ಬೆಂಗಳೂರು: ಶಾಮನೂರು ಶಿವಶಂಕರಪ್ಪ ಅವರ ನಿಧನದಿಂದ ತೆರವಾಗಿದ್ದ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಈ ಬಗ್ಗೆ ಸಭಾದ ರಾಜ್ಯಾಧ್ಯಕ್ಷ ಶಂಕರ ಮಹಾದೇವ ಬಿದರಿ ಮಾಹಿತಿ ನೀಡಿದ್ದಾರೆ. ಬೆಂಗಳೂರಿನಲ್ಲಿ ನಡೆದ ಸಭಾದ ಕಾರ್ಯಕಾರಿಣಿ ಸಭೆಯಲ್ಲಿ ಈಶ್ವರ್ ಖಂಡ್ರೆ ಅವರನ್ನು ಅವಿರೋಧವಾಗಿ ಆಯ್ಕೆ ಮಾಡಲು ನಿರ್ಣಯ ಕೈಗೊಳ್ಳಲಾಯಿತು.
ಕಳೆದ 13 ವರ್ಷಗಳಿಂದ ಮಹಾಸಭಾದ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿಯಾಗಿರುವ ಈಶ್ವರ ಖಂಡ್ರೆ ಅವರು ಕಳೆದ ಒಂದು ವರ್ಷದಿಂದ ಹಿರಿಯ ಉಪಾಧ್ಯಕ್ಷರ ಪ್ರಭಾರ ಹೊಣೆಯನ್ನೂ ನಿಭಾಯಿಸಿದ್ದರು.

ಇದನ್ನೂ ಓದಿ: ಗದಗ: ಲಕ್ಕುಂಡಿ ಮನೆಯಲ್ಲಿ ಪತ್ತೆಯಾಯ್ತು 10ನೇ ಶತಮಾನದ ದೇಗುಲ
ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆ ಮಾಡಿದ ಕಾರ್ಯಕಾರಿ ಸಮಿತಿಗೆ ಕೃತಜ್ಞತೆ ತಿಳಿಸಿದ ಖಂಡ್ರೆ, ವೀರಶೈವ ಮತ್ತು ಲಿಂಗಾಯತ ಬೇರೆ ಬೇರೆಯಲ್ಲ. ಹೀಗಾಗಿ ಸಮಾಜದ ಎಲ್ಲ ಒಳ ಪಂಗಡಗಳನ್ನು ಒಗ್ಗೂಡಿಸುವುದು ನಿಟ್ಟಿನಲ್ಲಿ ಶ್ರಮಿಸುತ್ತೇನೆ ಎಂದರು.
ವೀರಶೈವ ಲಿಂಗಾಯತ ಸಮಾಜ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಈ ನಾಡಿನ ಅಭಿವೃದ್ಧಿಗೆ ನೀಡಿರುವ ಕೊಡುಗೆ ಅನುಪಮವಾದದ್ದು. ನಮ್ಮ ಸಮಾಜದಲ್ಲೂ ಶೇ.40 ರಿಂದ 50ರಷ್ಟು ಬಡವರಿದ್ದು, ಶೇ.30ಕ್ಕಿಂತ ಹೆಚ್ಚು ಜನರು ತೀವ್ರ ಹಿಂದುಳಿದಿದ್ದಾರೆ. ಸಾಮಾಜಿಕ ನ್ಯಾಯ ಎಲ್ಲರಿಗೂ ದೊರಕಬೇಕು. ಹೀಗಾಗಿ ಎಲ್ಲರಿಗೂ ಸಮಾನ ನ್ಯಾಯ ದೊರಕಿಸಲು ಸಭಾ ವತಿಯಿಂದ ನೂತನ ಅಧ್ಯಕ್ಷನಾಗಿ ಶ್ರಮಿಸುವುದಾಗಿ ಭರವಸೆ ನೀಡಿದರು.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

