ಬಂಟ್ವಾಳ: ಕರಾವಳಿಯ ಸಹಕಾರ ಕ್ಷೇತ್ರದ ಅಭಿವೃದ್ಧಿಯಲ್ಲಿ ಅರುಣೋದಯ-ನವೋದಯಕ್ಕೆ ಮುನ್ನುಡಿ ಬರೆದ ಸಹಕಾರಿ ತಜ್ಞ, ಸಹಕಾರ ಕ್ಷೇತ್ರದಲ್ಲಿ ಅಹರ್ನಿಶಿ ದುಡಿಯುತ್ತಿರುವ ಸಮರ್ಥ ಸಹಕಾರಿ ನಾಯಕರೂ ಆಗಿರುವ ಶ್ರೀ ಕ್ಷೇತ್ರವನ್ನು ಅಭಿವೃದ್ಧಿಯ ಉತ್ತುಂಗ ಶಿಖರಕ್ಕೇರಿಸಿದ ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮಂಡಳಿಯ ಮೊಕ್ತೇಸರ ಎಸ್.ಆರ್.ಸತೀಶ್ಚಂದ್ರ ಅವರನ್ನು ಆಡಳಿತ ಮಂಡಳಿ ಸದಸ್ಯರು ಹಾಗೂ ಸಾರಸ್ವತ ಸಮಾಜ ಬಾಂಧವರ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.
ದೇವಸ್ಥಾನದ ಪ್ರತಿಷ್ಠಾ ವರ್ಧಂತಿ ಉತ್ಸವದ ಪ್ರಯುಕ್ತ ಜ.4 ರಂದು ಆಯೋಜಿಸಲಾದ ಭಜನಾ ಕಮ್ಮಟ ಕಾರ್ಯಕ್ರಮದಲ್ಲಿ ಸತೀಶ್ಚಂದ್ರ ಅವರನ್ನು ಸನ್ಮಾನಿಸಲಾಯಿತು.

ಮೋಂತಿಮಾರು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದಲ್ಲಿ 2021-2026ರ ಅವಧಿಗೆ ಆಡಳಿಯ ಮೊಕ್ತೇಸರರಾಗಿ ಕಾರ್ಯನಿರ್ವಹಿಸುತ್ತಿರುವ ಸತೀಶ್ಚಂದ್ರ ಅವರು, ಅತಿಥಿ ಗೃಹ ನಿರ್ಮಾಣ, ದೇವಸ್ಥಾನದ ಹಲವಾರು ಅಭಿವೃದ್ಧಿ ಕಾಮಗಾರಿಗಳ ಜೊತೆಗೆ ಕಳೆದ ವರ್ಷ ನಡೆದ ಅದ್ದೂರಿಯ ಬ್ರಹ್ಮಕಲಶೋತ್ಸವದ ನೇತೃತ್ವವನ್ನು ಸಮರ್ಥವಾಗಿ ನಿಭಾಯಿಸಿದ್ದರು.
ಇದನ್ನೂ ಓದಿ: ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಪ್ರತಿಷ್ಠಾ ವರ್ಧಂತಿ ಉತ್ಸವ ಸಂಪನ್ನ
ಅಲ್ಲದೆ, ಕ್ಷೇತ್ರದಲ್ಲಿ ಹಲವಾರು ಸಾಮಾಜಿಕ ಉಪಯುಕ್ತ ಕಾರ್ಯಕ್ರಮಗಳಾದ ಆರೋಗ್ಯ ಶಿಬಿರ, ಮಕ್ಕಳ ಬೇಸಿಗೆ ಶಿಬಿರ, ಸಾವಯವ ಕೃಷಿ ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ.
ಇತ್ತೀಚೆಗೆ ಚುನಾವಣೆ ನಡೆದು 2025-30ರ ಅವಧಿಗೆ ಕ್ಯಾಂಪ್ಕೋದ ಅಧ್ಯಕ್ಷರಾಗಿ ಎರಡನೇ ಬಾರಿ ಅವಿರೋಧವಾಗಿ ಆಯ್ಕೆಯಾದ ಸತೀಶ್ಚಂದ್ರ ಅವರು ರಾಜ್ಯದ ಕೃಷಿ ಮತ್ತು ಸಹಕಾರಿ ರಂಗದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಹಲವಾರು ಅಭಿವೃದ್ಧಿ ಕಾರ್ಯಗಳನ್ನು ನಡೆಸಿದ್ದಾರೆ.
ಇದನ್ನೂ ಓದಿ: ರಾಷ್ಟ್ರ ರಕ್ಷಣೆಗಾಗಿ ಮೋಂತಿಮಾರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ರಾಷ್ಟ್ರ ವಿಜಯ ಯಜ್ಞ
ಸಹಕಾರ ರಂಗದಲ್ಲಿ ಮಾಡಿದ ಸಾಧನೆಗೆ 2020ರಲ್ಲಿ ಸತೀಶ್ಚಂದ್ರ ಅವರಿಗೆ ರಾಜ್ಯ ಮಟ್ಟದ ಸಹಕಾರ ರತ್ನ ಪ್ರಶಸ್ತಿ ಒಲಿದು ಬಂದಿದೆ. ಸಮಾಜದ ವಿವಿಧ ಕ್ಷೇತ್ರಗಳಲ್ಲಿ ತಮ್ಮ ಸೇವೆಯನ್ನು ವಿಸ್ತರಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ಗುರುತಿಸಿಕೊಂಡಿರುವ ಇವರನ್ನು ಇದೀಗ ಮೋಂತಿಮಾರು ದುರ್ಗಾಪರಮೇಶ್ವರಿ ದೇವಾಲಯದ ಆಡಳಿತ ಮಂಡಳಿ ಸದಸ್ಯರು ಹಾಗೂ ಸಮಾಜ ಬಾಂಧವರು ಸನ್ಮಾನಿಸಿ ಗೌರವಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
(ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com)

