ಪುತ್ತೂರು: ದರ್ಬೆ ಸರ್ಕಲ್ ಸಮೀಪ ಅನಾಮಧೇಯ ಬೈಕ್ ಸವಾರನೊಬ್ಬ ಪಿಸ್ತೂಲ್ ತೋರಿಸಿ ವ್ಯಕ್ತಿಯೊಬ್ಬರಿಗೆ ಜೀವಬೆದರಿಕೆ ಹಾಕಿದ ಘಟನೆ ನಡೆದಿದೆ. ಈ ಸಂಬಂಧ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಕೂರ್ನಡ್ಕ ನಿವಾಸಿ ಅಬ್ದುಲ್ ಹಕೀಂ ಎಂಬುವವರು ಈ ಘಟನೆ ಕುರಿತು ದೂರು ನೀಡಿದ್ದಾರೆ.
ಹಕೀಂ ಅವರು ದರ್ಬೆಯಲ್ಲಿ ಕಾರು ನಿಲ್ಲಿಸಿದ್ದಾಗ, ಅಲ್ಲಿ ಆಟೋ ರಿಕ್ಷಾ ಚಾಲಕರ ನಡುವೆ ಮಾತಿನ ಚಕಮಕಿ ನಡೆಯುತ್ತಿತ್ತು. ಹಕೀಂ ಅವರು ಮಧ್ಯಪ್ರವೇಶಿಸಿ ಜಗಳವನ್ನು ಸಮಾಧಾನಪಡಿಸಿ ವಾಪಸ್ ಹೊರಡಲು ಸಿದ್ಧರಾದರು. ಈ ವೇಳೆ ದ್ವಿಚಕ್ರ ವಾಹನದಲ್ಲಿ ಹೆಲ್ಮೆಟ್ ಧರಿಸದೆ ಬಂದ ಅಪರಿಚಿತ ಸವಾರನೊಬ್ಬ ಹಕೀಂ ಅವರತ್ತ ಪಿಸ್ತೂಲ್ ತೋರಿಸಿ ಬೆದರಿಕೆಯೊಡ್ಡಿದ್ದಾನೆ.

ಇದನ್ನೂ ಓದಿ:ಉಳ್ಳಾಲ ಮಸೀದಿಗೆ ಬಾಂಬ್ ಬೆದರಿಕೆ: ಇನ್ಸ್ಟಾಗ್ರಾಂನಲ್ಲಿ ಪ್ರಚೋದನಕಾರಿ ಪೋಸ್ಟ್ ಹಾಕಿದ್ದ ಭಟ್ಕಳದ ವ್ಯಕ್ತಿ ಅರೆಸ್ಟ್!
ಹಕೀಂ ಮತ್ತು ಅಲ್ಲಿದ್ದ ಸಾರ್ವಜನಿಕರು ತಕ್ಷಣವೇ ಆತನನ್ನು ಹಿಡಿಯಲು ಮುಂದಾದಾಗ, ಸವಾರ ತನ್ನ ಬೈಕ್ ವೇಗವಾಗಿ ಚಲಾಯಿಸಿ ಅಲ್ಲಿಂದ ಪರಾರಿಯಾಗಿದ್ದಾನೆ.ಪುತ್ತೂರು ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳದಲ್ಲಿ ಇಂತಹ ಮಾರಕಾಸ್ತ್ರಗಳನ್ನು ಬಳಸಿ ಭಯದ ವಾತಾವರಣ ನಿರ್ಮಿಸುತ್ತಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲು ಪೊಲೀಸರು ಬಲೆ ಬೀಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

