ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿನಲ್ಲಿ ನಕಲಿ ವರ್ಗಾವಣೆ ಪತ್ರ ಸೃಷ್ಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟು, ಭ್ರಷ್ಟಾಚಾರದ ಸುಳ್ಳು ಆರೋಪ ಮಾಡಿರುವ ಶಾಸಕ ಸುನೀಲ್ ಕುಮಾರ್ ಹಾಗೂ ಎಂಎಲ್ಸಿ ರವಿಕುಮಾರ್ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಾಂಗ್ರೆಸ್ ಎಂಎಲ್ಸಿ ರಮೇಶ್ ಬಾಬು ಅವರು ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾರೆ. ಮುಖ್ಯಮಂತ್ರಿಗಳ ಹೆಸರಿನಲ್ಲಿ ಕಟ್ಟುಕಥೆ ಪತ್ರ ತಯಾರಿಸಿ, ಅದರ ಆಧಾರದ ಮೇಲೆ ಸುಳ್ಳು ಆರೋಪ ಮಾಡಿರುವ ಇವರ ವಿರುದ್ಧ ತಕ್ಷಣ ಕಾನೂನು ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಕೋರಿದ್ದಾರೆ.
ಸಾರ್ವಜನಿಕರನ್ನು ತಪ್ಪು ದಾರಿಗೆಳೆಯುವ, ಮುಖ್ಯಮಂತ್ರಿಗಳ ಸಂವಿಧಾನಿಕ ಹುದ್ದೆಯ ಗೌರವಕ್ಕೆ ಹಾನಿ ಮಾಡುವ, ಮತ್ತು ಸರ್ಕಾರದ ವಿರುದ್ಧ ಅನುಮಾನ ಮೂಡಿಸುವ ಉದ್ದೇಶದಿಂದ ದಿನಾಂಕ ಮತ್ತು ಸಂಖ್ಯೆ ಇಲ್ಲದ 2024ರ ನಕಲಿ ಪತ್ರವನ್ನು ಸೃಷ್ಟಿಸಿ ಅಪಪ್ರಚಾರ ನಡೆಸಲಾಗಿದೆ. ಇದು ಸರ್ಕಾರಿ ದಾಖಲೆಗಳ ಕಟ್ಟುಕತೆ, ಸುಳ್ಳು ಮಾಹಿತಿ ಪ್ರಸಾರ, ಮಾನಹಾನಿ ಮತ್ತು ಅಪರಾಧ ಸಂಚುಗಳನ್ನು ಒಳಗೊಂಡಿದ್ದು, ಭಾರತೀಯ ನ್ಯಾಯ ಸಂಹಿತೆ, 2023ರ ಅಡಿಯಲ್ಲಿ ಶಿಕ್ಷಾರ್ಹ ಅಪರಾಧವಾಗಿದೆ. ಚುನಾಯಿತ ಜನಪ್ರತಿನಿಧಿಗಳಿಂದ ಇಂತಹ ಕೃತ್ಯ ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಧಕ್ಕೆ ತರುತ್ತದೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಮುಂದಿನ ಚುನಾವಣೆ ಸಿದ್ಧರಾಮಯ್ಯ ಅವರ ನೇತೃತ್ವದಲ್ಲೇ ನಡೆಯಲಿದೆ: ಜಮೀರ್
ಸಂಬಂಧಪಟ್ಟ ಶಾಸಕ ಮತ್ತು ವಿಧಾನ ಪರಿಷತ್ ಸದಸ್ಯರ ವಿರುದ್ಧ ತಕ್ಷಣ FIR ದಾಖಲಿಸಲು, ನಕಲಿ ಪತ್ರದ ಫೊರೆನ್ಸಿಕ್ ಪರಿಶೀಲನೆ ನಡೆಸಲು, ಸಾಮಾಜಿಕ ಜಾಲತಾಣಗಳಲ್ಲಿ ಮೂಲವನ್ನು ಪತ್ತೆಹಚ್ಚಲು ಮತ್ತು ಮುಂದಿನ ಪ್ರಸಾರ ತಡೆಯಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಕೋರಲಾಗಿದೆ. ಈ ಸಂಬಂಧಿತ ನಕಲಿ ಪತ್ರ ಹಾಗೂ ಸಾಮಾಜಿಕ ಜಾಲತಾಣದ ಸ್ಕ್ರೀನ್‌ಶಾಟ್‌ಗಳನ್ನು ದೂರು ಜೊತೆಗೆ ಲಗತ್ತಿಸಲಾಗಿದೆ. ಈ ವಿಷಯವನ್ನು ತುರ್ತುಗತಿಯಲ್ಲಿ ಪರಿಗಣಿಸಿ ಕಾನೂನುಬದ್ಧ ಕ್ರಮ ಕೈಗೊಳ್ಳುವಂತೆ ವಿನಂತಿಸಲಾಗಿದೆ.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

