ಮಂಗಳೂರು : ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಹಾಗೂ ಅರಣ್ಯ ಇಲಾಖೆಯ ಸಹಯೋಗದಲ್ಲಿ ಜನವರಿ 9ರಿಂದ 11ರವರೆಗೆ ಹಕ್ಕಿ ಹಬ್ಬ (ಪಕ್ಷಿ ಉತ್ಸವ) 12ನೇ ಆವೃತ್ತಿ ಮಂಗಳೂರಿನಲ್ಲಿ ನಡೆಯಲಿದೆ.
ಬುಧವಾರದಂದು, ಮಂಗಳೂರು ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಡಳಿ ಅಧ್ಯಕ್ಷೆ ಶಲೆಟ್ ಪಿಂಟೋ, ಅಳಿವಿನ ಅಂಚಿನಲ್ಲಿರುವ ಅನೇಕ ಪಕ್ಷಿ ಜಾತಿಗಳನ್ನು ಒಳಗೊಂಡಂತೆ ರಾಜ್ಯದ ಶ್ರೀಮಂತ ಪಕ್ಷಿ ವೈವಿಧ್ಯತೆ ಕುರಿತು ಯುವಜನರಲ್ಲಿ ಜಾಗೃತಿ ಮೂಡಿಸುವುದು ಹಬ್ಬದ ಮುಖ್ಯ ಉದ್ದೇಶ ಎಂದು ಹೇಳಿದರು. ಹಕ್ಕಿಗಳು ಹೆಚ್ಚಾಗಿ ಕಾಣಸಿಗುವ ನಾಲ್ಕು ಪ್ರಮುಖ ವಲಯಗಳನ್ನು ಗುರುತಿಸಿ ಒಟ್ಟು 12 ಕಡೆಗಳಲ್ಲಿ ಹಕ್ಕಿ ವೀಕ್ಷಣೆಗೆ ಸ್ಥಳ ನಿಗದಿಪಡಿಸಲಾಗಿದೆ. ಕಡಲ ತೀರದಲ್ಲಿ ಸಸಿಹಿತ್ತು ಮತ್ತು ಮುಕ್ಕ, ಮರಗಳ ಪ್ರದೇಶದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯ ಮತ್ತು ಪಿಲಿಕುಳ, ನದಿ ಮತ್ತು ಸಮುದ್ರ ಸೇರುವ ಜಾಗವಾದ ಬೆಟ್ಟಂಪಾಡಿ, ಚೌಗು ಪ್ರದೇಶ ಇರುವ ಕೆಂಜಾರು, ಕಾವೂರು, ಜೋಕಟ್ಟೆ ಇನ್ನಿತರ ಸ್ಥಳಗಳಲ್ಲಿ ಹಕ್ಕಿ ವೀಕ್ಷಕರ ತಂಡ ಮೂರು ದಿನಗಳಲ್ಲಿ ಭೇಟಿ ನೀಡಲಿದೆ ಎಂದು ವಿವರಿಸಿದರು.

ಇದನ್ನೂ ಓದಿ : CM Siddaramaiah : ಹಾವೇರಿಗೆ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಕ್ಯಾನ್ಸರ್ ಕೇಂದ್ರ: ಸಿದ್ದರಾಮಯ್ಯ ಘೋಷಣೆ
2018ರಲ್ಲಿ ರಮಾನಾಥ್ ರೈ ಅರಣ್ಯ ಸಚಿವರಾಗಿದ್ದ ವೇಳೆ ಮಂಗಳೂರಿನಲ್ಲಿ ಹಕ್ಕಿ ಹಬ್ಬ ಆಯೋಜಿಸಲಾಗಿತ್ತು ಎಂದು ಅವರು ನೆನಪಿಸಿದರು. ಹಕ್ಕಿ ಹಬ್ಬ 2026ರ ಉದ್ಘಾಟನೆ ಪಿಲಿಕುಳದ ಸ್ಕೌಟ್ಸ್ ಮತ್ತು ಗೈಡ್ಸ್ ಭವನದಲ್ಲಿ ನಡೆಯಲಿದೆ. ವಿಧಾನಸಭಾಧ್ಯಕ್ಷ ಯು.ಟಿ. ಖಾದರ್, ಅರಣ್ಯ ಸಚಿವ ಈಶ್ವರ ಖಂಡ್ರೆ, ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ನಿರೀಕ್ಷೆಯಿದೆ. ಈ ಬಾರಿ ಉತ್ಸವದ ಲೋಗೋದಲ್ಲಿ ಜಿಲ್ಲೆಯ ಕರಾವಳಿ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡುಬರುವ ವೈಟ್-ಬೆಲ್ಲೀಡ್ ಸೀ ಈಗಲ್ (ಬಿಳಿ ಹೊಟ್ಟೆಯ ಸಮುದ್ರ ಗರುಡ) ಪಕ್ಷಿಯನ್ನು ಅಳವಡಿಸಲಾಗುವುದು ಎಂದು ಶಲೆಟ್ ಪಿಂಟೋ ತಿಳಿಸಿದರು.
ಉಪ ಅರಣ್ಯ ಸಂರಕ್ಷಣಾಧಿಕಾರಿ ಆಂಟನಿ ಎಸ್. ಮೇರಿಯಪ್ಪ ಮಾತನಾಡಿ, ಹಕ್ಕಿ ಹಬ್ಬವು ಪಕ್ಷಿ ತಜ್ಞರು ಮತ್ತು ಆಸಕ್ತರಿಗೆ ಜ್ಞಾನ–ಮಾಹಿತಿ ವಿನಿಮಯದ ಪ್ರಮುಖ ವೇದಿಕೆಯಾಗಿ ರೂಪುಗೊಂಡಿದೆ. ಪ್ರತಿದಿನ ನಾಲ್ಕು ಪಕ್ಷಿ ವೀಕ್ಷಣಾ ಅವಧಿಗಳು ನಡೆಯಲಿದ್ದು, ಭಾಗವಹಿಸುವವರನ್ನು 10 ತಂಡಗಳಾಗಿ ವಿಭಜಿಸಿ ಎಲ್ಲಾ ಗುರುತಿಸಲಾದ ಮಾರ್ಗಗಳನ್ನು ಕವರ್ ಮಾಡಲಾಗುವುದು. ಪ್ರತಿ ಅವಧಿಯ ಬಳಿಕ ತಜ್ಞರೊಂದಿಗೆ ಸಂವಾದ ನಡೆಯಲಿದೆ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 420 ಪಕ್ಷಿ ಜಾತಿಗಳು, ಇದರಲ್ಲಿ 40 ವಲಸೆ ಪಕ್ಷಿಗಳು ದಾಖಲಾಗಿವೆ ಎಂದರು.
ಮಾನವ–ವನ್ಯಜೀವಿ ಸಂಘರ್ಷ ಕುರಿತು ಮಾತನಾಡಿದ ಶಲೆಟ್ ಪಿಂಟೋ, ಹಾವು ಕಚ್ಚುವಿಕೆ ತಡೆ, ಹಾವು ಸಂರಕ್ಷಣೆ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಶಾಲೆಗಳಲ್ಲಿ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಮತ್ತಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ನಿಮ್ಮ ಆಸುಪಾಸಿನಲ್ಲಿ ನಡೆಯುವಂತಹ ಕಾರ್ಯಕ್ರಮ, ಸಭೆ ಹಾಗೂ ಸಾರ್ವಜನಿಕ ಸಮಸ್ಯೆಗಳ ಬಗ್ಗೆ ಫೋಟೋ ಸಹಿತ G1 News ಗೆ ಮಾಹಿತಿ ಕಳುಹಿಸಿ. ವಾಟ್ಸಪ್: 7353833811, ಇ-ಮೇಲ್- g1newsdpt@gmail.com

