ಪುತ್ತೂರು: ಕೆದಂಬಾಡಿಯಲ್ಲಿರುವ ಪುತ್ತೂರು, ಸುಳ್ಯ ಮತ್ತು ಕಡಬ ತಾಲೂಕು ಪಂಚಾಯತ್ಗಳ ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರದಲ್ಲಿ ಸಿದ್ಧಪಡಿಸಿದ ಪ್ಲಾಸ್ಟಿಕ್ ಮಿಶ್ರಿತ ಡಾಂಬಾರನ್ನು ಕೇಂದ್ರವನ್ನು ಸಂಪರ್ಕಿಸುವ ಸುಮಾರು 105 ಮೀಟರ್ ಉದ್ದದ ರಸ್ತೆಗೆ ಹಾಕಲಾಗಿದೆ. ಪುತ್ತೂರಿನಲ್ಲಿ ಮೊದಲ ಬಾರಿಗೆ ಪ್ಲಾಸ್ಟಿಕ್ ಡಾಂಬಾರು ಬಳಸಿರುವುದು ವಿಶೇಷವಾಗಿದೆ.
ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ನಾಲ್ಕು ಸಮಗ್ರ ಘನತ್ಯಾಜ್ಯ ನಿರ್ವಹಣಾ ಕೇಂದ್ರಗಳಲ್ಲಿ ಕೆದಂಬಾಡಿಯ ಕೇಂದ್ರವೂ ಒಂದಾಗಿದೆ. ಜಿಲ್ಲೆಯಲ್ಲಿ ಇದಕ್ಕೂ ಮುನ್ನ ಬೆಳ್ತಂಗಡಿ ತಾಲೂಕಿನ ಕೆಲ ರಸ್ತೆಗಳಿಗೆ ಪ್ಲಾಸ್ಟಿಕ್ ಡಾಂಬಾರು ಹಾಕಲಾಗಿದ್ದು, ಉತ್ತಮ ಫಲಿತಾಂಶ ದೊರೆತಿದೆ. ಅದರ ಅನುಭವದ ಆಧಾರದಲ್ಲಿ ಇದೀಗ ಪುತ್ತೂರಿನಲ್ಲೂ ಈ ವಿಧಾನವನ್ನು ಅನುಸರಿಸಲಾಗಿದೆ. ಮುಂದಿನ ದಿನಗಳಲ್ಲಿ ಇತರೆ ರಸ್ತೆಗಳಿಗೆ ಕೂಡ ಪ್ಲಾಸ್ಟಿಕ್ ಡಾಂಬಾರು ಬಳಸುವ ಯೋಜನೆ ಇದೆ.


ಮೂರು ತಾಲೂಕುಗಳ ಒಟ್ಟು 48 ಪಂಚಾಯತ್ಗಳಿಂದ ಸಂಗ್ರಹವಾಗುವ ಒಣ ಕಸವನ್ನು ಈ ಘಟಕದಲ್ಲಿ ವಿಂಗಡಿಸಲಾಗುತ್ತದೆ. ಅದರಲ್ಲಿ ಏಕಬಳಕೆಯ ಅಥವಾ ಮರುಬಳಕೆ ಮಾಡಲು ಸಾಧ್ಯವಾಗದ ಪ್ಲಾಸ್ಟಿಕ್ ವಸ್ತುಗಳನ್ನು ಪುಡಿ ಮಾಡಿ ಡಾಂಬಾರು ತಯಾರಿಕೆಗೆ ಬಳಸಲಾಗುತ್ತದೆ. ಒಂದು ಟನ್ ಡಾಂಬಾರಿಗೆ ಸುಮಾರು 7ರಿಂದ 10 ಶೇಕಡಾ ಪ್ಲಾಸ್ಟಿಕ್ ಮಿಶ್ರಣ ಮಾಡಲಾಗುತ್ತದೆ.
ಇದನ್ನೂ ಓದಿ: ಎಲ್ಪಿಜಿ ಕೊರತೆ ತೀವ್ರ: ಕರಾವಳಿಯಲ್ಲಿ ಹೋಟೆಲ್ಗಳು ಬಂದ್, ಮದುವೆ ಮಂದಿರಗಳಿಗೆ ಸಂಕಷ್ಟ
ಡಾಂಬಾರು ತಯಾರಿಕಾ ಪ್ರಕ್ರಿಯೆಯಲ್ಲಿ ಜಲ್ಲಿ ಮತ್ತು ಪ್ಲಾಸ್ಟಿಕ್ ಅನ್ನು ಸುಮಾರು 160 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿ ಮಿಶ್ರಣ ಮಾಡಲಾಗುತ್ತದೆ. ಮಿಕ್ಸರ್ನಿಂದ ಹೊರಬರುವ ಡಾಂಬಾರು ಸುಮಾರು 140 ಡಿಗ್ರಿ ಸೆಲ್ಸಿಯಸ್ ತಾಪಮಾನದಲ್ಲಿರುತ್ತದೆ. ರಸ್ತೆ ಮೇಲೆ ಹಾಸುವಾಗ ಕನಿಷ್ಠ 110 ಡಿಗ್ರಿ ಸೆಲ್ಸಿಯಸ್ ತಾಪಮಾನ ಇರಬೇಕು ಎಂಬ ನಿಯಮವಿದೆ. ಈ ತಾಪಮಾನವನ್ನು ಡಾಂಬಾರು ಸಿದ್ಧಪಡಿಸುವ ಘಟಕದಲ್ಲೇ ಪರಿಶೀಲಿಸಲಾಗುತ್ತದೆ.
ಪಂಚಾಯತ್ ರಸ್ತೆಗಳಿಗೆ ಹಾಕಲಾಗಿರುವ ಪ್ಲಾಸ್ಟಿಕ್ ಡಾಂಬಾರು ಕನಿಷ್ಠ 10 ವರ್ಷಗಳ ಬಾಳಿಕೆ ಹೊಂದಿದ್ದು, ಮೊದಲ ಐದು ವರ್ಷಗಳಲ್ಲಿ ಯಾವುದೇ ಸಮಸ್ಯೆ ಎದುರಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಪುತ್ತೂರಿನಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ಲಾಸ್ಟಿಕ್ ಡಾಂಬಾರು ರಸ್ತೆ ನಿರ್ಮಾಣದಲ್ಲಿ ಬಳಸಲಾಗಿದ್ದು, ಮುಂದಿನ ದಿನಗಳಲ್ಲಿ ಇನ್ನಷ್ಟು ರಸ್ತೆಗಳಿಗೆ ಇದನ್ನು ಬಳಸುವ ಯೋಜನೆ ಇದೆ ಎಂದು ನಗರಸಭೆಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಭಂಡಾರಿ ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

