ಬಂಟ್ವಾಳ: ಪಟ್ಲ ಫೌಂಡೇಶನ್ ವಿಟ್ಲ ಘಟಕದ ವತಿಯಿಂದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿದ್ದ ಯಕ್ಷದ್ರುವ ಯಕ್ಷ ಶಿಕ್ಷಣ-ಯಕ್ಷಗಾನ ಅಭ್ಯಾಸ ತರಗತಿಯ ಸಮಾರೋಪ ಸಮಾರಂಭ ಜ.೨೩ ರಂದು ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಘಟಕದ ಅಧ್ಯಕ್ಷ ರಾಧಾಕೃಷ್ಣ ಶೆಟ್ಟಿ ಚೆಲ್ಲಡ್ಕ, “ಅವಕಾಶ ವಂಚಿತ ಸರಕಾರಿ ಶಾಲೆಯ ಮಕ್ಕಳಿಗಾಗಿ ಹಮ್ಮಿಕೊಳ್ಳಲಾಗಿರುವ ಯಕ್ಷದ್ರುವ ಯಕ್ಷ ಶಿಕ್ಷಣವು ಯಕ್ಷಗಾನದ ಅರಿವಿನ ಜೊತೆಗೆ ಸಂಸ್ಕಾರ ಭರಿತ ಜೀವನವನ್ನು ಕಟ್ಟಿಕೊಡುವುದರಲ್ಲಿ ಸಂಶಯವಿಲ್ಲ. ಪುರಾಣದ ಜ್ಞಾನಗಳನ್ನು ಬೆಳೆಸುವುದರ ಜೊತೆಗೆ ತನ್ನ ಬೌದ್ಧಿಕ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಬಹುದು. ವೇದಿಕೆ ಮೇಲೆ ತನ್ನ ಪ್ರತಿಭೆಯನ್ನು ತೋರ್ಪಡಿಸುವ ಮಕ್ಕಳು ಮುಂದೆ ಸಮಾಜದಲ್ಲಿ ಕೊಡುಗೆಗಳಾಗಿ ಮೂಡಿ ಬರುತ್ತಾರೆ” ಎಂದರು.


ಪಟ್ಲ ಫೌಂಡೇಶನ್ ವಿಟ್ಲ ಘಟಕದ ಪ್ರಧಾನ ಕಾರ್ಯದರ್ಶಿ ಪೂವಪ್ಪ ಶೆಟ್ಟಿ ಅಳಿಕೆ ಮಾತನಾಡಿ, “ಯಕ್ಷಗಾನ ಕಲೆಯನ್ನು ವೃತ್ತಿಜೀವನಕ್ಕೆ ಆಧಾರವಾಗಿಟ್ಟುಕೊಂಡು ಬೆಳೆಯಬೇಕಾಗಿಲ್ಲ. ವೃತ್ತಿಯೊಟ್ಟಿಗೆ ಪ್ರವೃತ್ತಿಯಾಗಿ ಬೆಳೆಸಿಕೊಂಡು ತನ್ನ ಮೌಲ್ಯವನ್ನು ಹೆಚ್ಚಿಸಿಕೊಳ್ಳಬೇಕು. ಯಕ್ಷ ಶಿಕ್ಷಣದ ಯೋಜನೆಯಡಿ ಸಾವಿರಾರು ಮಕ್ಕಳು ಯಕ್ಷಗಾನದತ್ತ ಒಲವು ತೋರಿಸುತ್ತಿರುವುದು ಯಕ್ಷಗಾನ ರಂಗಕ್ಕೊAದು ಒಳ್ಳೆಯ ಬೆಳವಣಿಗೆ” ಎಂದರು.
ಯಕ್ಷಗಾನ ತರಬೇತಿಯಲ್ಲಿ ಭಾಗವಹಿಸಿದ ಮಂಚಿ ಕೊಳ್ನಾಡು ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ವಿತರಿಸಲಾಯಿತು. ಇದೇ ವೇಳೆ ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಶಿವಶಂಕರ್ ರಾವ್ ಮಂಚಿ ಮತನಾಡಿ, ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು. ಕನ್ನಡ ಭಾಷಾ ಶಿಕ್ಷಕಿ ವಿಜಯಲಕ್ಷ್ಮಿ ಕಟೀಲು, ಯಕ್ಷಗಾನ ಗುರು ಅಶ್ವತ್ಥ್ ಮಂಜನಾಡಿ ಮಾತನಾಡಿ ವಿದ್ಯಾರ್ಥಿಗಳ ಯಕ್ಷಗಾನ ಕಲಿಕೆಯ ಪ್ರಗತಿಯನ್ನು ಪ್ರಶಂಸಿಸಿದರು. ಹಿಂದಿ ಭಾಷಾ ಶಿಕ್ಷಕಿ ಶಾಂತ, ಸಮಾಜ ವಿಜ್ಞಾನ ಶಿಕ್ಷಕ ಜಗನ್ನಾಥ ಪುರುಷ, ಶಾಲಾ ಶಿಕ್ಷಕ ಮತ್ತು ಸಿಬ್ಬಂದಿ ವೃಂದದವರು ಉಪಸ್ಥಿತರಿದ್ದರು.
ಚಿತ್ರ ಕಲಾವಿದ ತಾರಾನಾಥ್ ಕೈರಂಗಳ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ಹಿರಿಯ ವಿದ್ಯಾರ್ಥಿಯೂ ಆಗಿರುವ ಸಂಘದ ಅಧ್ಯಕ್ಷ ರಾಮ್ ಪ್ರಸಾದ್ ರೈ ತಿರುವಾಜೆ ವಂದಿಸಿದರು.

