Breaking News

ಪುತ್ತೂರು: ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್ ವ್ಯವಸ್ಥೆ ಮಂಜೂರಾಗುವ ಸಾಧ್ಯತೆ

ಪುತ್ತೂರು: ಸಮಗ್ರ ಒಳಚರಂಡಿ ನಿರ್ಮಾಣ ಯೋಜನೆ ಬೇಡಿಕೆಯಿರುವ ಪುತ್ತೂರು ನಗರಕ್ಕೆ ಇದೀಗ ರಾಜ್ಯದ ಪ್ರಥಮ ಪಿಪಿಪಿ ಡ್ರೈನೇಜ್‌ ಸ್ಕೀಂ ಮಂಜೂರುಗೊಳ್ಳುವ ಹಂತದಲ್ಲಿದೆ.

ಸರಕಾರಿ ಮತ್ತು ಖಾಸಗಿ ಸಹಭಾಗಿತ್ವದಲ್ಲಿ (ಪಬ್ಲಿಕ್‌ ಪ್ರೈವೇಟ್‌ ಪಾರ್ಟಿಸಿಪೇಶನ್‌-ಪಿಪಿಪಿ) ಸಮಗ್ರ ಒಳಚರಂಡಿ ರಚಿಸುವ 100 ಕೋಟಿ ರೂ.ಗಳ ಮೆಗಾ ಯೊಜನೆ ಇದಾಗಿದ್ದು, ಇನ್ನೊಂದು ವಾರದಲ್ಲಿ ಸರಕಾರದಿಂದ ಮಂಜೂರುಗೊಳ್ಳಲಿದೆ.

Advertisement

ಇದನ್ನೂ ಓದಿ: ಉಡುಪಿ: ದೋಣಿ ದುರಂತದಲ್ಲಿ ಮೃತ ಪಟ್ಟವರ ಗುರುತು ಪತ್ತೆ

ಮಂಗಳೂರು ಹೊರತುಪಡಿಸಿ ಜಿಲ್ಲೆಯ 2ನೇ ಅತಿದೊಡ್ಡ ನಗರವಾಗಿರುವ ಪುತ್ತೂರಿನಲ್ಲಿ ಮಳೆ ನೀರು ಹರಿಯುವ ಚರಂಡಿ ವ್ಯವಸ್ಥೆ ಇದ್ದರೂ, ಮನೆ ಮನೆಗಳ, ವಾಣಿಜ್ಯ ಸಮುಚ್ಚಯಗಳ ಕೊಳಚೆ ನೀರು ಹರಿದು ವೈಜ್ಞಾನಿಕವಾಗಿ ಸಂಸ್ಕರಣೆಗೊಳ್ಳುವ ಒಳಚರಂಡಿಯಿಲ್ಲ. ಹೀಗಾಗಿ ಮಳೆ ನೀರು ಹರಿಯುವ ಚರಂಡಿ, ರಾಜಕಾಲುವೆಗಳಲ್ಲೇ ಕೊಳಚೆ ನೀರು ಹರಿಯುವ ಸನ್ನಿವೇಶವಿದೆ.

ಸ್ವಿಟ್ಜರ್ಲೆಂಡ್ ನ ಖುವಾಕ್‌ ಎಂಬ ಅಂತಾರಾಷ್ಟ್ರೀಯ ಕಂಪನಿ ಭಾರತದಲ್ಲಿ ಒಳಚರಂಡಿ ಯೋಜನೆಗಳನ್ನು ಕಾರ್ಯಗತಗೊಳಿಸಲು ಗುತ್ತಿಗೆ ಪಡೆಯುತ್ತಿದೆ. ಆರಂಭದಲ್ಲಿ ಒಂದು ನಗರದಲ್ಲಿ ಪೈಲಟ್‌ ಯೋಜನೆ ಜಾರಿಗೊಳಿಸಲು ಮುಂದಾಗಿದ್ದು, ಕರ್ನಾಟಕದಲ್ಲಿ ಪುತ್ತೂರು ನಗರವನ್ನು ಇದಕ್ಕಾಗಿ ಆರಿಸಲು ನಿರ್ಧರಿಸಲಾಗಿದೆ ಎನ್ನುತ್ತಾರೆ ಶಾಸಕ ಅಶೋಕ್‌ ರೈ.

100 ಕೋಟಿ ರೂ.ಗಳ ಮೆಗಾ ಯೋಜನೆ ಇದಾಗಿದ್ದು, ಇದರಲ್ಲಿ 15 ಕೋಟಿ ರೂ.ಗಳನ್ನು ರಾಜ್ಯ ಸರಕಾರ ಭರಿಸಲಿದೆ. 85 ಕೋಟಿಗಳನ್ನು ಖುವಾಕ್‌ ಕಂಪನಿ ಭರಿಸಿ ಯೋಜನೆ ಅನುಷ್ಠಾನಗೊಳಿಸಲಿದೆ. ಕಾಮಗಾರಿ ಸಂಪೂರ್ಣಗೊಂಡ ಬಳಿಕ 5 ವರ್ಷಗಳ ಕಾಲ ಇದೇ ಕಂಪನಿ ನಿರ್ವಹಣೆ ಮಾಡಲಿದೆ.

ಬಹು ನಿರೀಕ್ಷಿತ ಒಳಚರಂಡಿ ಯೋಜನೆ ಅನುಷ್ಠಾನದಲ್ಲಿ ಪುತ್ತೂರು ನಗರವನ್ನು ಮುಖ್ಯ ರಸ್ತೆ ವಲಯ, ದರ್ಬೆ ವಲಯ ಮತ್ತು ಬೊಳುವಾರು ವಲಯ ಎಂದು ವರ್ಗೀಕರಿಸಲಾಗುತ್ತದೆ. ಮುಖ್ಯ ರಸ್ತೆಗಳಲ್ಲಿ ಒಳಚರಂಡಿ ನಿರ್ಮಾಣವಾಗಲಿದೆ. ಹೊಟೇಲ್‌, ಮಾಲ್‌ ಮತ್ತಿತರ ವಾಣಿಜ್ಯ ಸಂಸ್ಥೆಗಳು, ಫ್ಲ್ಯಾಟ್‌, ವಸತಿಗಳವರು ತಮ್ಮ ಖರ್ಚಿನಲ್ಲಿ ಮುಖ್ಯ ಕೊಳವೆಗೆ ಸಂಪರ್ಕ ಕಲ್ಪಿಸಿಕೊಂಡು ಕೊಳಚೆ ನೀರು ಬಿಡಬಹುದು.

ಈ ಯೋಜನೆಯಲ್ಲಿ ಚರಂಡಿ ಗರಿಷ್ಠ ಆಳಕ್ಕೆ ಅಗೆಯಬೇಕಾಗಿಲ್ಲ. 1 ಮೀಟರ್‌ ಆಳದ ಚರಂಡಿ ನಿರ್ಮಿಸಿ ಕೊಳವೆ ಅಳವಡಿಸಲಾಗುತ್ತದೆ. ಗುರುತ್ವಾಕರ್ಷಣ ಶಕ್ತಿಯ ಮೂಲಕ ಇಲ್ಲಿ ಕೊಳಚೆ ನೀರು ಹರಿಯುವುದಲ್ಲ. ಬದಲಾಗಿ ಸಕ್ಕಿಂಗ್‌ ಯಂತ್ರವಿರುವ ಚೇಂಬರ್‌ಗಳನ್ನು ಅಲ್ಲಲ್ಲಿ ಅಳವಡಿಸಲಾಗುತ್ತದೆ. ಅದು ಕೊಳಚೆ ನೀರನ್ನು ನಿರಂತರ ಹೀರಿಕೊಳ್ಳುತ್ತದೆ. ಬಳಿಕ ಅದನ್ನು ಎಸ್‌ಟಿಪಿ ಪ್ಲ್ಯಾಂಟ್‌ಗೆ ತುಂಬಿಸಲಾಗುತ್ತದೆ.

ನಗರದ ಬೆದ್ರಾಳದಲ್ಲಿ 5 ಎಕರೆ ಜಾಗದಲ್ಲಿ ಸೀವೇಜ್‌ ಟ್ರೀಟ್‌ಮೆಂಟ್‌ ಪ್ಲ್ಯಾಂಟ್‌ (ಎಸ್‌ಟಿಪಿ) ನಿರ್ಮಿಸಲಾಗುತ್ತದೆ. ಅಲ್ಲಿ ಕೊಳಚೆ ನೀರು ವೈಜ್ಞಾನಿಕವಾಗಿ ಸಂಸ್ಕರಣೆಗೊಳ್ಳಲಿದೆ. ಇದಕ್ಕಾಗಿ ನಗರಸಭೆಗೆ ಪ್ರತ್ಯೇಕ 20 ಕೋಟಿ ರೂ. ಮಂಜೂರಾಗಿದೆ. ಇದು 8 ಎಂಎಲ್‌ಡಿ ಸಾಮರ್ಥ್ಯ ಹೊಂದಿರಲಿದೆ. ಪುತ್ತೂರಿನಲ್ಲಿ ಪ್ರತೀ ದಿನ ಗರಿಷ್ಠ 4 ಎಂಎಲ್‌ಡಿ ಕೊಳಚೆ ನೀರು ಸಂಗ್ರಹಗೊಳ್ಳಲಿದೆ. ಭವಿಷ್ಯದ ಯೋಚನೆ ಮುಂದಿಟ್ಟುಕೊಂಡು 8 ಎಂಎಲ್‌ಡಿ ಪ್ಲ್ಯಾಂಟ್‌ ನಿರ್ಮಿಸಲಾಗುವುದು ಎನ್ನುತ್ತಾರೆ ಶಾಸಕ ಅಶೋಕ್‌ ರೈ.

ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್:‌ 7353833811, ಇ-ಮೇಲ್-‌ g1newsdpt@gmail.com

News Source : G1 News

Leave a Reply

Your email address will not be published. Required fields are marked *

ಮಲ್ಬರಿ ಜ್ಯೂಸ್ನ ಆರೋಗ್ಯಕರ ಪ್ರಯೋಜನಗಳು ಬಾಲ್ಕನಿ ಉದ್ಯಾನವನ ಚಂದಗಾಣಿಸುವ ಚಳಿಗಾಲದ ಹೂವುಗಳು