ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಆನ್‌ಲೈನ್ ಗ್ರಾಹಕರೊಬ್ಬರಿಗೆ ದ್ವೇಷ ಹಾಗೂ ನಗು ಎರಡನ್ನೂ ಒಟ್ಟಿಗೆ ತರಿಸುವಂತಹ ವಿಲಕ್ಷಣ ಅನುಭವವೊಂದು ಎದುರಾಗಿದೆ. ಇತ್ತೀಚಿನ ದಿನಗಳಲ್ಲಿ ಕೇವಲ 10 ನಿಮಿಷಗಳಲ್ಲಿ ದಿನಸಿ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವ ‘ಬ್ಲಿಂಕಿಟ್’ (Blinkit) ಆಪ್‌ನಲ್ಲಿ ಟೆಕ್ಕಿಯೊಬ್ಬರು ಆರ್ಡರ್ ಮಾಡಿದ್ದ ವಾಯರ್‌ಲೆಸ್ ಇಯರ್‌ಬಡ್ಸ್ (Wireless Earbuds) ಪ್ಯಾಕೇಜ್ ಒಳಗಡೆ ಇಯರ್‌ಬಡ್ಸ್ ಬದಲು ಆಲೂಗಡ್ಡೆ (Potato) ಪತ್ತೆಯಾಗಿದೆ! ಈ ಆಘಾತಕಾರಿ ಮತ್ತು ಹಾಸ್ಯಾಸ್ಪದ ಘಟನೆಯನ್ನು ಟೆಕ್ಕಿ ಜಾಲತಾಣದಲ್ಲಿ ಹಂಚಿಕೊಂಡ ಬೆನ್ನಲ್ಲೇ ಆನ್‌ಲೈನ್ ಶಾಪಿಂಗ್ ಭದ್ರತೆಯ ಕುರಿತು ಇಂಟರ್ನೆಟ್‌ನಲ್ಲಿ ಭಾರಿ ಚರ್ಚೆ ಆರಂಭವಾಗಿದೆ.
ಬೆಂಗಳೂರು ಮೂಲದ ತಂತ್ರಜ್ಞಾನ ಉದ್ಯೋಗಿ (Techie) ತಮಗೆ ತುರ್ತಾಗಿ ಇಯರ್‌ಬಡ್ಸ್ ಅಗತ್ಯವಿದ್ದಿದ್ದರಿಂದ ಬ್ಲಿಂಕಿಟ್ ಆಪ್ ಮೂಲಕ ಹಣ ಪಾವತಿಸಿ ಆರ್ಡರ್ ಮಾಡಿದ್ದರು. ಕ್ವಿಕ್ ಕಾಮರ್ಸ್ ನಿಯಮದಂತೆ ಡೆಲಿವರಿ ಬಾಯ್ ಕೆಲವೇ ನಿಮಿಷಗಳಲ್ಲಿ ಪಾರ್ಸೆಲ್ ತಂದು ಕೈಗಿಟ್ಟಿದ್ದಾನೆ. ಆದರೆ, ಅತ್ಯಂತ ಕುತೂಹಲದಿಂದ ಟೆಕ್ಕಿ ಆ ಬಾಕ್ಸ್ ಓಪನ್ ಮಾಡಿದಾಗ ಒಳಗೆ ಯಾವುದೇ ಎಲೆಕ್ಟ್ರಾನಿಕ್ ಗ್ಯಾಜೆಟ್ ಇರಲಿಲ್ಲ, ಬದಲಿಗೆ ಅದರ ತೂಕಕ್ಕೆ ಸರಿ ಹೊಂದುವಂತಹ ಒಂದು ಆಲೂಗಡ್ಡೆ ಇಡಲಾಗಿತ್ತು. ಇದನ್ನು ಕಂಡು ದಿಕ್ಕಿಚಾಲಿತರಾದ ಟೆಕ್ಕಿ, ತಕ್ಷಣವೇ ಇದರ ಫೋಟೋ ಹಾಗೂ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ:Viral Video: ಕೇವಲ 5 ಗ್ರಾಹಕರಷ್ಟೇ ಈ ಕ್ಯಾಂಟಿನ್‌ಗೆ ಬರುತ್ತಾರೆ; 70 ವರ್ಷದ ಅಜ್ಜಿಯ ಕರುಣಾಜನಕ ಜೀವನ
ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದ್ದು, ನೆಟ್ಟಿಗರು ಬ್ಲಿಂಕಿಟ್‌ನ ಪ್ಯಾಕೇಜಿಂಗ್ ಮತ್ತು ಗೋದಾಮುಗಳ (Dark Stores) ನಿರ್ವಹಣೆಯನ್ನು ತೀವ್ರವಾಗಿ ಟೀಕಿಸುತ್ತಿದ್ದಾರೆ. “ಇಯರ್‌ಬಡ್ಸ್ ಬದಲಿಗೆ ತರಕಾರಿ ಕಳುಹಿಸುವುದು ಗ್ರಾಹಕರಿಗೆ ಮಾಡುವ ವಂಚನೆ” ಎಂದು ಕೆಲವರು ಆಕ್ರೋಶ ವ್ಯಕ್ತಪಡಿಸಿದರೆ, ಇನ್ನೂ ಕೆಲವರು “ಟೆಕ್ ಸಿಟಿಯಲ್ಲಿ ಇನ್ನು ಮುಂದೆ ಇಯರ್‌ಬಡ್ಸ್‌ನಿಂದ ಹಾಡು ಕೇಳುವ ಬದಲು ಆಲೂಗಡ್ಡೆ ಬೋಂಡಾ ತಿನ್ನಿ!” ಎಂದು ತಮಾಷೆ ಮಾಡಿದ್ದಾರೆ. ಇತ್ತೀಚಿನ ದಿನಗಳಲ್ಲಿ ಕ್ವಿಕ್ ಕಾಮರ್ಸ್ ಆಪ್‌ಗಳು ದುಬಾರಿ ಮೊಬೈಲ್ ಹಾಗೂ ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಡೆಲಿವರಿ ಮಾಡುತ್ತಿರುವುದರಿಂದ, ಇಂತಹ ಯಡವಟ್ಟುಗಳು ಆ್ಯಪ್‌ಗಳ ವಿಶ್ವಾಸಾರ್ಹತೆಯ ಮೇಲೆ ದೊಡ್ಡ ಪ್ರಶ್ನೆ ಮೂಡಿಸಿವೆ.
ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ


