ ಖಾದರ್

ಯುಟಿ ಖಾದರ್ ಮಾತನಾಡಿ, ಸಹಕಾರಿ ಕ್ಷೇತ್ರ ದೇಶದ ಗ್ರಾಮೀಣ ಭಾಗದ ಆತ್ಮ. ಆರ್ಥಿಕ ಚಲನವಲನ ಇಲ್ಲದೆ ದೇಶ, ಗ್ರಾಮ ಅಭಿವೃದ್ಧಿಯಾಗಲು ಸಾಧ್ಯವಿಲ್ಲ. ಆರ್ಥಿಕತೆ ಇದ್ದರಷ್ಟೇ ಅಭಿವೃದ್ಧಿ ಸಾಧ್ಯ. ಒಂದು ಸಮಾಜದಲ್ಲಿ ಆತ್ಮೀಯತೆಯನ್ನು ಮೈಗೂಡಿಸಿಕೊಳ್ಳಬೇಕು. ಇಂತಹ ವ್ಯಕ್ತಿತ್ವ ಸಂಘದ ಅಧ್ಯಕ್ಷ ಉಮ್ಮರ್ ಅವರಲ್ಲಿ ಕಾಣಬಹುದು. ಸಮಾಜದ ಹತ್ತು ಮಂದಿ ಕೈಜೋಡಿಸಿಕೊಳ್ಳುವುದರಿಂದ ಕಾರ್ಪೋರೆಟಿವ್ ಸೊಸೈಟಿಗೆ ಎಂದಿಗೂ ಸೋಲಾಗುವುದಿಲ್ಲ. ಇಂದಿರಾ ದರ್ಶಿನಿ ಸಹಕಾರಿ ಸಂಘವೂ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎಂದು ಶುಭಹಾರೈಸಿದರು.

ಆಡಳಿತ ಕಚೇರಿ ಉದ್ಘಾಟಿಸಿ ಮಾಜಿ ಸಚಿವ ಬಿ.ರಮಾನಾಥ ರೈ ಮಾತನಾಡಿ, ಮಂಚಿ ಕುಕ್ಕಾಜೆ ಪ್ರದೇಶದಲ್ಲಿ ಜನರಿಗೆ ಅನುಕೂಲವಗುವ ನಿಟ್ಟಿನಲ್ಲಿ ಈ ಸಹಕಾರಿ ಸಂಘವನ್ನು ಸ್ಥಾಪಿಸಲಾಗಿದೆ. ನಾವೂ ಒಂದು ಸಹಕಾರಿ ಸಂಘವನ್ನು ಮಾಡಿದ್ದೇವೆ. ಇದನ್ನೆಲ್ಲ ನಿರ್ವಹಿಸುವುದು ಸುಲಭದ ಮಾತಲ್ಲ. ಸಂಘ ಯಶಸ್ವಿಯಾಗಿ ಬೆಳೆಯಲು ದೇವತಾನುಗ್ರ ಇರಲಿ ಎಂದರು.
ಇದನ್ನೂ ಓದಿ: ಉಡುಪಿ: ಕಾರು ರಿವರ್ಸ್ ತೆಗೆಯುವಾಗ ಡೆಡ್ಲಿ ಸರಣಿ ಅಪಘಾತ! ವಿಡಿಯೋ ಇಲ್ಲಿದೆ
ಬ್ರಾಹ್ಮಣ ಸಮಾಜದಲ್ಲಿ ಜನಿಸಿದ ಇಂದಿರಾಗಾಂಧಿ ಅವರು ಸಮಾಜದ ದುರ್ಬಲ ಸಮಾಜದ ಅಭಿವೃದ್ಧಿಗೆ ಶ್ರಮಿಸಿದವರು. ಇವರು ಜಾರಿಗೆ ತಂದ ಅನೇಕ ಯೋಜನೆಗಳು ದೇಶವಾಸಿಯರಿಗೆ ಅನುಕೂಲವಾಗಿದೆ. ಇಂತಹ ನಾಯಕಿಯ ಹೆಸರಿನಲ್ಲಿ ಸಂಘವನ್ನು ಸ್ಥಾಪಿಸಿರುವುದು ಸಂತಸದ ವಿಷಯ ಎಂದರು.
ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಪೂಜಾರಿ ಮಾತನಾಡಿ, ಗ್ರಾಮೀಣ ಪ್ರದೇಶದ ಬಡ ವರ್ಗದ ಜನರಿಗೆ ಸಹಕಾರಿ ಸಂಘಗಳು ಉತ್ತಮವಾಗಿ ನೆರವಾಗುತ್ತಿವೆ. ಸಹಕಾರಿ ಸಂಘ ಬೆಳೆಯಬೇಕಾದರೆ ಜನಸಂಪರ್ಕ ಅತ್ಯವಶ್ಯಕ. ಇಂದಿರಾ ಸಂಘದ ಅಧ್ಯಕ್ಷ ಹಾಗೂ ಉಪಾಧ್ಯಕ್ಷರಲ್ಲಿ ಜನರೊಂದಿಗೆ ಬೆರೆಯುವ ಗುಣ ಒಳಗೊಂಡಿದೆ. ಮೂರು ತಾಲೂಕುಗಳನ್ನು ಮುಂದಿಟ್ಟುಕೊಂಡು ಸ್ಥಾಪಿಸಲಾದ ಈ ಸಂಘ ಉತ್ತರೋತ್ತರ ಅಭಿವೃದ್ಧಿಯಾಗಲಿ ಎಂದು ಹೇಳಿ ಶುಭಹಾರೈಸಿದರು.
ಇದನ್ನೂ ಓದಿ: ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಸಂಪನ್ನ
ಕರ್ನಾಟಕ ಪ್ರದೇಶ ಕೃಷಿಕ ಸಮಾಜದ ನಿರ್ದೇಶಕ ಪದ್ಮನಾಭ ರೈ ಕಲ್ಲಡ್ಕ ಮಾತನಾಡಿ, ಉಮ್ಮರ್ ಅವರು ಸಹಕಾರಿ ಕ್ಷೇತ್ರದಲ್ಲಿ ಹೆಚ್ಚು ಅನುಭವ ಹೊಂದಿದವರಾಗಿದ್ದಾರೆ. ಹೀಗಾಗಿ ಇವರ ನೇತೃತ್ವದಲ್ಲಿ ಇಂದಿರಾ ದರ್ಶಿನಿ ಸಹಕಾರಿ ಸಂಘವು ಯಶಸ್ವಿಯಾಗಿ ಮುನ್ನಡೆಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಉಳ್ಳಾಳ ಅಕ್ರಮ ಸಕ್ರಮ-ಸಮಿತಿ ಅಧ್ಯಕ್ಷರೂ ಆಗಿರುವ ಇಂದಿರಾ ದರ್ಶಿನಿ ಸಹಕಾರಿ ಸಂಘದ ಉಪಾಧ್ಯಕ್ಷ ಚಂದ್ರಹಾಸ ಕರ್ಕೇರಾ ಮಾತನಾಡಿ, ಇಂದಿರಾ ದರ್ಶಿನಿ ಸಹಕಾರಿ ಸಂಘಕ್ಕೆ ನಿಮ್ಮೆಲ್ಲರ ಸಹಕಾರ ಅತ್ಯವಶ್ಯಕ. ಇದು ಲಾಭ ಮಾಡುವ ಉದ್ದೇಶವಲ್ಲ. ಈ ಪ್ರದೇಶದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಈ ಸಂಘ ಸಹಕಾರಿಯಾಗಲಿದೆ ಎಂದರು.
ಕ್ಯಾಂಪ್ಕೋ ಅಧ್ಯಕ್ಷ ಎಸ್.ಆರ್.ಸತೀಶ್ಚಂದ್ರ ಮಾತನಾಡಿ, ದೇಶದ ಜಿಡಿಪಿಗೆ ಶೇ.೩-೪ ರಷ್ಟು ಕೊಡುಗೆ ಸಹಕಾರಿ ಕ್ಷೇತ್ರದ್ದಾಗಿದೆ. ಈ ದೇಶದಲ್ಲಿ ಸಹಜಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ಇಂತಹ ಕ್ಷೇತ್ರದಲ್ಲಿ ಎಲ್ಲಾ ಸದಸ್ಯರಿಗೆ ಒಂದೇ ರೀತಿಯ ಡಿವಿಡೆಂಟ್ ನೀಡಲಾಗುತ್ತಿರುವುದು ವಿಶೇಷ ಎಂದರು.
ಎಲೆ ಚುಕ್ಕಿ ರೋಗ ಸೇರಿದಂತೆ ಅನೇಕ ರೋಗಗಳು ಅಡಿಕೆ ಕೃಷಿಗೆ ಹೊಡೆತವನ್ನು ನೀಡುತ್ತಿದೆ. ಮುಂದಿನ ಐದು ವರ್ಷಗಳಲ್ಲಿ ಇವೆಲ್ಲದಕ್ಕೆ ಪರಿಹಾರ ಕಂಡುಕೊಳ್ಳುವ ಉದ್ದೇಶವನ್ನು ಇಟ್ಟುಕೊಂಡಿದ್ದೇವೆ. ವಿಧಾನ ಪರಿಷತ್ ಗೆ ಸಹಕಾರಿ ಸಂಘದ ನಾಲ್ಕು ಮಂದಿಯನ್ನು ಆಯ್ಕೆ ಮಾಡುವ ಕುರಿತು ಸರ್ಕಾರ ಚಿಂತನೆ ನಡೆಸಬೇಕು ಎಂದು ಸರ್ಕಾರಕ್ಕೆ ಮನವಿ ಮಾಡಿದರು.
ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್.ಮಹಮ್ಮದ್ ಮಾತನಾಡಿ, ಇಂದಿರಾ ದರ್ಶಿನಿ ಸಹಕಾರಿ ಸಂಘವು ಬಡವರ ಪಾಲಿನ ಆಶಾದಾಯಕವಾಗಲಿದೆ. ಉಮ್ಮರ್ ಅವರು ಸಹಕಾರಿ ಕ್ಷೇತ್ರ ನಾಡಿಮಿಡಿತವನ್ನು ಅರಿತವರಾಗಿದ್ದಾರೆ. ಅಂತಹವರನ್ನು ಈ ಸಂಘದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ. ಮುಂದಿನ ದಿನಗಳಲ್ಲಿ ಈ ಸಹಕಾರಿ ಸಂಘ ಜಿಲ್ಲೆಗೆ ಹೆಸರು ತರುವಂತಾಗಲಿ ಎಂದು ಹೇಳಿ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ಸಂಘದ ಶೇರ್ ಹಾಗೂ ಠೇವಣಿ ಪತ್ರವನ್ನು ಪದ್ಮರಾಜ್ ಆರ್ ಪೂಜಾರಿ ಉದ್ಘಾಟಿಸಿ ವಿತರಿಸಿದರು. ಇಂದಿರಾ ದರ್ಶನಿ ಸಹಕಾರಿ ಸಂಘದ ಅಧ್ಯಕ್ಷ ಬಿ.ಉಮ್ಮರ್ ಸ್ವಾಗತಿಸಿ, ನಿರ್ದೇಶಕ ದಿವಾಕರ ಕುಂಟೂರು ವಂದಿಸಿದರು. ರಮಾನಂದ ನೂಜಿಪ್ಪಾಡಿ ಕಾರ್ಯಕ್ರಮ ನಿರೂಪಿದರು.
ಮಂಚಿ ಗ್ರಾಮ ಪಂಚಾಯತ್ ಅಧ್ಯಕ್ಷ ಜಿ.ಎಂ.ಇಬ್ರಾಹಿಂ, ಮಂಚಿ ವ್ಯವಸಾಯ ಸಹಕಾರಿ ಸಂಘದ ಅಧ್ಯಕ್ಷ ಕೇಶವ ಭಟ್, ಇಂದಿರಾ ದರ್ಶಿನಿ ಸಹಕಾರಿ ಸಂಘದ ಸಿಇಒ ಮಮತಾ ಎನ್., ನಿರ್ದೇಶಕರಾದ ವಿಶ್ವನಾಥ್ ನಾಯ್ಕ ನಿರ್ಬೈಲ್, ಸುಧಾಕರ ರೈ ನಾಡಾಜೆ, ಅಬ್ದುಲ್ ರಹಿಮಾನ್ ಸಂಪಿಲ, ತುಳಸಿ ಪುರಂದರ ಕೆಂಜಿಲ, ವೆಂಕಟೇಶ್ ಪ್ರತಾಪ್ ಪತ್ತುಮುಡಿ, ಬದ್ರದ್ದೀನ್ ಕೈಯೂರು, ಅಬ್ದುಲ್ ಹಮೀದ್ ನಾಡಾಜೆ, ಜಗದೀಶ್ ನಾಯಕ್, ದಿನೇಶ್ ಮೂಳೂರು, ರವೀಂದ್ರ ಶೆಟ್ಟಿ ಕುಕ್ಕಾಜೆ, ಫಿಲೋಮಿನಾ ಡಿ’ಸೋಜ ಬಾಬುಕೋಡಿ, ಮೋಂತು ಅಲ್ಬುಕರ್ಕ್, ಆರೀಸ್ ಕುಕ್ಕಾಜೆ, ಮಾರ್ಷಲ್ ಡಿ’ಸೋಜ ಎರ್ಮಾಜೆ ಉಪಸ್ಥಿತರಿದ್ದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸ್ಅಪ್: 7353833811, ಇ-ಮೇಲ್- g1newsdpt@gmail.com)

