ಬೆಳ್ತಂಗಡಿ: ಅಕ್ಷರದಾಸೋಹ ನೌಕರರ ಕೆಲಸದ ಭದ್ರತೆ ಖಾತರಿಪಡಿಸಬೇಕು, ಖಾಸಗೀಕರಣದ ಪ್ರಯತ್ನವನ್ನು ಕೈಬಿಡಬೇಕು ಹಾಗೂ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆಗ್ರಹಿಸಿ ಬೆಂಗಳೂರಿನಲ್ಲಿ ನಡೆಯುತ್ತಿರುವ ಹೋರಾಟಕ್ಕೆ ಬೆಂಬಲವಾಗಿ ಬೆಳ್ತಂಗಡಿಯಲ್ಲಿ ಪ್ರತಿಭಟನೆ ನಡೆಯಿತು.
ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಸಿಐಟಿಯು ಬೆಳ್ತಂಗಡಿ ತಾಲೂಕು ಸಮಿತಿಯ ನೇತೃತ್ವದಲ್ಲಿ ನ.16ರಂದು ಬೆಳ್ತಂಗಡಿ ತಾಲೂಕು ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಯಿತು.

ಅಕ್ಷರದಾಸೋಹ ನೌಕರರ ಉದ್ಯೋಗವನ್ನು ಉಳಿಸಬೇಕು, ಖಾಸಗೀಕರಣದ ಹುನ್ನಾರವನ್ನು ತಡೆಯಬೇಕು, ನೌಕರರ ವೇತನವನ್ನು ಹೆಚ್ಚಿಸಬೇಕು ಹಾಗೂ ಸೂಕ್ತ ಉದ್ಯೋಗ ಭದ್ರತೆ ಒದಗಿಸಬೇಕು ಎಂಬ ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ಅಕ್ಷರದಾಸೋಹ ನೌಕರರ ವೇತನ ₹10 ಸಾವಿರಕ್ಕೆ ಹೆಚ್ಚಿಸಿ; ಖಾಸಗೀಕರಣ ನಿಲ್ಲಿಸಿ: ಬಿ.ಎಂ. ಭಟ್ ಆಗ್ರಹ

ಅಕ್ಷರದಾಸೋಹ ನೌಕರರ ಉದ್ಯೋಗ ಭದ್ರತೆ ಕಾಪಾಡಿ, ವೇತನವನ್ನು ಕನಿಷ್ಠ ₹10 ಸಾವಿರಕ್ಕೆ ಹೆಚ್ಚಿಸಬೇಕು. ನೌಕರರನ್ನು ಕೆಲಸದಿಂದ ತೆಗೆದುಹಾಕುವ ಹಾಗೂ ಅಕ್ಷರದಾಸೋಹ ಯೋಜನೆಯನ್ನು ಖಾಸಗೀಕರಣಗೊಳಿಸುವ ಪ್ರಯತ್ನವನ್ನು ಸರ್ಕಾರ ತಕ್ಷಣ ಕೈಬಿಡಬೇಕು ಎಂದು ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಿ.ಎಂ. ಭಟ್ ಆಗ್ರಹಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಅಕ್ಷರದಾಸೋಹ ನೌಕರರಿಗೆ ₹7 ಸಾವಿರ ವೇತನ ನೀಡುವುದಾಗಿ ಭರವಸೆ ನೀಡಿದ್ದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರ ಆ ಭರವಸೆಯನ್ನು ಮರೆತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ನಡುವೆ ರಾಜಕೀಯ ಭಿನ್ನಾಭಿಪ್ರಾಯಗಳಿದ್ದರೂ ಅದರ ಪರಿಣಾಮವನ್ನು ಅಕ್ಷರದಾಸೋಹ ನೌಕರರು ಹಾಗೂ ಶಾಲಾ ಮಕ್ಕಳ ಮೇಲೆ ಯಾಕೆ ಹೇರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: ಬಂಟ್ವಾಳ: ಬೆಲೆ ಏರಿಕೆ, ಪಿಂಚಣಿ ಸಮಸ್ಯೆ ಖಂಡಿಸಿ ಮಂಚಿಯಲ್ಲಿ ಬಿಜೆಪಿ ಪ್ರತಿಭಟನೆ
ಶಾಸಕರ ವೇತನವನ್ನು ಪರಿಷ್ಕರಿಸುವಾಗ ಎಲ್ಲ ಪಕ್ಷಗಳ ಶಾಸಕರು ಒಗ್ಗಟ್ಟಿನಿಂದ ಬೆಂಬಲಿಸುತ್ತಾರೆ. ಆದರೆ ದುಡಿಯುವ ನೌಕರರ ವೇತನ ಹೆಚ್ಚಳದ ವಿಚಾರದಲ್ಲಿ ಯಾಕೆ ಬದ್ಧತೆ ತೋರುತ್ತಿಲ್ಲ ಎಂದು ಪ್ರಶ್ನಿಸಿದರು.
ಬಿಜೆಪಿ ಸರ್ಕಾರದ ಅವಧಿಯಲ್ಲಿಯೂ ನೌಕರರಿಗೆ ನ್ಯಾಯಯುತ ವೇತನ ದೊರೆತಿಲ್ಲ. ಕಾಂಗ್ರೆಸ್ ಸರ್ಕಾರವೂ ವೇತನ ಹೆಚ್ಚಳ ಮಾಡದೆ ಅನ್ಯಾಯ ಎಸಗುತ್ತಿದೆ. ಎರಡೂ ಸರ್ಕಾರಗಳಿಗೆ ನೌಕರರ ಹಕ್ಕುಗಳನ್ನು ಕಸಿದುಕೊಳ್ಳುವುದು ಮಾತ್ರ ಗೊತ್ತಿದೆ ಎಂದು ಟೀಕಿಸಿದರು.
ಅಕ್ಷರದಾಸೋಹ ನೌಕರರನ್ನು ಕೆಲಸದಿಂದ ತೆಗೆದುಹಾಕುವ ಪ್ರಕ್ರಿಯೆಯಿಂದ ಸರ್ಕಾರ ಹಿಂದೆ ಸರಿಯಬೇಕು. ಪ್ರಧಾನಿ ಮತ್ತು ಮುಖ್ಯಮಂತ್ರಿಗಳು ಮಧ್ಯಪ್ರವೇಶಿಸಿ ನೌಕರರ ವೇತನವನ್ನು ₹10 ಸಾವಿರಕ್ಕೆ ಹೆಚ್ಚಿಸಬೇಕು. ಇಲ್ಲವಾದಲ್ಲಿ ನೌಕರರು ತಮ್ಮ ಹಕ್ಕುಗಳಿಗಾಗಿ ತೀವ್ರ ಹೋರಾಟ ನಡೆಸಲಿದ್ದಾರೆ ಎಂದು ಎಚ್ಚರಿಸಿದರು.
15 ವರ್ಷಗಳಿಂದ ಹೋರಾಟ, ಈಗಲೂ ₹3,500 ವೇತನ: ಲಲಿತಾ
ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘದ ತಾಲೂಕು ಮಾಜಿ ಅಧ್ಯಕ್ಷೆ ಲಲಿತಾ ಮಾತನಾಡಿ, ಕಳೆದ 15 ವರ್ಷಗಳಿಂದ ನೌಕರರ ಹಕ್ಕುಗಳಿಗಾಗಿ ಹೋರಾಟ ನಡೆಸುತ್ತಿದ್ದರೂ ಕಡಿಮೆ ವೇತನ ನೀಡಲಾಗುತ್ತಿದೆ. ಡಿಕೆ ಶಿವಕುಮಾರ್ ಅವರು ಮುಖ್ಯಮಂತ್ರಿ ಆದ ನಂತರ ನಮ್ಮ ವೇತನ ನಾಲ್ಕೂವರೆ ಸಾವಿರದಿಂದ ₹3,500 ಕ್ಕೆ ಇಳಕೆಯಾಗಿದೆ. ಇಷ್ಟು ಕಡಿಮೆ ಮೊತ್ತದಲ್ಲಿ ಜೀವನ ನಿರ್ವಹಣೆ ಮಾಡುವುದು ಹೇಗೆ ಎಂದು ಪ್ರಶ್ನಿಸಿದರು. ಅಕ್ಷರದಾಸೋಹ ನೌಕರರಿಗೆ ಕನಿಷ್ಠ ವೇತನ ನೀಡುವ ಮೂಲಕ ಸರ್ಕಾರ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದರು.
ಬೆಳ್ತಂಗಡಿ ತಹಶೀಲ್ದಾರರಿಗೆ ಮನವಿ ಸಲ್ಲಿಕೆ
ಪ್ರತಿಭಟನೆಯ ಬಳಿಕ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಶೀಲ್ದಾರ್ ಎಸ್.ಎನ್. ನರಗುಂದ ಅವರ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಮನವಿ ಸ್ವೀಕರಿಸಿದ ತಹಶೀಲ್ದಾರ್ ಅವರು, ಮನವಿ ಪತ್ರವನ್ನು ಜಿಲ್ಲಾಧಿಕಾರಿಗಳ ಮೂಲಕ ಶಿಕ್ಷಣ ಇಲಾಖೆಗೆ ರವಾನಿಸಲಾಗುವುದು ಎಂದು ಭರವಸೆ ನೀಡಿದರು.

