ಉತ್ತರ ಕನ್ನಡ: ಪಶ್ಚಿಮ ಏಷ್ಯಾದಲ್ಲಿ ಇರಾನ್ ಮತ್ತು ಇಸ್ರೇಲ್ ನಡುವಿನ ಉದ್ವಿಗ್ನತೆ ಜಾಗತಿಕ ಇಂಧನ ಮಾರುಕಟ್ಟೆಯನ್ನು ನಡುಗಿಸಿದ್ದು, ಅದರ ಪ್ರತಿಫಲ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿಯೂ ಸ್ಪಷ್ಟವಾಗಿ ಕಾಣುತ್ತಿದೆ. ಕಳೆದ ಎರಡು ದಿನಗಳಿಂದ ಪಟ್ಟಣದ ಪೆಟ್ರೋಲ್ ಬಂಕ್ಗಳ ಮುಂದೆ ವಾಹನಗಳು ಸಾಲುಗಟ್ಟಿ ನಿಲ್ಲುತ್ತಿರುವುದು ಕಂಡುಬಂದಿದೆ.
ಇರಾನ್ ಸರ್ಕಾರವು ಪರ್ಶಿಯನ್ ಕೊಲ್ಲಿಯನ್ನು ಓಮಾನ್ ಕೊಲ್ಲಿಯೊಂದಿಗೆ ಸಂಪರ್ಕಿಸುವ ಮಹತ್ವದ ತೈಲ ಸಾಗಣೆ ದಾರಿ ಹೊರ್ಮಜ್ ಜಲಸಂಧಿ ಸಮುದ್ರ ಮಾರ್ಗಕ್ಕೆ ನಿರ್ಬಂಧ ಹೇರಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಜಾಗತಿಕ ಕಚ್ಚಾ ತೈಲ ರಫ್ತಿನ ಪ್ರಮುಖ ಭಾಗ ಇದಾಗಿರುವುದರಿಂದ ತೈಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗುವ ಆತಂಕ ಕಾಡುತ್ತಿದೆ.

ಭಟ್ಕಳದ ಬಹುತೇಕ ಎಲ್ಲಾ ಪೆಟ್ರೋಲ್ ಬಂಕ್‌ಗಳಲ್ಲಿ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಅಲ್ಲದೆ, ಜನರು ಬಾಟಲಿಗಳು ಹಾಗೂ ದೊಡ್ಡ ಕ್ಯಾನ್‌ಗಳಲ್ಲಿ ಪೆಟ್ರೋಲ್ ತುಂಬಿಸಿಕೊಳ್ಳುತ್ತಿರುವ ದೃಶ್ಯಗಳು ಕಂಡುಬಂದವು. ಕೆಲ ವ್ಯಾಪಾರಿಗಳು ಭವಿಷ್ಯದ ವ್ಯವಹಾರವನ್ನು ಗಮನದಲ್ಲಿಟ್ಟುಕೊಂಡು ಡೀಸೆಲ್ ಸಂಗ್ರಹಿಸುತ್ತಿದ್ದಾರೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲದ ಬೆಲೆ ಸತತ ಏರಿಕೆಯಾಗುತ್ತಿದ್ದು, ಪ್ರತಿ ಬ್ಯಾರೆಲ್ ದರ ೮೫ ಡಾಲರ್ ದಾಟಿರುವುದು ಆತಂಕವನ್ನು ಮತ್ತಷ್ಟು ಹೆಚ್ಚಿಸಿದೆ. ಭಾರತವು ತನ್ನ ತೈಲ ಅಗತ್ಯಕ್ಕಾಗಿ ಗಲ್ಫ್ ರಾಷ್ಟ್ರಗಳನ್ನು ಹೆಚ್ಚಿನ ಮಟ್ಟದಲ್ಲಿ ಅವಲಂಬಿಸಿರುವುದರಿಂದ, ಪೆಟ್ರೋಲ್ ಹಾಗೂ ಡೀಸೆಲ್ ಬೆಲೆಯಲ್ಲಿ ಹೆಚ್ಚಳವಾಗುವ ಸಾಧ್ಯತೆ ಇದೆ.
ಇದನ್ನೂ ಓದಿ: ಪುತ್ತೂರು: ದರ್ಬೆಯಲ್ಲಿ ನಡುರಸ್ತೆಯಲ್ಲೇ ಪಿಸ್ತೂಲ್ ತೋರಿಸಿ ದಮ್ಕಿ
ಜನರಲ್ಲಿ ಶಾಂತಿ ಕಾಪಾಡುವಂತೆ ಆರ್ಥಿಕ ತಜ್ಞರು ಮನವಿ ಮಾಡಿದ್ದಾರೆ. ಅಗತ್ಯಕ್ಕಿಂತ ಹೆಚ್ಚು ಇಂಧನ ಖರೀದಿ ಮಾಡಿ ಸಂಗ್ರಹಿಸುವುದು ಕೃತಕ ಕೊರತೆಯನ್ನು ಉಂಟುಮಾಡಬಹುದು. ಸರ್ಕಾರದ ಬಳಿ ತೈಲ ದಾಸ್ತಾನು ಸಮರ್ಪಕವಾಗಿದ್ದು, ಗಾಬರಿಗೊಳ್ಳುವ ಅಗತ್ಯವಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

