Breaking News

ರಬ್ಬರ್‌ ಬೆಳೆಗೆ ಕನಿಷ್ಠ ಬೆಂಬಲ ಬೆಲೆ ಘೋಷಿಸಿ; ಕೇಂದ್ರ ಸಚಿವರಿಗೆ ದಿನೇಶ್‌ ಗುಂಡೂರಾವ್‌ ಪತ್ರ

Dakshina Kannada District In-charge Minister Dinesh Gundu Rao writes to Union Agriculture Minister requesting minimum support price for rubber growers

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯ ರಬ್ಬರ್ ಬೆಳೆಗಾರರ ಸಮಸ್ಯೆ ಕುರಿತು ಜಿಲ್ಲಾ ಉಸ್ತುವಾರಿ ಸಚಿವ‌ ದಿನೇಶ್‌ ಗುಂಡೂರಾವ್ (Dinesh Gundu Rao) ಅವರು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ (Shivraj Singh Chouhan) ಅವರಿಗೆ ಪತ್ರ ಬರೆದಿದ್ದಾರೆ.

ರಬ್ಬರ್‌ಗೆ ಕನಿಷ್ಠ ಬೆಂಬಲ ಬೆಲೆ (MSP) ನಿಗದಿ ಮಾಡುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮನವಿ ಮಾಡಿದ ಅವರು, ಕಠಿಣ ಪರಿಸ್ಥಿತಿಗಳಲ್ಲಿ ರೈತರು ಬೆಳೆ ಬೆಳೆಯುತ್ತಿರುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ರಬ್ಬರ್‌ ಅನ್ನು ಕೈಗಾರಿಕಾ ಉತ್ಪನ್ನವೆಂದು ಮಾತ್ರ ಪರಿಗಣಿಸದೆ, ಅದು ಕೃಷಿ ಪ್ರಕ್ರಿಯೆಯ ಭಾಗವೆಂದು ಪರಿಗಣಿಸಿ MSP ಜಾರಿಗೆ ತರಬೇಕು ಎಂದು ಆಗ್ರಹಿಸಿದ್ದಾರೆ.

Advertisement

ಕೃಷಿ ಸಚಿವಾಲಯದಿಂದ ಶಿಫಾರಸು ಮಾಡಿ, ರಬ್ಬರ್‌ನ್ನು ಕಡ್ಡಾಯ ಕೃಷಿ ಬೆಳೆಗಳ ಪಟ್ಟಿಗೆ ಸೇರಿಸುವಂತೆ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯಕ್ಕೆ ಕಳುಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಕುರಿತು ಕರ್ನಾಟಕದ ಸಂಸದರು ಕೂಡ ವಾಸ್ತವಾಂಶ ತಿಳಿದು ಸಹಕರಿಸಬೇಕು ಎಂದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯ ಸಾವಿರಾರು ಕುಟುಂಬಗಳು ರಬ್ಬರ್ ಬೆಳೆ ಮೇಲೆ ಅವಲಂಬಿತವಾಗಿದ್ದು, ಮಾರುಕಟ್ಟೆ ಅಸ್ಥಿರತೆಯಿಂದ ಆರ್ಥಿಕ ಸಂಕಷ್ಟ ಎದುರಿಸುತ್ತಿವೆ. ಜ್ಯೂಟ್ ಹಾಗೂ ಕೊಪ್ರಾ ಸೇರಿದಂತೆ ಕೆಲವು ವಾಣಿಜ್ಯ ಬೆಳೆಗಳಿಗೆ MSP ಇರುವುದಾದರೂ, ನೈಸರ್ಗಿಕ ರಬ್ಬರ್‌ಗೆ MSP ಇಲ್ಲ ಎಂದು ಅವರು ಉಲ್ಲೇಖಿಸಿದ್ದಾರೆ.

ಇದನ್ನೂ ಓದಿ: ರಬ್ಬರ್ ಬೆಳೆಗೆ ಬೆಂಬಲ ಬೆಲೆ ಘೋಷಿಸಿ: ಸರ್ಕಾರಕ್ಕೆ ಭಾಗೀರಥಿ ಮುರುಳ್ಯ ಒತ್ತಾಯ

2024 ಜುಲೈ 30 ರಂದು ಲೋಕಸಭೆಯಲ್ಲಿ ನೀಡಿದ ಉತ್ತರದಲ್ಲಿ ರಬ್ಬರ್‌ನ್ನು ಕೈಗಾರಿಕಾ ಬಳಕೆಗೆ ಮಾತ್ರ ಉಪಯೋಗವಾಗುವ ಕಚ್ಚಾ ವಸ್ತುವೆಂದು ಪರಿಗಣಿಸಿರುವುದರಿಂದ ಕೃಷಿ ಉತ್ಪನ್ನವಾಗಿ ಪರಿಗಣಿಸಲಾಗುವುದಿಲ್ಲ ಎಂದು ಸಚಿವರು ಹೇಳಿದ್ದರು. ಇದರಿಂದ ರೈತರು ಸಂಪೂರ್ಣವಾಗಿ ಮಾರುಕಟ್ಟೆ ಅವಲಂಬಿತರಾಗಿದ್ದಾರೆ ಎಂದು ತಿಳಿಸಿದ್ದರು.

ರಬ್ಬರ್ ಕಾಯ್ದೆ 1947ರ ಪ್ರಕಾರ ಭಾರತದ ರಬ್ಬರ್‌ ಬೋರ್ಡ್‌ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯದ ಆಡಳಿತಾತ್ಮಕ ನಿಯಂತ್ರಣದಲ್ಲಿರುವುದರಿಂದ, MSP ವಿಚಾರದಲ್ಲಿ ರಾಜ್ಯ ಸರ್ಕಾರಕ್ಕಿಂತ ಕೇಂದ್ರ ಸರ್ಕಾರವೇ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಅವರು ಹೇಳಿದ್ದರು.

ಇದೇ ವಿಚಾರವಾಗಿ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪೀಯುಷ್‌ ಗೋಯಲ್‌ ಅವರಿಗೆ ಕೂಡ ಪತ್ರ ಬರೆದಿರುವುದಾಗಿ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ. ಆದರೆ ರಬ್ಬರ್‌ಗೆ MSP ನಿಗದಿ ಮಾಡುವ ವಿಚಾರದಲ್ಲಿ ಕೇಂದ್ರ ಸರ್ಕಾರದ ಉತ್ತರ ನಕಾರಾತ್ಮಕವಾಗಿದೆ ಎಂದು ಹೇಳಿದ್ದಾರೆ.

ಪ್ರಸ್ತುತ 22 ಕಡ್ಡಾಯ ಕೃಷಿ ಬೆಳೆಗಳಿಗೆ ಕೃಷಿ ವೆಚ್ಚ ಮತ್ತು ಬೆಲೆ ಆಯೋಗದ (CACP) ಶಿಫಾರಸಿನ ಮೇರೆಗೆ MSP ನಿಗದಿ ಮಾಡಲಾಗುತ್ತದೆ. ನೈಸರ್ಗಿಕ ರಬ್ಬರ್ ಈ ಪಟ್ಟಿಯಲ್ಲಿ ಸೇರಿಲ್ಲ ಎಂದು ಪಿಯೂಷ್ ಗೋಯಲ್ ತಿಳಿಸಿದ್ದಾರೆ.

ಆದಾಗ್ಯೂ, ‘ಸಸ್ಟೇನಬಲ್ ಅಂಡ್ ಇನ್‌ಕ್ಲೂಸಿವ್ ಡೆವಲಪ್ಮೆಂಟ್ ಆಫ್ ನ್ಯಾಚುರಲ್ ರಬ್ಬರ್ ಸೆಕ್ಟರ್’ ಯೋಜನೆಯಡಿ ರಬ್ಬರ್ ಬೋರ್ಡ್ ಮೂಲಕ ಪುನರ್ ನೆಡುವಿಕೆ, ಮಳೆ ರಕ್ಷಣೆ, ಉತ್ತಮ ಕೃಷಿ ಪದ್ಧತಿಗಳ ಪ್ರಚಾರ, ರೋಗ ನಿರೋಧಕ ಹಾಗೂ ಹೆಚ್ಚು ಉತ್ಪಾದಕ ತಳಿಗಳ ಸಂಶೋಧನೆ ಮುಂತಾದ ಕಾರ್ಯಗಳಿಗೆ ಆರ್ಥಿಕ ಹಾಗೂ ತಾಂತ್ರಿಕ ಸಹಾಯ ನೀಡಲಾಗುತ್ತಿದೆ. 2024-25 ಮತ್ತು 2025-26ನೇ ಸಾಲಿಗೆ ಯೋಜನೆಯ ವೆಚ್ಚವನ್ನು 576.41 ಕೋಟಿಯಿಂದ 708.69 ಕೋಟಿ ರೂ.ಗೆ, ಅಂದರೆ ಶೇ.23 ಹೆಚ್ಚಿಸಲಾಗಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್‌ ಮಾಡಿ

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು