ನವದೆಹಲಿ: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಅವರು ಸಂಸತ್ತಿನಲ್ಲಿ ನಡೆದ ಬಜೆಟ್ ಚರ್ಚೆ ವೇಳೆ ಸಂಸದೆ ಜಯ ಬಚ್ಚನ್ (Jaya Bachchan) ಅವರ ಪ್ರಶ್ನೆಗೆ ಕೆರಳಿ ಕೆಂಡವಾದ ಪ್ರಸಂಗ ನಡೆಯಿತು.
ಸಿನಿಮಾ ಕ್ಷೇತ್ರದ ಕುರಿತು ಬಜೆಟ್ ಚರ್ಚೆಗೆ ಉತ್ತರಿಸುತ್ತಿದ್ದ ವೇಳೆ ರಾಜ್ಯಸಭೆಯಲ್ಲಿ ಜಯಾ ಬಚ್ಚನ್ ಮಧ್ಯಪ್ರವೇಶಿಸಿದರು. ಚಿತ್ರರಂಗದ ಮೇಲೆ ತೆರಿಗೆ ಭಾರ ಹೆಚ್ಚಾಗಿ ಟಿಕೆಟ್ ದರಗಳು ಏರಿಕೆಯಾಗಿವೆ ಎಂದು ಅವರು ಆರೋಪಿಸಿದರು. “ನೀವು ಚೆನ್ನಾಗಿ ಉತ್ತರಿಸುತ್ತೀರಿ, ಒಳ್ಳೆಯ ಕಥೆಗಾರ್ತಿ, ನಮಗೆ ಉತ್ತಮ ಮನರಂಜನೆ ನೀಡುತ್ತೀರಿ,” ಎಂದು ವ್ಯಂಗ್ಯವಾಡಿದ ಅವರು, ಮನರಂಜನಾ ಕ್ಷೇತ್ರವು ದೇಶದಲ್ಲಿ ಅತಿ ಹೆಚ್ಚು ತೆರಿಗೆ ಪಾವತಿಸುವ ವಲಯಗಳಲ್ಲಿ ಒಂದಾಗಿದೆ ಎಂದು ಹೇಳಿದರು.

ಈ ಪ್ರಶ್ನೆಯಿಂದ ಕೆರಳಿ ತೀವ್ರ ವಾಗ್ದಾಳಿ ನಡೆಸಿದ ನಿರ್ಮಲಾ ಸೀತಾರಾಮನ್, ಮನರಂಜನಾ ತೆರಿಗೆ ಮತ್ತು ಚಿತ್ರ ಟಿಕೆಟ್ ದರ ನಿಗದಿ ರಾಜ್ಯ ಸರ್ಕಾರಗಳ ಅಧೀನ ವಿಷಯವಾಗಿದ್ದು, ಕೇಂದ್ರದ ವ್ಯಾಪ್ತಿಗೆ ಬರುವುದಿಲ್ಲ ಎಂದು ಸ್ಪಷ್ಟಪಡಿಸಿದರು. “ಟಿಕೆಟ್ ದರಗಳ ಏರಿಕೆಯಿಂದ ಕ್ಷೇತ್ರಕ್ಕೆ ತೊಂದರೆಯಾಗುತ್ತಿದೆ ಎಂಬ ವಿಷಯ ರಾಜ್ಯದ ವ್ಯಾಪ್ತಿಯದು. ಅದನ್ನು ನನ್ನನ್ನು ಕೇಳುವುದರಲ್ಲಿ ಅರ್ಥವಿಲ್ಲ” ಎಂದು ಹೇಳಿದರು.
2026ರ ಕೇಂದ್ರ ಬಜೆಟ್‌ನಲ್ಲಿ ಮನರಂಜನಾ ಕ್ಷೇತ್ರಕ್ಕೆ ಯಾವುದೇ ಪ್ರೋತ್ಸಾಹ ಅಥವಾ ರಿಯಾಯಿತಿ ನೀಡಲಾಗಿದೆಯೇ ಎಂದು ಜಯಾ ಬಚ್ಚನ್ ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವೆ, ಸೃಜನಾತ್ಮಕ ಆರ್ಥಿಕತೆಗೆ ಬಜೆಟ್‌ನಲ್ಲಿ ನಿರಂತರ ಪ್ರಾಮುಖ್ಯತೆ ನೀಡಲಾಗಿದೆ. ಅನಿಮೇಷನ್, ವಿಶುವಲ್ ಎಫೆಕ್ಟ್ಸ್ ಹಾಗೂ ಕಂಟೆಂಟ್ ಸೃಷ್ಟಿ ಕ್ಷೇತ್ರಗಳನ್ನು ಬೆಳವಣಿಗೆಯ ಪ್ರಮುಖ ಚಾಲಕಶಕ್ತಿಗಳೆಂದು ಗುರುತಿಸಲಾಗಿದೆ ಎಂದರು.
ಇದನ್ನೂ ಓದಿ: Viral: ವಿಜಯ್, ರಶ್ಮಿಕಾ ಮದುವೆ ಲೈವ್‌ಗೆ 60 ಕೋಟಿ ಆಫರ್!
ಭಾರತೀಯ ಸೃಜನಾತ್ಮಕ ತಂತ್ರಜ್ಞಾನ ಸಂಸ್ಥೆ ಸ್ಥಾಪನೆ ಮೂಲಕ 1,500 ಶಾಲೆಗಳಲ್ಲಿ ಕ್ರಿಯೇಟರ್ ಲ್ಯಾಬ್‌ಗಳನ್ನು ಆರಂಭಿಸಿ 2030ರೊಳಗೆ ಎರಡು ಮಿಲಿಯನ್ ಪರಿಣಿತ ವೃತ್ತಿಪರರನ್ನು ರೂಪಿಸುವ ಗುರಿ ಇಟ್ಟಿದ್ದೇವೆ. ಡಿಸೈನ್, ವೇಷಭೂಷೆ, ಸೆಟ್ ವಿನ್ಯಾಸ ಮತ್ತು ದೃಶ್ಯ ವೈಶಿಷ್ಟ್ಯಗಳಂತಹ ವಿಶೇಷ ಕೌಶಲ್ಯಗಳಿಗೆ ತರಬೇತಿ ನೀಡಲು ರಾಷ್ಟ್ರೀಯ ವಿನ್ಯಾಸ ಸಂಸ್ಥೆಯ ಹೊಸ ಶಾಖೆಗಳನ್ನು ಆರಂಭಿಸಲಾಗುವುದು ಎಂದರು.
ಮುಂಬೈನಲ್ಲಿ ನಡೆದ ‘ವೇವ್ಸ್ 2025’ ವಿಶ್ವ ಆಡಿಯೋ-ವಿಶುವಲ್ ಮತ್ತು ಮನರಂಜನಾ ಶೃಂಗಸಭೆಯನ್ನು ಉಲ್ಲೇಖಿಸಿದ ಅವರು, 90ಕ್ಕೂ ಹೆಚ್ಚು ದೇಶಗಳು, 10,000ಕ್ಕೂ ಅಧಿಕ ಪ್ರತಿನಿಧಿಗಳು ಹಾಗೂ ನೂರಾರು ಕಂಪನಿಗಳು ಭಾಗವಹಿಸಿದ್ದವು. “ಇವು ಮನರಂಜನಾ ಕ್ಷೇತ್ರಕ್ಕೆ ನೀಡುತ್ತಿರುವ ಮಹತ್ವದ ಹೆಜ್ಜೆಗಳು ಅಲ್ಲವೇ?” ಎಂದು ಪ್ರಶ್ನಿಸಿದರು.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

