ಆದಿತ್ಯ ಧರ್ ನಿರ್ದೇಶನದ ‘ಧುರಂಧರ್: ದ ರಿವೆಂಜ್’ (ಧುರಂಧರ್ 2) ಚಿತ್ರ ಜಾಗತಿಕ ಬಾಕ್ಸ್‌ಆಫೀಸ್‌ನಲ್ಲಿ ಭರ್ಜರಿ ಸಾಧನೆ ಮಾಡಿದ್ದು, ₹1750 ಕೋಟಿ ಗಳಿಕೆ ಮಾಡಿ ಭಾರತೀಯ ಚಿತ್ರರಂಗದ ಇತಿಹಾಸದಲ್ಲೇ ಮೂರನೇ ಅತಿ ಹೆಚ್ಚು ಗಳಿಕೆ ಮಾಡಿದ ಚಿತ್ರವಾಗಿ ಹೊರಹೊಮ್ಮಿದೆ.
ಈ ಸಾಧನೆಯೊಂದಿಗೆ ರಣವೀರ್ ಸಿಂಗ್ ಅಭಿನಯದ ಈ ಸಿನಿಮಾ, ಅಲ್ಲು ಅರ್ಜುನ್ ನಟನೆಯ ‘ಪುಷ್ಪ 2: ದ ರೂಲ್’ ಚಿತ್ರದ ದಾಖಲೆಯನ್ನು ಮುರಿದಿದೆ. ಪುಷ್ಪ 2 ₹1742 ಕೋಟಿ ಗಳಿಕೆ ಮಾಡಿದ್ದರೆ, ಈಗ ಧುರಂಧರ್ 2 ಅದನ್ನು ಮೀರಿಸಿ ಟಾಪ್-3 ಪಟ್ಟಿಯಲ್ಲಿ ತನ್ನ ಸ್ಥಾನವನ್ನು ಪಕ್ಕಾ ಮಾಡಿಕೊಂಡಿದೆ. ಈ ಪಟ್ಟಿಯಲ್ಲಿ ಇನ್ನೂ ದಂಗಲ್ (₹2070 ಕೋಟಿ) ಮೊದಲ ಸ್ಥಾನದಲ್ಲಿದ್ದು, ಬಾಹುಬಲಿ 2 (₹1788 ಕೋಟಿ) ಎರಡನೇ ಸ್ಥಾನದಲ್ಲಿದೆ.

ಭಾರತ ಮತ್ತು ವಿದೇಶದಲ್ಲಿ ಭರ್ಜರಿ ಕಲೆಕ್ಷನ್
ಧುರಂಧರ್ 2 ಭಾರತದಲ್ಲಿ ₹1111 ಕೋಟಿ ನೆಟ್ ಕಲೆಕ್ಷನ್ ಗಳಿಸಿದ್ದು, ದೇಶೀಯ ಮಾರುಕಟ್ಟೆಯಲ್ಲಿ ಎರಡನೇ ಅತಿ ದೊಡ್ಡ ಗಳಿಕೆಯ ಚಿತ್ರವಾಗಿದೆ. ವಿದೇಶಗಳಲ್ಲಿ ಈ ಸಿನಿಮಾ ಸುಮಾರು $46 ಮಿಲಿಯನ್ (ಅಂದಾಜು ₹380 ಕೋಟಿ) ಗಳಿಕೆ ಮಾಡಿದೆ. ಇತ್ತ ಪುಷ್ಪ 2 ಚಿತ್ರ ಭಾರತದಲ್ಲೇ ₹1234 ಕೋಟಿ ಗಳಿಸಿ ದಾಖಲೆ ಬರೆದಿದ್ದರೂ, ವಿದೇಶಗಳಲ್ಲಿ $32 ಮಿಲಿಯನ್ ಮಾತ್ರ ಗಳಿಸಿತ್ತು.
ಇದನ್ನೂ ಓದಿ: ರಾಮ್ ಗೋಪಾಲ್ ವರ್ಮಾ ‘ಯು-ಟರ್ನ್’: ‘ಧುರಂಧರ್ 2’ ವಿರುದ್ಧ ಆರ್‌ಜಿವಿ ಅಸಮಾಧಾನ, ದಾವೂದ್ ಇಬ್ರಾಹಿಂ ಪಾತ್ರಕ್ಕೆ ಟೀಕೆ!

ಬಾಹುಬಲಿ 2 ದಾಖಲೆಯ ಹತ್ತಿರದಲ್ಲಿ ಧುರಂಧರ್ 2
ಈಗ ಧುರಂಧರ್ 2 ಕಣ್ಣಿಟ್ಟಿರುವುದು ಬಾಹುಬಲಿ 2 ದಾಖಲೆಯ ಮೇಲೆ. ₹1788 ಕೋಟಿ ಗಳಿಕೆಯೊಂದಿಗೆ ಎರಡನೇ ಸ್ಥಾನದಲ್ಲಿರುವ ಆ ಚಿತ್ರಕ್ಕಿಂತ ಕೇವಲ ₹30-35 ಕೋಟಿ ಹಿನ್ನಡೆಯಲ್ಲಿದೆ. ವಾರಾಂತ್ಯದಲ್ಲಿ ಉತ್ತಮ ಕಲೆಕ್ಷನ್ ಕಂಡಿರುವ ಸಿನಿಮಾ ಇನ್ನೂ ಕೆಲವು ದಿನಗಳಲ್ಲಿ ಈ ದಾಖಲೆಯನ್ನು ಮುರಿಯುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಂದಾಜಿಸುತ್ತಿದ್ದಾರೆ.
ದಂಗಲ್ ದಾಖಲೆ ಬ್ರೇಕ್ ಕಷ್ಟ
ಆದರೆ ₹2070 ಕೋಟಿ ಗಳಿಕೆಯ ದಂಗಲ್ ದಾಖಲೆಯನ್ನು ಮೀರಿಸುವುದು ಕಷ್ಟವೆನ್ನಲಾಗುತ್ತಿದೆ. ಗಲ್ಪ್ ದೇಶಗಳಲ್ಲಿ ಸಿನಿಮಾ ಬಿಡುಗಡೆಯಾಗದಿರುವುದು ಧುರಂಧರ್ 2ಗೆ ದೊಡ್ಡ ಹೊಡೆತವಾಗಿದೆ. ಇದರಿಂದ ಸುಮಾರು ₹110-140 ಕೋಟಿ ಗಳಿಕೆ ಕಳೆದುಕೊಂಡಿದೆ ಎಂದು ಅಂದಾಜಿಸಲಾಗಿದೆ.
ಇನ್ನು ಮುಂದಿನ ಕೆಲವು ವಾರಗಳಲ್ಲಿ ದೊಡ್ಡ ಸಿನಿಮಾಗಳ ಬಿಡುಗಡೆ ಇಲ್ಲದಿರುವುದರಿಂದ ಧುರಂಧರ್ 2ಗೆ ಇನ್ನಷ್ಟು ದಿನ ಥಿಯೇಟರ್‌ಗಳಲ್ಲಿ ಓಡುವ ಅವಕಾಶ ಸಿಗಲಿದೆ. ಆದರೂ ₹1800 ಕೋಟಿ ದಾಟುವುದು ಸವಾಲಾಗಿದ್ದರೂ, ಬಾಹುಬಲಿ 2 ದಾಖಲೆಯನ್ನು ಮುರಿಯುವ ನಿರೀಕ್ಷೆ ಮಾತ್ರ ಜೋರಾಗಿದೆ.
ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

