ಬೀದರ್: ವೀರಶೈವ ಲಿಂಗಾಯತ ಸಮುದಾಯದ ಹಿರಿಯ ಮುಖಂಡ, ಮುತ್ಸದ್ದಿ ರಾಜಕಾರಣಿ ಶತಾಯುಷಿ ಲೋಕನಾಯಕ ಡಾ. ಭೀಮಣ್ಣ ಖಂಡ್ರೆ (103) ನಿನ್ನೆ ರಾತ್ರಿ 10.50ರ ಸುಮಾರಿಗೆ ಲಿಂಗೈಕ್ಯರಾಗಿದ್ದಾರೆ.
ಕಳೆದ 10-12 ದಿನಗಳಿಂದ ವಯೋಸಹಜವಾದ ಕಾಯಿಲೆ ಮತ್ತು ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಅವರನ್ನು ಬೀದರ್ ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಭಾಲ್ಕಿಯ ಮನೆಯಲ್ಲೇ ಚಿಕಿತ್ಸೆ ಮುಂದುವರಿಸಲಾಗಿತ್ತು, ನಿನ್ನೆ ರಾತ್ರಿ ಅವರ ಆತ್ಮ ದೇಹವನ್ನು ತ್ಯಜಿಸಿತು ಎಂದು ಭೀಮಣ್ಣ ಖಂಡ್ರೆ ಪುತ್ರ ಅರಣ್ಯ ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದರು.

ಭೀಮಣ್ಣ ಖಂಡ್ರೆಯವರ ಆರೋಗ್ಯದಲ್ಲಿ ಏರುಪೇರಾದ ವಿಷಯ ತಿಳಿಯುತ್ತಿದ್ದಂತೆ ವಿವಿಧ ಮಠಾಧೀಶರು, ಸಚಿವರು, ಶಾಸಕರು, ವಿವಿಧ ರಾಜಕೀಯ ಪಕ್ಷಗಳ ಮುಖಂಡರು, ಅವರ ಬೆಂಬಲಿಗರು ಕಳೆದ ಕೆಲ ದಿನಗಳಿಂದ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸುತ್ತಿದ್ದರು.
ಇದನ್ನೂ ಓದಿ: Sakaleshpura: ಕೊನೆಗೂ ಸೆರೆಸಿಕ್ಕ ಮಹಿಳೆಯನ್ನು ಕೊಂದ ಕಿಲ್ಲರ್ ಆನೆ
ದಿವಂಗತ ಭೀಮಣ್ಣ ಖಂಡ್ರೆ ನಾಲ್ಕು ಸಲ ಶಾಸಕರಾಗಿ, ಎರಡು ಸಲ ವಿಧಾನ ಪರಿಷತ್ ಸದಸ್ಯರಾಗಿದ್ದ ಅವರು ಎಂ. ವೀರಪ್ಪ ಮೊಯ್ಲಿ ಅವರ ಸಂಪುಟದಲ್ಲಿ ಸಾರಿಗೆ ಸಚಿವರಾಗಿ ಕೆಲಸ ನಿರ್ವಹಿಸಿದ್ದರು. ಆರಂಭದಲ್ಲಿ ಸಮಾಜವಾದಿ ಪಕ್ಷದ ಕಾರ್ಯಕರ್ತರಾಗಿ ರಾಜಕೀಯ ಜೀವನಕ್ಕೆ ಕಾಲಿಟ್ಟ ಅವರು, 1953ರಲ್ಲಿ ಭಾಲ್ಕಿ ಪುರಸಭೆ ಅಧ್ಯಕ್ಷರಾಗಿದ್ದರು.
ಭೀಮಣ್ಣ ಖಂಡ್ರೆಯವರಿಗೆ ಪ್ರಸ್ತುತ ಜಿಲ್ಲಾ ಉಸ್ತುವಾರಿ ಸಚಿವ ಹಾಗೂ ಪರಿಸರ, ಅರಣ್ಯ ಮತ್ತು ಜೀವಿಶಾಸ್ತ್ರ ಸಚಿವ ಈಶ್ವರ ಬಿ. ಖಂಡ್ರೆ ಸೇರಿದಂತೆ ಇಬ್ಬರು ಪುತ್ರರು, ಐದು ಜನ ಪುತ್ರಿಯರು ಇದ್ದಾರೆ. ಪತ್ನಿ ಲಕ್ಷ್ಮೀಬಾಯಿ ಖಂಡ್ರೆ, ಗಂಡು ಮಕ್ಕಳ ಪೈಕಿ ಹಿರಿಯ ಮಗ, ಮಾಜಿ ಶಾಸಕ ವಿಜಯಕುಮಾರ್ ಖಂಡ್ರೆ ಅವರು ಅನಾರೋಗ್ಯದಿಂದ ಈ ಹಿಂದೆಯೇ ಮೃತಪಟ್ಟಿದ್ದಾರೆ.
ಇವರ ಅಂತ್ಯಕ್ರಿಯೆ ಭಾಲ್ಕಿ ಸ್ವಗ್ರಾಮದಲ್ಲಿ ಶನಿವಾರ ನಡೆಯಲಿದೆ ಎಂದು ತಿಳಿದು ಬಂದಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

