ಬೆಳ್ತಂಗಡಿ: ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲ ಜನರ ಶಕ್ತಿಯಾಗಿ ನಿಂತಿದೆ. ಆದರೆ ಇಷ್ಟು ವರ್ಷ ಸುಮ್ಮನಿದ್ದ ಶಾಸಕ ಹರೀಶ್ ಪೂಂಜ ಅವರು ಇದೀಗ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಬೆಳ್ತಂಗಡಿ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ರಕ್ಷಿತ್ ಶಿವರಾಂ ಟೀಕಿಸಿದರು. ಪಂಚ ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿರುವ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ ಮಾಲಾಡಿ ಕಾಂಗ್ರೆಸ್ ಗ್ರಾಮ ಸಮಿತಿ ವತಿಯಿಂದ ನ.25ರಂದು ಮಡಂತ್ಯಾರಿನಲ್ಲಿ ಆಯೋಜಿಸಲಾಗಿದ್ದ ‘ಜನಸಾಮಾನ್ಯರ ಜನಧ್ವನಿ-ಜನಾಂದೋಲನ’ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಡಂತ್ಯಾರು ಸರ್ವಧರ್ಮೀಯರು ಸೌಹಾರ್ದತೆಯಿಂದ ಬದುಕುವ ಊರು. ಬೆಳ್ತಂಗಡಿ ಧರ್ಮಭೂಮಿಯಾಗಿದ್ದು, ಇಲ್ಲಿ ಎಲ್ಲರೂ ಒಟ್ಟಾಗಿ ಹಬ್ಬ-ಹರಿದಿನಗಳನ್ನು ಆಚರಿಸುತ್ತಾರೆ. ಇಂತಹ ಊರಿನ ಶಾಲೆಯಲ್ಲಿ ಶಾಸಕರು ರಾಜಕೀಯ ಭಾಷಣ ಮಾಡುತ್ತಿರುವುದು ಸರಿಯಲ್ಲ. ಇದನ್ನು ಖಂಡಿಸಿ ಜನಾಂದೋಲನ ಸಭೆ ಆಯೋಜಿಸಲಾಗಿದೆ ಎಂದರು.

ವಸಂತ ಬಂಗೇರ ಅವರಂತಹ ನಾಯಕರ ಕೊಡುಗೆಯಿಂದ ಬೆಳ್ತಂಗಡಿಯಲ್ಲಿ ಹಲವು ಶಾಲಾ-ಕಾಲೇಜುಗಳು ತಲೆ ಎತ್ತಿವೆ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ ಕೊಡುಗೆ ಏನು ಎಂದು ಪ್ರಶ್ನಿಸಲಾಗುತ್ತಿದೆ. ಸರ್ಕಾರದಿಂದ ಬಿಡುಗಡೆಯಾದ ಅನುದಾನದಲ್ಲಿಯೇ ಶಾಸಕರು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ ಹೊರತು ತಮ್ಮ ಸ್ವಂತ ಹಣದಿಂದಲ್ಲ. ಶಾಲೆಯ ಸಭಾಂಗಣಕ್ಕೆ ನರೇಂದ್ರ ಮೋದಿ ಅವರ ಹೆಸರಿಡಲು ಮುಂದಾಗಿದ್ದರು. ಮೋದಿ ಅವರ ಹೆಸರಿಡುವುದಾದರೆ ಇಡಿ, ಗಾಂಧೀಜಿಯವರ ಹಂತಕ ಗೋಡ್ಸೆ ಹೆಸರನ್ನೇ ಇಡಿ. ಆದರೆ ಕಾನೂನು ಪಾಲಿಸಿ ಎಂದು ವ್ಯಂಗ್ಯವಾಡಿದರು.
ಶಾಲೆ, ದೇವಸ್ಥಾನ, ಬ್ಯಾಂಕ್ ಸೇರಿದಂತೆ ರಾಜಕೀಯೇತರ ವೇದಿಕೆಗಳಲ್ಲಿ ರಾಜಕೀಯ ಭಾಷಣ ಮಾಡುವುದು ಸರಿಯಲ್ಲ. ನಾವು ರಾಜಕೀಯ ವೇದಿಕೆಗಳಲ್ಲಿ ಮಾತ್ರ ರಾಜಕೀಯ ಮಾತನಾಡುತ್ತೇವೆ. ವಿಜಯೇಂದ್ರ ಅವರೊಂದಿಗೆ ಸುತ್ತಾಡುತ್ತಿದ್ದ ಶಾಸಕರು ನೀಡಿದ ತಪ್ಪು ಸಲಹೆಗಳಿಂದ ಆಣೆ-ಪ್ರಮಾಣದ ಸವಾಲು ಹಾಕುವ ಹಂತಕ್ಕೆ ಹೋಗಿದ್ದರು. ಇದರ ಪರಿಣಾಮ ಬಿಜೆಪಿಯಲ್ಲಿ ಭಿನ್ನಾಭಿಪ್ರಾಯ ಉಂಟಾಗಿ, ಅವರನ್ನು ದೂರವಿಡುವಂತಾಯಿತು ಎಂದು ಟೀಕಿಸಿದರು.

ಎಂಟು ವರ್ಷಗಳಿಂದ ಶಾಸಕರಾಗಿರುವ ಹರೀಶ್ ಪೂಂಜ ಅವರು ಮೂರು ವರ್ಷಗಳಿಂದ ಶಾಸಕರಾಗಿರುವ ಪುತ್ತೂರಿನ ಅಶೋಕ್ ರೈ ಅವರ ಸಾಧನೆಗಳ ಬಗ್ಗೆ ಪ್ರಶ್ನಿಸುತ್ತಿದ್ದಾರೆ. ಹಾಗಾದರೆ ನೀವು ನಿಮ್ಮ ಕ್ಷೇತ್ರಕ್ಕೆ ಎಷ್ಟು ಯೋಜನೆಗಳನ್ನು ತಂದಿದ್ದೀರಿ? ರಸ್ತೆಗಳಲ್ಲಿನ ಗುಂಡಿಗಳಿಗೆ ಜನರು ಬಿದ್ದು ತೊಂದರೆ ಅನುಭವಿಸಿದಾಗ ಶಾಸಕರಿಗೆ ಶಾಪ ಹಾಕುತ್ತಿದ್ದಾರೆ. ಅಶೋಕ್ ರೈ ಅವರನ್ನು ಟೀಕಿಸುವ ಭರದಲ್ಲಿ ಪುತ್ತೂರಿನ ಮಹಾಲಿಂಗೇಶ್ವರ ದೇವಸ್ಥಾನವನ್ನೂ ರಾಜಕೀಯಕ್ಕೆ ಎಳೆದು ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದುವರೆಗೆ ಕೆಡಿಪಿ ಸಭೆ ನಡೆಸಲು ಶಾಸಕರಿಗೆ ಸಾಧ್ಯವಾಗಿಲ್ಲ. ಕೇವಲ ಸಭೆಗಳಲ್ಲಿ ಕುಳಿತು ಅನುದಾನ ಕೇಳಿದರೆ ಸಾಲದು. ಸುಳ್ಯದ ಶಾಸಕಿ ಭಾಗೀರಥಿ ಮುರುಳ್ಯ ಅವರು ಸರ್ಕಾರದಿಂದ ಅನುದಾನ ತಂದು ಅಭಿವೃದ್ಧಿ ಕಾರ್ಯಗಳನ್ನು ಮಾಡುತ್ತಿದ್ದಾರೆ. ಆದರೆ ಹರೀಶ್ ಪೂಂಜ ಅವರಿಗೆ ಅನುದಾನ ತರಲು ಯಾಕೆ ಸಾಧ್ಯವಾಗುತ್ತಿಲ್ಲ? ಈ ಪರಿಸ್ಥಿತಿಗೆ ಶಾಸಕರೇ ಕಾರಣ ಎಂದು ಆರೋಪಿಸಿದರು.

ಗ್ಯಾರಂಟಿ ಯೋಜನೆಗಳ ಬಗ್ಗೆ ಅಪಪ್ರಚಾರ ಬೇಡ: ಅಬ್ದುಲ್ ರಹಿಮಾನ್
ನಿಗಮದ ನಿರ್ದೇಶಕ ಅಬ್ದುಲ್ ರಹಿಮಾನ್ ಮಾತನಾಡಿ, ಕೆಲವು ದಿನಗಳ ಹಿಂದೆ ಕಾಂಗ್ರೆಸ್ ವಿರುದ್ಧ ಕೆಲವರು ಮನಬಂದಂತೆ ಮಾತನಾಡಿ, ಗ್ಯಾರಂಟಿ ಯೋಜನೆಗಳಿಂದ ಹಣ ಬರುತ್ತಿಲ್ಲ ಎಂದು ಆರೋಪಿಸಿದ್ದಾರೆ. ಈ ಕುರಿತು ಪರಿಶೀಲಿಸಲು ತಂಡ ರಚಿಸಿ ಮನೆಮನೆಗೆ ಭೇಟಿ ನೀಡಿ ವಿಚಾರಿಸಿದಾಗ ಮಡಂತ್ಯಾರಿನ ಮಹಿಳೆಯರಿಗೆ ಗೃಹಲಕ್ಷ್ಮಿ ಯೋಜನೆಯ ಹಣ ಬರುತ್ತಿರುವುದು ತಿಳಿದುಬಂದಿದೆ. ಆದ್ದರಿಂದ ಮೈಕ್ ಸಿಕ್ಕಿತೆಂದು ಜನರ ದಾರಿ ತಪ್ಪಿಸುವ ರೀತಿಯಲ್ಲಿ ಮಾತನಾಡಬಾರದು ಎಂದು ಎಚ್ಚರಿಸಿದರು.
ಸೌಹಾರ್ದತೆಗೆ ಧಕ್ಕೆ ತರಬೇಡಿ. ಕಾಲರ್ ಪಟ್ಟಿ ಹಿಡಿದು ಪ್ರಶ್ನಿಸುವಂತೆ ಕೆಲವರು ಹೇಳಿಕೆ ನೀಡಿದ್ದಾರೆ. ಕಾಲರ್ ಮಾತ್ರವಲ್ಲ, ನಿಮ್ಮ ಕುತ್ತಿಗೆ ಹಿಡಿದುಕೊಂಡೇ ಕಾರ್ಯಕರ್ತರು ಪ್ರಶ್ನಿಸುವ ಪರಿಸ್ಥಿತಿ ಬರಬಹುದು ಎಂದು ಹೇಳಿದರು.
ಗೃಹಲಕ್ಷ್ಮಿಯಿಂದ ಮಹಿಳೆಯರಿಗೆ ಆರ್ಥಿಕ ನೆರವು: ಲೋಕೇಶ್ವರಿ ವಿನಯಚಂದ್ರ
ಸೌತಡ್ಕ ಮಹಾಗಣಪತಿ ದೇವಸ್ಥಾನದ ಟ್ರಸ್ಟಿ ಲೋಕೇಶ್ವರಿ ವಿನಯಚಂದ್ರ ಮಾತನಾಡಿ, ಗೃಹಲಕ್ಷ್ಮಿ ಯೋಜನೆಯ ಲಾಭವನ್ನು ಕಾಂಗ್ರೆಸ್ ಮಹಿಳೆಯರಿಗಿಂತ ಬಿಜೆಪಿಯ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಪಡೆಯುತ್ತಿದ್ದಾರೆ. ಗ್ಯಾರಂಟಿ ಯೋಜನೆಗಳಡಿ ಹೆಚ್ಚಿನ ಅನುದಾನ ಪಡೆದ ಜಿಲ್ಲೆಗಳಲ್ಲಿ ದಕ್ಷಿಣ ಕನ್ನಡವೂ ಪ್ರಮುಖ ಸ್ಥಾನದಲ್ಲಿದೆ. ಗೃಹಲಕ್ಷ್ಮಿ ಯೋಜನೆಯಿಂದ ಮಹಿಳೆಯರ ವೈಯಕ್ತಿಕ ಖರ್ಚಿಗೆ ನೆರವಾಗುತ್ತಿದ್ದು, ಕುಟುಂಬದ ಪುರುಷರ ಜೇಬಿನಲ್ಲಿದ್ದ ಹಣವೂ ಉಳಿತಾಯವಾಗುತ್ತಿದೆ ಎಂದರು.
ಕಾಂಗ್ರೆಸ್ ಕೊಡುಗೆಯನ್ನು ಮರೆಯಬೇಡಿ: ಸಾಹುಲ್ ಹಮೀದ್
ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಸಾಹುಲ್ ಹಮೀದ್ ಮಾತನಾಡಿ, ನಾಲ್ಕು ವರ್ಷಗಳ ಹಿಂದೆ ಬಿಜೆಪಿ ಅಧಿಕಾರದಲ್ಲಿದ್ದಾಗ ಹಲಾಲ್, ಮತಾಂತರ ಮತ್ತು ದ್ವೇಷ ಭಾಷಣಗಳೇ ಪ್ರಮುಖ ಚರ್ಚೆಗಳಾಗಿದ್ದವು. ಆದರೆ ಈಗ ಪಂಚ ಗ್ಯಾರಂಟಿ ಯೋಜನೆಗಳ ಕುರಿತು ಸಕಾರಾತ್ಮಕ ಚರ್ಚೆಗಳು ನಡೆಯುತ್ತಿವೆ. ಜಿಲ್ಲೆಗೆ ಖಡಕ್ ಪೊಲೀಸ್ ವರಿಷ್ಠಾಧಿಕಾರಿಯನ್ನು ನೇಮಿಸುವ ಮೂಲಕ ದ್ವೇಷ ಭಾಷಣಗಳಿಗೆ ಕಡಿವಾಣ ಹಾಕಲಾಗಿದೆ ಎಂದರು.
ಇಡೀ ಜಿಲ್ಲೆಗೆ ಮಾದರಿಯಾಗಿರುವ ಮಡಂತ್ಯಾರಿನ ಶಾಲೆಯಲ್ಲಿ ರಾಜಕೀಯ ಭಾಷಣ ಮಾಡುವುದು ಎಷ್ಟು ಸರಿ? ನೀವು ಟೀಕಿಸುವ ಕಾಂಗ್ರೆಸ್ ಸರ್ಕಾರದ ಆಡಳಿತದ ಅವಧಿಯಲ್ಲಿಯೇ ಅನೇಕರು ಜಮೀನು ಹೊಂದಲು ಸಾಧ್ಯವಾಗಿದೆ. ಇದೇ ಪಕ್ಷದ ಆಡಳಿತದಲ್ಲಿ ನೀವು ಅಂಗನವಾಡಿಗಳಲ್ಲಿ ಪೌಷ್ಟಿಕ ಆಹಾರ ಪಡೆದಿದ್ದೀರಿ. ಹೀಗಿರುವಾಗ ಕಾಂಗ್ರೆಸ್ ಪಕ್ಷದ ಕೊಡುಗೆಯನ್ನು ಮರೆಯಬಾರದು ಎಂದು ಹೇಳಿದರು.
ಯಾವುದೇ ಪಕ್ಷದವರಾಗಿದ್ದರೂ ಶಾಲೆಯಂತಹ ಶಿಕ್ಷಣ ಸಂಸ್ಥೆಯಲ್ಲಿ ಶಾಸಕರು ರಾಜಕೀಯ ಭಾಷಣ ಮಾಡಿರುವುದು ದುರಂತ. ಉಪ್ಪಿನಂಗಡಿ-ಪಿಲಿಗೂಡು ರಸ್ತೆಯನ್ನು ಸರಿಪಡಿಸುವ ಜವಾಬ್ದಾರಿ ಶಾಸಕರ ಮೇಲಿದೆ. ನಾನು ಜಿಲ್ಲಾ ಪಂಚಾಯತ್ ಸದಸ್ಯನಾಗಿದ್ದ ಆರು ವರ್ಷಗಳ ಹಿಂದೆಯೇ ಈ ಭಾಗದ ಅಭಿವೃದ್ಧಿಗೆ ಅನುದಾನ ತರುವ ಅಗತ್ಯವಿತ್ತು ಎಂದರು.
ಕಲ್ಲೇರಿ ಹೋಬಳಿ ರಚನೆ ಮಾಡುವುದಾಗಿ ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಘೋಷಿಸಲಾಗಿತ್ತು. ಆದರೆ ಅದು ಎಲ್ಲಿದೆ? ಕೆಲವೆಡೆ ರಸ್ತೆ ಕಾಮಗಾರಿಗಳಿಗೆ ಶಿಲಾನ್ಯಾಸ ನೆರವೇರಿಸಿ ಮೂರು ವರ್ಷಗಳಾದರೂ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಏಕಲವ್ಯ ವಸತಿ ಶಾಲೆ ಎಲ್ಲಿದೆ? ಈಗ ಯಾರ ಕಾಲರ್ ಪಟ್ಟಿ ಹಿಡಿದು ಪ್ರಶ್ನಿಸಬೇಕು ಎಂದು ಶಾಸಕರನ್ನು ಪ್ರಶ್ನಿಸಿದರು.
ಕಾರ್ಯಕ್ರಮದಲ್ಲಿ ಮೀನುಗಾರಿಕೆ ಇಲಾಖೆಯ ನಿರ್ದೇಶಕ ಸೆಬಾಸ್ಟಿನ್, ಬೆಳ್ತಂಗಡಿ ಪಂಚ ಗ್ಯಾರಂಟಿ ಯೋಜನೆಗಳ ಸಮಿತಿ ಸದಸ್ಯ ಹ್ಯಾರಿಸ್ ಮದ್ದಡ್ಕ, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ನಾಗೇಶ್ ಗೌಡ, ನಗರ ಅಧ್ಯಕ್ಷ ಸತೀಶ್ ಕಾಶಿಪಟ್ಣ, ಕೆಪಿಸಿಸಿ ಮಹಿಳಾ ಘಟಕದ ಕಾರ್ಯದರ್ಶಿ ಝೀನತ್, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಶೇಖರ್ ಕುಕ್ಕೇಡಿ, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಸದಸ್ಯೆ ಐರಿನ್, ಗ್ಯಾರಂಟಿ ಯೋಜನೆಗಳ ಮಾಜಿ ಅಧ್ಯಕ್ಷ ಪದ್ಮನಾಭ ಸಾಲಿಯಾನ್, ಮಡಂತ್ಯಾರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ರಾಜಶೇಖರ್ ಶೆಟ್ಟಿ, ಮಾಲಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪುನೀತ್ ಕುಮಾರ್, ಮಡಂತ್ಯಾರು ಸೇವಾ ಸಹಕಾರಿ ಬ್ಯಾಂಕ್ ಮಾಜಿ ಅಧ್ಯಕ್ಷ ಅರವಿಂದ ಜೈನ್, ಮಚ್ಚಿನ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಮೋದ್ ಮಚ್ಚಿನ, ಸೌತಡ್ಕ ದೇವಸ್ಥಾನದ ಟ್ರಸ್ಟಿ ಲೋಕೇಶ್ವರಿ ವಿನಯಚಂದ್ರ ಹಾಗೂ ಪ್ರವೀಣ್ ಹಳ್ಳಿಮನೆ ಉಪಸ್ಥಿತರಿದ್ದರು. ಬೆಳ್ತಂಗಡಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಪದಾಧಿಕಾರಿಗಳು ಮತ್ತು ಕಾಂಗ್ರೆಸ್ ಕಾರ್ಯಕರ್ತರು ಭಾಗವಹಿಸಿದ್ದರು.
ಮಾಲಾಡಿ ಗ್ರಾಮ ಸಮಿತಿ ಮಾಜಿ ಅಧ್ಯಕ್ಷ ಮಹಮ್ಮದ್ ಅಲಿ ಸ್ವಾಗತಿಸಿದರು. ಬೆಳ್ತಂಗಡಿ ಪಂಚ ಗ್ಯಾರಂಟಿ ಸಮಿತಿ ಸದಸ್ಯ ಸುಕೇಶ್ ಕೆ. ಮಾಲಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

