ಮಂಗಳೂರು: ಶಾಲಾ ವೇದಿಕೆಯನ್ನು ರಾಜಕೀಯ ಭಾಷಣಕ್ಕೆ ಬಳಸಿಕೊಂಡಿದ್ದಾರೆ ಎಂಬ ಗಂಭೀರ ಆರೋಪಕ್ಕೆ ಬೆಳ್ತಂಗಡಿ ಬಿಜೆಪಿ ಶಾಸಕ ಹರೀಶ್ ಪೂಂಜಾ ಗುರಿಯಾಗಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಪೂಂಜಾಲಕಟ್ಟೆ ಕರ್ನಾಟಕ ಪಬ್ಲಿಕ್ ಸ್ಕೂಲ್ನಲ್ಲಿ ಶನಿವಾರ ನಡೆದ ನೂತನ ಸಭಾ ಭವನದ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಾಸಕರು ಕಾಂಗ್ರೆಸ್ ಪಕ್ಷದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದು, ಶಾಲಾ ಮಕ್ಕಳಿಗೆ “ಈ ದರಿದ್ರ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಬೇಡಿ” ಎಂದು ಕರೆ ನೀಡಿರುವ ಹಾಗೂ ಮಕ್ಕಳಿಂದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕಿಸಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗಿ ವಿವಾದದ ಕಿಡಿ ಹೊತ್ತಿಸಿದೆ.
₹1 ಕೋಟಿ ವೆಚ್ಚದ ‘ನರೇಂದ್ರ ಮೋದಿ ಸಭಾ ಭವನ’ ಉದ್ಘಾಟನೆ ವೇಳೆ ವಿವಾದ

ಪೂಂಜಾಲಕಟ್ಟೆ ಸರ್ಕಾರಿ ಶಾಲೆಯಲ್ಲಿ ಸುಮಾರು ₹1 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ನೂತನ ಸಭಾ ಭವನದ ಉದ್ಘಾಟನಾ ಸಮಾರಂಭದಲ್ಲಿ ಈ ಘಟನೆ ನಡೆದಿದೆ. ಶಾಸಕ ಹರೀಶ್ ಪೂಂಜಾ ಅವರ ಅನುದಾನ, ರಾಜ್ಯ ಸರ್ಕಾರದ ಅನುದಾನ ಹಾಗೂ ಮಡಂತ್ಯಾರು ಸೇಕ್ರೆಡ್ ಹಾರ್ಟ್ ಕೊ–ಆಪರೇಟಿವ್ ಸೊಸೈಟಿ ನೀಡಿದ ₹25 ಲಕ್ಷ ನೆರವಿನೊಂದಿಗೆ ಈ ಭವನ ನಿರ್ಮಾಣವಾಗಿದ್ದು, ಇದಕ್ಕೆ ‘ನರೇಂದ್ರ ಮೋದಿ ಸಭಾ ಭವನ’ ಎಂದು ನಾಮಕರಣ ಮಾಡಲಾಗಿತ್ತು.
ಸಭಾ ಭವನದ ಹೆಸರು ಮತ್ತು ಅನುದಾನದ ವಿಚಾರವಾಗಿ ಸ್ಥಳೀಯವಾಗಿ ಉಂಟಾಗಿದ್ದ ಅಸಮಾಧಾನದ ಹಿನ್ನೆಲೆಯಲ್ಲಿ ಭಾಷಣ ಮಾಡಿದ ಹರೀಶ್ ಪೂಂಜಾ, “ಯಾರು ತೊಂದರೆ ಕೊಡುತ್ತಿದ್ದಾರೆ ಅವರ ಹಿಂದೆ ಹೋಗಬೇಡಿ. ಈ ದರಿದ್ರ ಕಾಂಗ್ರೆಸ್ ಪಕ್ಷವನ್ನು ನೀವು ಬೆಂಬಲಿಸಬೇಡಿ. ಎಲ್ಲಿಂದಾದರೂ ಕಾಡಿ ಬೇಡಿ ಅನುದಾನ ತಂದು ಶಾಲೆಯನ್ನು ಅಭಿವೃದ್ಧಿ ಮಾಡುತ್ತೇನೆ” ಎಂದು ಮಕ್ಕಳ ಎದುರೇ ಹೇಳಿಕೆ ನೀಡಿದ್ದಾರೆ.

ಇದನ್ನೂ ಓದಿ: ಬೆಳೆ ವಿಮೆ ಟರ್ಮ್ ಶೀಟ್ ಬದಲಾವಣೆಗೆ ಕಾರಣವೇನು? ಸರ್ಕಾರ ಉತ್ತರಿಸಲಿ: ಹರೀಶ್ ಪೂಂಜ ಆಗ್ರಹ
“ಬಸವೇಶ್ವರ ನಿಮ್ಮನ್ನು ಭಸ್ಮ ಮಾಡದೆ ಬಿಡನು”: ಕಾಂಗ್ರೆಸ್ ವಿರುದ್ಧ ಪೂಂಜಾ ಕಿಡಿ
ತಮ್ಮ ವಿರುದ್ಧ ಕೇಳಿಬಂದ ಟೀಕೆಗಳಿಗೆ ಆಕ್ರೋಶ ವ್ಯಕ್ತಪಡಿಸಿದ ಶಾಸಕರು, “ಶಾಲೆಯಲ್ಲಿ ರಾಜಕಾರಣ ಮಾಡಲು ಬರಬೇಡಿ, ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲು ಬರಬೇಡಿ. ಮಾಡಲು ಬಂದರೆ ಆ ಬಸವೇಶ್ವರ ನಿಮ್ಮನ್ನು ಭಸ್ಮ ಮಾಡದೆ ಬಿಡನು. ನಾನು ಬಸವನಗುಡಿಯ ದೇವರಿಗೆ ಕೈ ಮುಗಿದು ಪ್ರಾರ್ಥನೆ ಮಾಡುತ್ತೇನೆ, ಇಂತಹ ದುಷ್ಟ ಬುದ್ಧಿಗಳಿಗೆ ಆದಷ್ಟು ಬೇಗ ಮುಕ್ತಿ ಕೊಡು ಎಂದು ಬೇಡಿಕೊಳ್ಳುತ್ತೇನೆ” ಎಂದು ಕಿಡಿಕಾರಿದ್ದಾರೆ.

“ನಾವು ಯಾವತ್ತೂ ಮುಂಬಾಗಿಲಿನಿಂದ ಬರುವವರು, ಹಿಂಬಾಗಿಲಿನಿಂದ ಬರುವವರಲ್ಲ. ಮುಂದೊಂದು ದಿನ ಒಳ್ಳೆಯ ಕಾರ್ಯಕ್ರಮವನ್ನು ಸಂಘಟಿಸಿ ಎಲ್ಲರಿಗೂ ಉತ್ತರ ಕೊಡುವ ಕೆಲಸ ಮಾಡುತ್ತೇನೆ” ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಹರೀಶ್ ಪೂಂಜಾ ಹರಿಹಾಯ್ದಿದ್ದಾರೆ. ಸದ್ಯ ಶಾಲಾ ಮಕ್ಕಳ ಸಮ್ಮುಖದಲ್ಲಿ ರಾಜಕೀಯ ಭಾಷಣ ಮಾಡಿರುವ ವಿಡಿಯೋಗೆ ಸಾರ್ವಜನಿಕ ವಲಯದಲ್ಲಿ ಪರ-ವಿರೋಧದ ಚರ್ಚೆಗಳು ವ್ಯಕ್ತವಾಗುತ್ತಿವೆ.

