ಮುಂಬೈ: ಟಿ20 ವಿಶ್ವಕಪ್ 2026ರ ಎರಡನೇ ಸೆಮಿಫೈನಲ್ ಪಂದ್ಯ ಇಂದು ಮುಂಬೈನ ವಾಂಖೆಡೆ ಕ್ರೀಡಾಂಗಣದಲ್ಲಿ ನಡೆಯಲಿದ್ದು, ಭಾರತ ಮತ್ತು ಇಂಗ್ಲೆಂಡ್ ತಂಡಗಳು ಫೈನಲ್ ಪ್ರವೇಶಕ್ಕಾಗಿ ಭರ್ಜರಿ ಪೈಪೋಟಿ ನಡೆಸಲಿವೆ. ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ತಂಡದ ಆಲ್ರೌಂಡರ್ ಸ್ಯಾಮ್ ಕರನ್ ನೀಡಿರುವ ಹೇಳಿಕೆ ಈಗ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರನ್, ವಾಂಖೆಡೆ ಸ್ಟೇಡಿಯಂನಲ್ಲಿ ಭಾರತೀಯ ಅಭಿಮಾನಿಗಳನ್ನು “ಸೈಲೆಂಟ್” ಮಾಡುವುದು ನಮ್ಮ ಗುರಿ ಎಂದು ಹೇಳಿದ್ದಾರೆ. ಪ್ರೇಕ್ಷಕರು ಮೌನವಾಗಿದ್ದರೆ ಇಂಗ್ಲೆಂಡ್ ತಂಡ ಉತ್ತಮವಾಗಿ ಆಡುತ್ತಿದೆ ಎಂಬುದಕ್ಕೆ ಅದು ಸಂಕೇತ ಎಂದು ಅವರು ಹೇಳಿದ್ದಾರೆ.

ಕರನ್ ಅವರ ಈ ಹೇಳಿಕೆ 2023ರ ಏಕದಿನ ವಿಶ್ವಕಪ್ ಫೈನಲ್ ಪಂದ್ಯಕ್ಕೂ ಮುನ್ನ ಆಸ್ಟ್ರೇಲಿಯಾ ನಾಯಕ ಪ್ಯಾಟ್ ಕಮಿನ್ಸ್ ನೀಡಿದ್ದ ಹೇಳಿಕೆಯನ್ನು ನೆನಪಿಸುತ್ತದೆ. ಆಗ ಕಮಿನ್ಸ್ ಕೂಡ ಭಾರತೀಯ ಅಭಿಮಾನಿಗಳನ್ನು ಮೌನಗೊಳಿಸುವುದಾಗಿ ಹೇಳಿ, ಬಳಿಕ ಆಸ್ಟ್ರೇಲಿಯಾ ವಿಶ್ವಕಪ್ ಜಯಿಸಿತ್ತು.
ಇದನ್ನೂ ಓದಿ: Finn Allen: ಸ್ಫೋಟಕ ಶತಕದೊಂದಿಗೆ ಹಲವು ದಾಖಲೆಗಳನ್ನು ಬರೆದ ಫಿನ್ ಅಲೆನ್
ಇದೇ ವೇಳೆ ಭಾರತೀಯ ಅಭಿಮಾನಿಗಳ ಮುಂದೆ ಆಡುವುದು ದೊಡ್ಡ ಸವಾಲು ಎಂದೂ ಕರನ್ ಒಪ್ಪಿಕೊಂಡಿದ್ದಾರೆ. ಆದರೆ ಐಪಿಎಲ್‌ನಲ್ಲಿ ಆಡಿದ ಅನುಭವ ಇಂಗ್ಲೆಂಡ್ ಆಟಗಾರರಿಗೆ ಇರುವುದರಿಂದ ಆ ಒತ್ತಡವನ್ನು ನಿಭಾಯಿಸಲು ಸಾಧ್ಯವಾಗಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
2022ರ ಟಿ20 ವಿಶ್ವಕಪ್ ಸೆಮಿಫೈನಲ್‌ನಲ್ಲಿ ಭಾರತವನ್ನು 10 ವಿಕೆಟ್‌ಗಳಿಂದ ಸೋಲಿಸಿದ್ದ ಅನುಭವವೂ ಇಂಗ್ಲೆಂಡ್ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದೆ. ಈ ಬಾರಿ ಕೂಡ ಅದೇ ರೀತಿಯ ಪ್ರದರ್ಶನ ನೀಡಲು ತಂಡ ಸಜ್ಜಾಗಿದೆ ಎಂದು ಕರನ್ ತಿಳಿಸಿದ್ದಾರೆ. ಒಟ್ಟಾರೆ, ಕರನ್ ನೀಡಿರುವ “ಸೈಲೆಂಟ್” ಹೇಳಿಕೆ ಪಂದ್ಯಕ್ಕೂ ಮುನ್ನವೇ ಸೆಮಿಫೈನಲ್ ಕಾಳಗಕ್ಕೆ ಮತ್ತಷ್ಟು ರಂಗು ತುಂಬಿದೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

