ಯಾದಗಿರಿ: ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಗುರುಮಠಕಲ್‌ನಲ್ಲಿ ನೀಡಿದ ವಿವಾದಾತ್ಮಕ ಭಾಷಣ ಈಗ ಕಾನೂನು ಸಂಕಷ್ಟಕ್ಕೆ ನಾಂದಿ ಹಾಡಿದೆ. ಮಹಾತ್ಮ ಗಾಂಧೀಜಿ ಹಾಗೂ ಪಂಡಿತ್ ಜವಾಹರಲಾಲ್ ನೆಹರು ಅವರ ಕುರಿತು ಅವಹೇಳನಕಾರಿ ಪದ ಬಳಸಿರುವ ಹಿನ್ನೆಲೆಯಲ್ಲಿ ಪೊಲೀಸರು ಶಾಸಕರ ವಿರುದ್ಧ ಸ್ವಯಂಪ್ರೇರಿತ (Sua Moto) ಪ್ರಕರಣ ದಾಖಲಿಸಿಕೊಂಡಿದ್ದಾರೆ.
“ಮಹಾತ್ಮ ಗಾಂಧೀಜಿ ಭಾರತಕ್ಕೆ ರಾಷ್ಟ್ರಪಿತನಲ್ಲ, ಅವರು ಪಾಕಿಸ್ತಾನಕ್ಕೆ ರಾಷ್ಟ್ರಪಿತ. ನಮಗೆ ಅಂಬೇಡ್ಕರ್ ಒಬ್ಬರೇ ಸಾಕು” ಎಂದು ಯತ್ನಾಳ್ ಹೇಳಿಕೆ ನೀಡಿದ್ದಾರೆ. ಜವಾಹರಲಾಲ್ ನೆಹರು ಅವರು ಭಾರತದ ಮೊದಲ ಪ್ರಧಾನಿ ಎಂಬುದನ್ನು ತಾನು ಒಪ್ಪುವುದಿಲ್ಲ ಎಂದೂ ಅವರು ಕಿಡಿಕಾರಿದ್ದಾರೆ. ಅನ್ಯಕೋಮಿನ ವಿರುದ್ಧ ಪ್ರಚೋದನಕಾರಿ ಮಾತುಗಳನ್ನಾಡಿ ಸೌಹಾರ್ದತೆ ಕೆಡಿಸಲು ಯತ್ನಿಸಿದ್ದಾರೆ ಎಂಬ ಆರೋಪದಡಿ ಭಾರತೀಯ ನ್ಯಾಯ ಸಂಹಿತೆ (BNS) ಸೆಕ್ಷನ್ 196 (ಧರ್ಮಗಳ ನಡುವೆ ದ್ವೇಷ ಪ್ರಚೋದನೆ), 299 ಮತ್ತು 353 ಅಡಿಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಇದನ್ನೂ ಓದಿ: ಸಿಎಂ ಬದಲಾವಣೆ ಹೈಕಮಾಂಡ್‌ಗೆ ಬಿಟ್ಟದ್ದು: ಸತೀಶ್ ಜಾರಕಿಹೊಳಿ
ತಮ್ಮ ಭಾಷಣದುದ್ದಕ್ಕೂ ಆಕ್ರಮಣಕಾರಿ ಧಾಟಿಯಲ್ಲೇ ಮಾತನಾಡಿದ ಯತ್ನಾಳ್, “ನನ್ನ ಮೇಲೆ ಈಗಾಗಲೇ 79ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಈ ಹೊಸ ಪ್ರಕರಣಕ್ಕೆ ನಾನು ಹೆದರುವುದಿಲ್ಲ. ಹಿಂದುತ್ವ ಮತ್ತು ಸತ್ಯಕ್ಕಾಗಿ ಹೋರಾಟ ಮುಂದುವರಿಸುತ್ತೇನೆ” ಎಂದು ಸವಾಲು ಹಾಕಿದ್ದಾರೆ. ಶಾಸಕರ ಈ ಹೇಳಿಕೆಗಳು ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದ್ದು, ರಾಜಕೀಯ ವಲಯದಲ್ಲಿ ತೀವ್ರ ಖಂಡನೆ ವ್ಯಕ್ತವಾಗಿದೆ.
ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

