ಬಂಟ್ವಾಳ: ಮಗಳ ಹುಟ್ಟುಹಬ್ಬಕ್ಕೆ ಕೇವಲ ಒಂದು ದಿನ ಬಾಕಿ ಇರುವಾಗಲೇ ತಂದೆಯೊಬ್ಬರು ದುರ್ಮರಣಕ್ಕೀಡಾದ ದುಃಖದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಪಾಣೆಮಂಗಳೂರಿನಲ್ಲಿ ನಡೆದಿದೆ.
ಶಂಭೂರು ನಿವಾಸಿ ಹಾಗೂ ಪ್ರತಿಭಾವಂತ ಯುವ ಛಾಯಾಗ್ರಾಹಕರಾದ ರಕ್ಷಿತ್ ಶೆಟ್ಟಿ (೪೩) ಮೃತ ದುರ್ದೈವಿ. ಶನಿವಾರ ರಾತ್ರಿ ಪಾಣೆಮಂಗಳೂರಿನ ಸಮೀಪ ಎರಡು ಬೈಕ್ಗಳ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದು, ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ.

ಮಗಳ ಜನ್ಮದಿನದ ಮುನ್ನಾ ದಿನ ಅವಘಡ
ಮಾರ್ಚ್ ೧೫ ರಂದು ರಕ್ಷಿತ್ ಅವರ ಮಗಳ ೧೦ನೇ ವರ್ಷದ ಹುಟ್ಟುಹಬ್ಬವಿತ್ತು. ಹೀಗಾಗಿ ಮನೆಯಲ್ಲಿ ಹುಟ್ಟುಹಬ್ಬ ಆಚರಿಸಲು ಸಿದ್ಧತೆಗಳನ್ನು ನಡೆಸಲಾಗುತ್ತಿತ್ತು. ಆದರೆ, ಮುನ್ನಾ ದಿನದಂದು ಅವರು ವಿಧಿಯಾಟಕ್ಕೆ ಪ್ರಾಣಕಳೆದುಕೊಂಡಿದ್ದಾರೆ. ಘಟನೆ ಸಂಬಂಧ ಬಂಟ್ವಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಕ್ಷಿತ್ ಸಹೋದರ ರಂಜಿತ್ ಅವರು ಕೆಲವು ವರ್ಷಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡು ಹಾಸಿಗೆ ಹಿಡಿದಿದ್ದಾರೆ. ಇದೀಗ ಮನೆಯ ಆಧಾರಸ್ತಂಭವಾಗಿದ್ದ ರಕ್ಷಿತ್ ಅವರ ಸಾವಿನಿಂದ ಕುಟುಂಬವು ದಿಕ್ಕುತೋಚದಂತಾಗಿದೆ. ರಕ್ಷಿತ್ ಶೆಟ್ಟಿ ಅವರು ಬಂಟ್ವಾಳ ವಲಯದ ಛಾಯಾಗ್ರಾಹಕ ಸಂಘದ ಸಕ್ರಿಯ ಸದಸ್ಯರಾಗಿದ್ದು, ವೃತ್ತಿಯಲ್ಲಿ ಅತ್ಯುತ್ತಮ ವಿಡಿಯೋಗ್ರಾಫರ್ ಆಗಿ ಗುರುತಿಸಿಕೊಂಡಿದ್ದರು. ತಮ್ಮ ಛಾಯಾಗ್ರಹಣ ಕೌಶಲ್ಯದಿಂದ ಜನಪ್ರಿಯತೆ ಪಡೆದಿದ್ದರು.

